ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಪ್ರಕರಣ: ತಡೆಯಾಜ್ಞೆ ತೆರವು ಕೋರಿದ ಸಿಬಿಐ

Update: 2023-02-24 15:18 GMT

ಬೆಂಗಳೂರು, ಫೆ. 24: ಆದಾಯ ಮೀರಿ ಆಸ್ತಿ ಸಂಪಾದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಲಾಗಿರುವ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಬೇಕು ಎಂದು ಕೋರಿ ಸಿಬಿಐ ಹೈಕೋರ್ಟ್‍ಗೆ ಮನವಿ ಮಾಡಿದೆ. 

ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಈ ಕುರಿತಂತೆ ಶುಕ್ರವಾರ, ಹೈಕೋರ್ಟ್‍ನ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿಗೆ ತಡೆ ಆದೇಶ ತೆರವು ಕೋರಿದ ಮನವಿಯನ್ನು ಸಲ್ಲಿಸಿದರು. ಜತೆಗೆ, ತನಿಖೆಯ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಆದರೆ, ತನಿಖೆಯ ಪ್ರಗತಿ ವರದಿ ಸ್ವೀಕರಿಸಲು ನಿರಾಕರಿಸಿದ ನ್ಯಾಯಪೀಠ ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿ ಆದೇಶಿಸಿತು.

ಮನವಿಯಲ್ಲಿರುವ ಅಂಶಗಳು: ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 19(3)(ಸಿ) ಅನ್ನು 2018ರಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರ ಅನುಸಾರ ತನಿಖೆಯನ್ನು ಯಾವುದೇ ಕೋರ್ಟ್ ತಡೆಯುವಂತಿಲ್ಲ. ಹೀಗಾಗಿ, ಹೈಕೋರ್ಟ್ ನೀಡಿರುವ ತಡೆ ಆದೇಶವನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಅರ್ಜಿದಾರರು ಎಫ್‍ಐಆರ್ ನಲ್ಲಿ ಕುಟುಂಬದ ಸದಸ್ಯರ ಹೆಸರುಗಳು ಇಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಕಲಂ 13 (ಎ) (ಇ) ಅನ್ವಯ ಕುಟುಂಬದ ಸದಸ್ಯರೂ ನಿಶ್ಚಿತವಾಗಿ ಈ ಕಾಯ್ದೆಯ ಅಡಿ ತನಿಖಾ ವ್ಯಾಪ್ತಿಗೆ ಒಳಪಡುತ್ತಾರೆ. ಅಲ್ಲದೆ, ತನಿಖೆಯ ವ್ಯಾಪ್ತಿಯನ್ನು ಇಂತಿಷ್ಟೇ ಮತ್ತು ಹೀಗೇ ಇರಬೇಕು ಎಂಬುದನ್ನು ಆರೋಪಿ ನಿಶ್ಚಿಯಿಸುವುದು ಸಮಂಜಸವಲ್ಲ ಎಂದು ಸಿಬಿಐ ಪ್ರತಿಪಾದಿಸಿದೆ.

ಇದನ್ನೂ ಓದಿ: ಇಳಿವಯಸ್ಸಿನಲ್ಲೂ ಸಕ್ರಿಯರಾಗಿರುವ ಎಚ್. ಡಿ ದೇವೇಗೌಡ ನಮಗೆಲ್ಲ ಆದರ್ಶ: ಸದನದಲ್ಲಿ ಬಿಎಸ್ ವೈ ವಿದಾಯ ಭಾಷಣ

ಸಿಬಿಐ ಎಫ್‍ಐಆರ್ ದಾಖಲು ಮಾಡಿ ಈಗಾಗಲೇ ಎರಡು ವರ್ಷಗಳಾಗಿವೆ. ಆದರೆ, ಅರ್ಜಿದಾರರು ಈಗ ಹೈಕೋರ್ಟ್‍ನಲ್ಲಿ ಆದೇಶವನ್ನು ಪ್ರಶ್ನಿಸುತ್ತಿದ್ದಾರೆ. ಅರ್ಜಿದಾರ ಆರೋಪಿ ಡಿ.ಕೆ.ಶಿವಕುಮಾರ್ ಸಂಬಂಧಿಯಾದ ಶಶಿಕುಮಾರ್ ಶಿವಣ್ಣ ಎಂಬುವರೂ ಈ ಹಿಂದೆ ಇದೇ ರೀತಿಯಲ್ಲಿ ಸರಕಾರ ಸಿಬಿಐ ತನಿಖೆಗೆ ಆದೇಶಿಸಿದ್ದನ್ನು ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್‍ನ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯನ್ನು 2022ರ ಜುಲೈ 22ರಂದು ವಜಾಗೊಳಿಸಿತ್ತು. ನಂತರ ವಿಭಾಗೀಯ ನ್ಯಾಯಪೀಠ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದಿತ್ತು ಎಂಬ ಅಂಶವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 

Similar News