ಹರೇಕಳ: ಕಾಂ. ಕಾಮಣ್ಣ ರೈ ಸ್ಮಾರಕ ಕಟ್ಟಡ ಉದ್ಘಾಟನೆ
ಕೊಣಾಜೆ: ಜಾತಿ, ಧರ್ಮ, ಹಿಜಾಬ್ ವಿಷಯ ಸೇರಿದಂತೆ ಇಂದು ಅನೇಕ ವಿಷಯಗಳಲ್ಲಿ ವಿವಾದ ಸೃಷ್ಟಿಯಾಗುತ್ತಿದೆ. ಇದೆಲ್ಲ ಅಧಿಕಾರಕ್ಕಾಗಿ ಮಾಡುತ್ತಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇವೆಲ್ಲವನ್ನು ಬಿಟ್ಟು ಭಾರತವು ಸೌಹಾರ್ದತೆಯ ಹಾಗೂ ಅಭಿವೃದ್ಧಿಯ ರಾಷ್ಟ್ರವಾಗಬೇಕು ಎನ್ನುವುದು ಡಿವೈಎಫ್ಐ ಮುಖ್ಯ ಗುರಿಯಾಗಿದೆ ಎಂದು ಸಂಸದರು ಹಾಗೂ ಡಿವೈಎಫ್ ಐ ಅಖಿಲ ಭಾರತ ಅಧ್ಯಕ್ಷರಾದ ಕಾ. ಎ.ಎ.ರಹೀಂ ಅವರು ಹೇಳಿದರು.
ಅವರು ರವಿವಾರ ಹರೇಕಳದಲ್ಲಿ ನಿರ್ಮಾಣಗೊಂಡ ಹರೇಕಳ ಕಾಂ.ಕಾಮಣ್ಣ ರೈ ಸ್ಮಾರಕ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಯುವ ಜನಸಮಾವೇಶದಲ್ಲಿ ಮಾತನಾಡಿದರು.
ಡಿವೈಎಫ್ಐ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲಾ ಜಾತಿ ಧರ್ಮಗಳಿಗೂ ಸಮಾನ ನ್ಯಾಯ ಒದಗಿಸುವ ಪಕ್ಷವಾಗಿದೆ. ಈಗಾಗಲೇ ಭಾರತದ ಇತಿಹಾಸದಲ್ಲಿ ಡಿವೈಎಫ್ ಐ ಪಕ್ಷ ಜಾತ್ಯಾತೀತ ಶಕ್ತಿಯಾಗಿಯಾಗಿ ಬೆಳೆದುನಿಂತಿದೆ. ನಾವು ಕೋಮುವಾದಿ ಶಕ್ತಿಗಳನ್ನು ದೂರವಿಟ್ಟು ಅಭಿವೃದ್ಧಿ ಹಾಗೂ ಸೌಹಾರ್ದತೆಯ ರಾಷ್ಟ್ರವನ್ನು ಕಟ್ಟೋಣ ಎಂದರು.
ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಹರೇಕಳ ದಲ್ಲಿ ಕಾಮಣ್ಣ ರೈ ಅವರ ಕಟ್ಟಡ ಎದ್ದು ನಿಂತಿರುವುದು ಸಮಾಜಪರ, ತ್ಯಾಗಮಯ ಬದ್ಧತೆಯ ಹೋರಾಟಕ್ಕೆ ಸಾಕ್ಷಿಯಾಗಿದೆ ಹಾಗೂ ಸಮಾಜಪರ ಬದುಕು ಅವರ ನೆನಪನ್ನು ಇಂದಿಗೂ ಶಾಶ್ವತವಾಗಿಸಿದೆ ಎಂದರು.
ಉಳ್ಳಾಲದಲ್ಲಿ ಆರು ಮೆಡಿಕಲ್ ಕಾಲೇಜು ಇದೆ ಇದು ನಮ್ಮ ಹೆಮ್ಮೆ ಎಂದು ಕೆಲವು ನಾಯಕರು ಹೇಳುತ್ತಾರೆ. ಅದರೆ ಇಲ್ಲಿಯ ಬಡಮಕ್ಕಳಿಗೆ ಉಚಿತ ಶಿಕ್ಷಣ ಸಿಗುತ್ತದೆಯೇ? ಇವೆಲ್ಲ ಖಾಸಗಿ ಮೆಡಿಕಲ್ ಕಾಲೇಜು. ನಮಗೆ ಸರ್ಕಾರಿ ಮೆಡಿಕಲ್ ಕಾಲೇಜಿನ ಅಗತ್ಯವಿದೆ. ಇಂದು ಶಿಕ್ಷಣ ಉದ್ಯೋಗ ವ್ಯಾಪಾರದ ಸರಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಉಳ್ಳಾಲ ವಲಯ ಅಧ್ಯಕ್ಷರಾದ ರಫೀಕ್ ಹರೇಕಳ, ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷರಾದ ಜೀವನ್ ಕುತ್ತಾರ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸುನಿಲ್ ತೇವುಲ,ಯುವ ವಕೀಲ ನಿತಿನ್ ಕುತ್ತಾರ್, ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಅಧ್ಯಕ್ಷರಾದ ಬಶೀರ್ ಲಚ್ಚಿಲ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ನಿತಿನ್ ಕುತ್ತಾರ್ ಸ್ವಾಗತಿಸಿದರು. ರಿಝ್ವಾನ್ ಖಂಡಿಗ ವಂದಿಸಿದರು. ಸಂತೋಷ್ ಬಜಾಲ್ ವಂದಿಸಿದರು.