ಗುಜರಾತ್‌ ನಲ್ಲಿ ಯಾಕೆ ಇನ್ನೂ ಎಸಿಬಿಯನ್ನು ಮುಚ್ಚಿಲ್ಲ?: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

''ಬೇರೆ ರಾಜ್ಯಗಳಲ್ಲಿ ಎಸಿಬಿ ಇಟ್ಕೊಂಡು ಇಲ್ಲಿ ಹರಿಶ್ಚಂದ್ರನ ಮೊಮ್ಮಕ್ಕಳ ರೀತಿ ಮಾತಾಡ್ತಾರೆ''

Update: 2023-02-24 10:00 GMT

ಬೆಂಗಳೂರು: 'ಗುಜರಾತ್‌ ನಲ್ಲಿ ಎಸಿಬಿ ಇದೆ, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? ಅಲ್ಲಿ ಯಾಕೆ ಎಸಿಬಿಯನ್ನು ಇನ್ನೂ ಮುಚ್ಚಿಲ್ಲ? ಗೋವಾ, ಅಸ್ಸಾಂ, ಮಧ್ಯಪ್ರದೇಶಗಳಲ್ಲಿ ಯಾಕಿನ್ನು ಎಸಿಬಿ ಮುಚ್ಚಿಲ್ಲ? ದೇಶದ 16 ರಾಜ್ಯಗಳು ಲೋಕಾಯುಕ್ತದ ಜೊತೆಗೆ ಎಸಿಬಿಯನ್ನು ಹೊಂದಿದೆ. ತಮ್ಮನ್ನು ತಾವು ಚೌಕಿದಾರ್‌ ಎಂದು ಕರೆದುಕೊಳ್ಳುವವರು ಯಾಕೆ ಇನ್ನು ಲೋಕಪಾಲ್‌ ಅನ್ನು ಮಾಡಿಲ್ಲ?' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಹಿಂದಿನ ಕಾಂಗ್ರೆಸ್‌ ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸುಳ್ಳು ಹೇಳಿರುವುದು ಖಂಡನೀಯ' ಎಂದರು.

''ಭ್ರಷ್ಟಾಚಾರದ ವ್ಯವಸ್ಥೆಗೆ ಹೆಚ್ಚು ಶಕ್ತಿ ಬಂದಿದ್ದರೆ ಅದು ಬಿಜೆಪಿ ಅವರಿಂದ. 2018ರ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದ ಕೂಡಲೇ ಎಸಿಬಿ ರದ್ದು ಮಾಡುವುದಾಗಿ ಹೇಳಿದ್ದರು, ರದ್ದು ಮಾಡಿದ್ರಾ? ಕೋರ್ಟ್‌ ನವರು ಮಾಡಿದ್ದು. ಮೂರು ವರ್ಷಗಳ ಬಿಜೆಪಿ ಸರ್ಕಾರ ಎಸಿಬಿ ಮುಚ್ಚದೆ ಸುಮ್ಮನಿದ್ದದ್ದು ಯಾಕೆ? ಅಡ್ವೋಕೇಟ್‌ ಜನರಲ್‌ ಮೂಲಕ ಎಸಿಬಿ ರಚನೆಯನ್ನು ಸಮರ್ಥನೆ ಮಾಡಿಸಿರುವುದು ಯಾಕೆ? ಕೋರ್ಟಿನಲ್ಲಿ ಹಿಂದಿನ ಸರ್ಕಾರ ತಪ್ಪು ಮಾಡಿದೆ, ಎಸಿಬಿ ರದ್ದು ಮಾಡಿ ಎಂದು ಹೇಳಿಸಬೇಕಿತ್ತು'' ಎಂದು ಹೇಳಿದರು.

''ಎಸಿಬಿ ಪರವಾಗಿರುವವರು ಬಿಜೆಪಿಯವರೇ. ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಎಸಿಬಿ ಇಟ್ಟುಕೊಂಡಿದ್ದಾರೆ, ಇಲ್ಲಿ ಮಾತ್ರ ಹರಿಶ್ಚಂದ್ರನ ಮೊಮ್ಮಕ್ಕಳ ಹಾಗೆ ಮಾತನಾಡುತ್ತಾರೆ'' ಎಂದು ವಾಗ್ದಾಳಿ ನಡೆಸಿದರು. 

Similar News