ಇಳಿವಯಸ್ಸಿನಲ್ಲೂ ಸಕ್ರಿಯರಾಗಿರುವ ಎಚ್. ಡಿ ದೇವೇಗೌಡ ನಮಗೆಲ್ಲ ಆದರ್ಶ: ಸದನದಲ್ಲಿ ಬಿಎಸ್ ವೈ ವಿದಾಯ ಭಾಷಣ

► ''ಸ್ಪೀಕರ್ ಕಾಗೇರಿ ಮತ್ತೆ ಮಂತ್ರಿಯಾಗಬೇಕಿದೆ'' ► ''ನೀವೆಲ್ಲರೂ ಆಯ್ಕೆಯಾಗಿ ಬಂದು ಇನ್ನೂ ಒಳ್ಳೆಯ ಕೆಲಸ ಮಾಡಿ...''

Update: 2023-02-24 11:39 GMT

ಬೆಂಗಳೂರು: 15ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಇಂದು ಸದಸ್ಯರು ತಮ್ಮ ಅನುಭವ, ಅನಿಸಿಕೆ ಹಾಗೂ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಹಿರಿಯ ನಾಯಕರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿ, 'ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ನಮಗೆಲ್ಲ ಆದರ್ಶ. ಈ ವಯಸ್ಸಿನಲ್ಲೂ ಸಹ ರಾಷ್ಟ್ರ, ರಾಜ್ಯದ ವಿಚಾರಗಳ ಕುರಿತು ಚಿಂತನೆ ಮಾಡುತ್ತಾರೆ ಎಂದರೆ ಅವರಿಂದ ಕಲಿಯುವುದು ಬಹಳಷ್ಟಿದೆ' ಎಂದು ಹೇಳುತ್ತಾ ಭಾವುಕರಾದರು. 

''ಕಾಗೇರಿಯವರು ಸದನವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮತ್ತೊಮ್ಮೆ ಗೆದ್ದು ಬಂದು ಸಭಾಧ್ಯಕ್ಷರ ಪೀಠದಲ್ಲಿ ಕುಳಿತುಕೊಳ್ಳದೇ, ಸಚಿವರಾಗಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿ'' ಎಂದು ಹಾರೈಸಿದರು.  

''ಸಿದ್ದರಾಮಯ್ಯನವರು ಅನೇಕ ವಿಚಾರಗಳನ್ನು ಅಧ್ಯಯನ ನಡೆಸಿ ಮಾರ್ಗದರ್ಶನ ಮಾಡಿದ್ದಾರೆ, ಎ.ಟಿ. ರಾಮಸ್ವಾಮಿ ಸಹ ಮಾರ್ಗದರ್ಶನ ಮಾಡಿದ್ದಾರೆ. ಮುಂದೆ ನೀವೆಲ್ಲರೂ ಆಯ್ಕೆಯಾಗಿ ಬಂದು ಇನ್ನೂ ಒಳ್ಳೆಯ ಕೆಲಸ ಮಾಡಲು ನಾನು ಹಾರೈಸುತ್ತೇನೆ'' ಎಂದು ಹೇಳಿದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹಿತ ಎಲ್ಲರೂ ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿದರು. 

''ನನ್ನ ಹುಟ್ಟು ಹಬ್ಬ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಅದೇ ದಿನ  (ಫೆ.27) ವಿಮಾನ ನಿಲ್ದಾಣ ಉದ್ಘಾಟಿಸಲಿದ್ದೇನೆ ಎಂದು  ಮೋದಿ ಅವರು ಹೇಳಿರುವುದು ನನಗೆ ಅತೀವ ತೃಪ್ತಿ, ಸಂತೋಷ ತಂದಿರುವ ವಿಷಯ'' ಎಂದು ಹೇಳಿದರು.  

Full View

Similar News