×
Ad

ವಿಧಾನಸಭಾ ಚುನಾವಣೆ | ಕ್ಷತ್ರಿಯ ಸಮಾಜಕ್ಕೆ 50 ಕ್ಷೇತ್ರಗಳಲ್ಲಿ ಟಿಕೆಟ್ ಮೀಸಲಿಡಲು ಆಗ್ರಹ

Update: 2023-02-24 11:49 IST

ಬೆಂಗಳೂರು, ಫೆ. 24: ಕ್ಷತ್ರಿಯ ಸಮುದಾಯದ ಒಳಪಂಗಡಗಳು ರಾಜ್ಯದ 60ರಿಂದ 75 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಬಲವಾಗಿದ್ದು, ಈ ಬಾರಿಯ ಸಾರ್ವತ್ರಿಕ ಚುನಾವಣೆಯ ಚುನಾವಣೆಯಲ್ಲಿ ಕನಿಷ್ಠ 50 ಕ್ಷೇತ್ರಗಳಲ್ಲಿ ಕ್ಷತ್ರಿಯರಿಗೆ ಎಲ್ಲಾ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟ ಆಗ್ರಹಿಸಿದೆ.

ಗುರುವಾರ ನಗರದ ಅರಮನೆ ರಸ್ತೆಯ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್, ರಾಜಕೀಯ ಪಕ್ಷಗಳು ಕ್ಷತ್ರಿಯರ ಜನಸಂಖ್ಯೆಗನುಗುಣವಾಗಿ ನಮ್ಮವರಿಗೆ ಟಿಕೆಟ್ ನೀಡುತ್ತಿಲ್ಲ. ಹೀಗಾಗಿ ಶಾಸನಸಭೆಯಲ್ಲಿ ನಮ್ಮ ಪ್ರಾತಿನಿಧ್ಯ ಸಂಪೂರ್ಣ ಸೊರಗಿದೆ. ಹೀಗಾಗಿ ಈ ಬಾರಿ ರಾಜಕೀಯ ಪಕ್ಷಗಳು ಸಮುದಾಯದ ಆಕಾಂಕ್ಷಿಗಳಿಗೆ ಹೆಚ್ಚು ಟಿಕೆಟ್ ನೀಡದಿದ್ದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕ್ಷತ್ರಿಯ ಸಮುದಾಯ ತನ್ನ 38 ಒಳಪಂಗಡಗಳೊಂದಿಗೆ ಮುಂದೆ ಸಾಗುತ್ತಿದೆ. ಹೀಗಿರುವಾಗ ಸರಕಾರ ಕ್ಷತ್ರಿಯರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ರಾಜಕೀಯ ಪಕ್ಷಗಳು ಕ್ಷತ್ರಿಯ ಪ್ರಾಬಲ್ಯದ ಕ್ಷೇತ್ರಗಳಲ್ಲಿ ತನ್ನದೇ ಆದ ನಿರ್ಧಾರ ಕೈಗೊಳ್ಳಲಿದೆ ಎಂದ ಅವರು,ರಾಜ್ಯದಲ್ಲಿ ಮರಾಠ, ತಿಗಳ ಕ್ಷತ್ರಿಯ, ಭಾವಸಾರ ಕ್ಷತ್ರಿಯ, ರಾಮ ಕ್ಷತ್ರಿಯ, ಅರಸು, ರಜಪೂತ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯರು, ರಾಜು ಕ್ಷತ್ರಿಯರು, ತೊಗಟವೀರ ಕ್ಷತ್ರಿಯ, ಬಂಜಾರ ಕ್ಷತ್ರಿಯ ಹೀಗೆ ಅನೇಕ ಪ್ರಬಲ ಒಳಪಂಗಡಗಳು, ಇನ್ನೂ ಸಣ್ಣ ಪಂಗಡಗಳು ಕ್ಷತ್ರಿಯ ಸಮುದಾಯದಡಿ ಬರುತ್ತವೆ ಎಂದರು.

ಈ ಸಮುದಾಯಗಳ ಹಲವಾರು ಆಕಾಂಕ್ಷಿಗಳು ವಿವಿಧ ಪಕ್ಷಗಳಲ್ಲಿದ್ದು ಅನೇಕ ಕ್ಷೇತ್ರಗಳಲ್ಲಿ ಅವರು ಕೆಲಸ ಮಾಡುತ್ತಿರುವ ಪಕ್ಷದ ಟಿಕೆಟ್ ಕೇಳುತ್ತಿದ್ದಾರೆ. ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರಿಗೆ ಆ ಪಕ್ಷಗಳು ಟಿಕೆಟ್ ಕೊಡಲೇಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಮಾಜಿ ಸಚಿವ ಕೃಷ್ಣ ಪಾಲೇಮಾರ್, ಮಾಜಿ ಶಾಸಕರಾದಲಕ್ಷ್ಮೀ, ಎಂ.ಜಿ.ಮುಳೆ, ವಿಮಾನ ನಿಲ್ದಾಣ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣ, ಕರ್ನಾಟಕ ಮರಾಠ ಪರಿಷತ್ ಅಧ್ಯಕ್ಷ ಸುರೇಶ್ ರಾವ್ ಸಾಟೆ, ನೇಕಾರ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ಬೆಳ್ತುರು, ತಿಗಳ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಸುಬ್ಬಣ್ಣ, ಒಕ್ಕೂಟದ ಕಾರ್ಯದರ್ಶಿ ರೋಹಿತ್ ಮುನಿರಾಜು ಸೇರಿದಂತೆ ಪ್ರಮುಖರಿದ್ದರು.

Similar News