ಸಿ.ಟಿ.ರವಿಗೆ ಉಚಿತ ಮಾಂಸದ ಊಟ ಪಾರ್ಸೆಲ್ ಕಳುಹಿಸಿದ ಕಾಂಗ್ರೆಸ್

Update: 2023-02-24 09:32 GMT

ಬೆಂಗಳೂರು: 'ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು  ಕ್ಷೇತ್ರದ ಶಾಸಕ ಸಿ.ಟಿ. ರವಿ ಅವರಿಗೆ ಇನ್ನು ಮುಂದೆ ಯಾವುದೇ ದೇವಾಲಯಕ್ಕೂ ಪ್ರವೇಶಿಸದಂತೆ  ತಡೆಯಬೇಕು, ತಕ್ಷಣ ಮಜರಾಯಿ ಇಲಾಖೆ ಸಿ.ಟಿ. ರವಿಗೆ ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿಷೇಧಿಸಬೇಕು' ಎಂದು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. 

ನಗರದ್ಲಲಿ ಇಂದು ಬೆಳಗ್ಗೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, 'ಸಿ.ಟಿ.ರವಿ ಬಾಯಿ ತೆರೆದರೆ ಸುಳ್ಳು ಎಂಬುದು ಇಂದು ಮತ್ತೆ ಬಹಿರಂಗವಾಗಿದೆ. ಧಾರ್ಮಿಕ ಹೆಸರಿನಲ್ಲಿ ರಾಜಕೀಯ ನಡೆಸುವ ಸಿ.ಟಿ.ರವಿ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿ ನಂತರ ನಾನು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಹೇಳಿ ನಂತರ ಮಾಧ್ಯಮಗಳಲ್ಲಿ ದೇವಸ್ಥಾನ ಪ್ರವೇಶಿಸಿರುವುದು  ಬಹಿರಂಗವಾದ ನಂತರ ನಾನು ಹೋಗಿದ್ದೆ ಎಂದು ಹೇಳಿದ್ದಾರೆ. ಇಂತಹ ಒಬ್ಬ ಸುಳ್ಳುಗಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದು ಬಿಜೆಪಿ ಪಕ್ಷದ ಅವನತಿಗೆ ಮೂಲ ಕಾರಣವಾಗಿದೆ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

'ಪ್ರತಿನಿತ್ಯ ಸುಳ್ಳನ್ನೇ ಸತ್ಯ ಮಾಡುವ ಪರಿಪಾಠವನ್ನು ಮೈಗೂಡಿಸಿಕೊಂಡಿರುವ ಸಿ.ಟಿ. ರವಿ ತನ್ನ ತಪ್ಪನ್ನ ಮತ್ತೊಬ್ಬರ ಮೇಲೆ ಹೊರೆಸುವ ನಿಸ್ಸೀಮ  ರಾಜಕಾರಣಿ ಅದರಲ್ಲೂ ಬಿಜೆಪಿಗೆ ಇಂತಹ ಸುಳ್ಳುಗಾರನೇ ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷ.  ಸಿ.ಟಿ ರವಿ ಧಾರ್ಮಿಕ ಹೆಸರಿನಲ್ಲಿ ನಡೆಸಿದ ಅನಾಚಾರಗಳು ಇಂದು ಬಹಿರಂಗವಾಗಿದೆ' ಎಂದು ಟೀಕಿಸಿದರು.

 ಮಾಂಸದ ಊಟ ಪಾರ್ಸೆಲ್: ಪ್ರತಿಭಟನೆ ವೇಳೆ  ಸಿ.ಟಿ ರವಿ ನಲ್ಲಿ ಹೊಟೇಲ್ ಎಂದು ಪ್ರಾರಂಭಿಸಿ ಸಿ.ಟಿ.ರವಿಗೆ ಉಚಿತವಾಗಿ ಮಾಂಸಾಹಾರಿ ಊಟವನ್ನು ವಿತರಿಸಲಾಯಿತು. ಅಲ್ಲದೇ, ಸಿಟಿ ರವಿ ಮಾಂಸಾಹಾರಿ ಊಟ ತಿನ್ನುವ ಬಗ್ಗೆ ಅಣಕು ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿಶೇಖರ್. ಎ.ಆನಂದ್. ಬಿ. ಮಂಜುನಾಥ್.ಈ.ಶೇಖರ್. ಉಮೇಶ್. ಪುಟ್ಟರಾಜು. ಪ್ರಶಾಂತ. ಅನಿಲ್ ಕುಮಾರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Similar News