'ನಾಲಿಗೆ ಬಿಗಿ ಹಿಡಿದು ಮಾತನಾಡಿ': ಸಿ.ಟಿ.ರವಿ ಪ್ರತಿಕೃತಿ ದಹಿಸಿ ಜೆಡಿಎಸ್ ಆಕ್ರೋಶ

Update: 2023-02-24 12:09 GMT

ಬೆಂಗಳೂರು, ಫೆ. 24: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಇಲ್ಲಿನ ಮೌರ್ಯ ಹೋಟೆಲ್ ಸಮೀಪದ ಗಾಂಧಿ ಪ್ರತಿಮೆ ಬಳಿ ಸಿ.ಟಿ.ರವಿ ಪ್ರತಿಕೃತಿ ದಹಿಸಿ, ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ‘ಇನ್ನಾದರೂ ಸಿ.ಟಿ.ರವಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ, ಇಲ್ಲವಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿರ ಮುಖಂಡರು, ‘ಮಾಜಿ ಪ್ರಧಾನಿ ದೇವೇಗೌಡರು ಜೆಡಿಎಸ್‍ನ ಸರ್ವೋಚ್ಚ ನಾಯಕರು. ಇಡೀ ರಾಜ್ಯದ ಜನರು ಅಪಾರ ಗೌರವ ಪ್ರೀತಿ ಇಟ್ಟುಕೊಂಡಿರುವ ಮೇರು ನಾಯಕ. ಸ್ವತಃ ಪ್ರಧಾನಿ ಮೋದಿ ಅವರೇ ಅತ್ಯಂತ ಗೌರವದಿಂದ ಕಾಣುವ ನಾಯಕರು ದೇವೇಗೌಡರು. ಅಂತಹವರ ಬಗ್ಗೆ ಸಿ.ಟಿ.ರವಿ ಕೀಳಾಗಿ ಮಾತನಾಡುವುದು ಖಂಡನೀಯ’ ಕಿಡಿಕಾರಿದರು.

ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಏಕೈಕ ಕನ್ನಡಿಗರು ದೇವೇಗೌಡರು. ಅವರನ್ನು ಅಪಮಾನಿಸುವುದು ಎಂದರೆ ಸಮಸ್ತ ಕನ್ನಡಿಗರನ್ನು ಅಪಮಾನಿಸುವುದೇ ಆಗಿದೆ. ಸಿ.ಟಿ.ರವಿ ಬೇಷರತ್ತಾಗಿ ದೇವೆಗೌಡರ ಕ್ಷಮೆ ಕೇಳಬೇಕು. ಇಲ್ಲವಾದರೆ ಜೆಡಿಎಸ್‍ನಿಂದ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

‘ಕಷ್ಟ ಬಂದಾಗ ಕುಮಾರಸ್ವಾಮಿ ಅವರ ಮುಂದೆ ಕೈಕಟ್ಟಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬ ಅಧಿಕಾರ ಸಿಕ್ಕ ಕೂಡಲೇ ಆ ಕುಟುಂಬದ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು ಅವರ ಕೊಳಕು ಸಂಸ್ಕಾರವನ್ನು ತೋರಿಸುತ್ತದೆ. ಇನ್ನಾದರೂ ಹಿರಿಯರ ಬಗ್ಗೆ ಹೇಗೆ ಮಾತನಾಡಬೇಕೆಂಬುದನ್ನು ಕಲಿಯಬೇಕು’ ಎಂದು ಸಲಹೆ ಮಾಡಿದರು.

Similar News