ಹಿಂದುತ್ವದ ದಕ್ಷಿಣ ಪ್ರಯೋಗಾಲಯ

Update: 2023-06-30 05:55 GMT

ಪುಸ್ತಕದ ಇಂಗ್ಲಿಷ್ ಆವೃತ್ತಿಯ ಮುನ್ನುಡಿಯಲ್ಲಿ, ಜಾಕಿ ಅಸ್ಸೇಗ್ ತಮ್ಮ ಸಂಶೋಧನೆಯು, 'ಹಿಂದೂ, ಮುಸ್ಲಿಮರ ನಡುವಿನ 'ಯುದ್ಧ' ಎಂದು ಕರೆಯಲ್ಪಡುವ ಒಂದು ನಿಯಮವಲ್ಲ, ಆದರೆ ಅದು ಅನ್ಯದ್ವೇಷ ಮತ್ತು ಜನಾಂಗೀಯ-ರಾಷ್ಟ್ರೀಯತೆಯಲ್ಲಿ ಹುಟ್ಟಿಕೊಂಡ ಐತಿಹಾಸಿಕ ಸುಳ್ಳು ಎಂದು ಸಾಬೀತುಪಡಿಸುತ್ತದೆ ಎನ್ನುತ್ತಾರೆ. ದುರಂತವೆಂದರೆ, ಇದನ್ನು ಬರೆದ ನಂತರದ ವರ್ಷಗಳಲ್ಲಿ, ಈ ಐತಿಹಾಸಿಕ ಸುಳ್ಳೇ ಹೆಚ್ಚು ಅನುಯಾಯಿಗಳನ್ನು ಗೆದ್ದಿದೆ. ರಾಜಕೀಯದ ಮಟ್ಟದಲ್ಲಿ, 'ಹಿಂದೂ' ಮತಬ್ಯಾಂಕ್ ನಿರ್ಮಾಣ ಬಿಜೆಪಿಗೆ ಕ್ಷಿಪ್ರ ಚುನಾವಣಾ ಲಾಭವನ್ನು ತಂದಿದೆ. ದೈನಂದಿನ ಜೀವನದ ಮಟ್ಟದಲ್ಲಿ, ಇದು ವಿಭಿನ್ನ ನಂಬಿಕೆ ಸಂಪ್ರದಾಯಗಳ ಭಾರತೀಯರ ನಡುವಿನ ದ್ವೇಷವನ್ನು ಹೆಚ್ಚಿಸಿದೆ.



ಕಳೆದ ತಿಂಗಳು, ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಪುಸ್ತಕದಂಗಡಿಯಲ್ಲಿ ನಾನು ಭಾರತದ ಫ್ರೆಂಚ್ ವಿದ್ವಾಂಸರೊಬ್ಬರ ಪುಸ್ತಕ ಕೊಂಡುಕೊಂಡೆ. ಪಕ್ಕಾ ಅಕಾಡಮಿಕ್ ಮತ್ತು ಸುಮಾರು ಎರಡು ದಶಕಗಳ ಹಿಂದೆ ಪ್ರಕಟವಾದ ಕೃತಿಯಾಗಿದ್ದರೂ ಇದು ನೇರವಾಗಿ ವರ್ತಮಾನವನ್ನು ನಿರೂಪಿಸುತ್ತದೆ.
ಜಾಕಿ ಅಸ್ಸೇಗ್ ಅವರ "At the Confluence of Two Rivers: Muslims and Hindus in South India' ಉತ್ತರ ಕರ್ನಾಟಕದಲ್ಲಿನ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸಂಬಂಧದ ಸೂಕ್ಷ್ಮ ಸಂರಚನೆಯ ಕುಲಶಾಸ್ತ್ರೀಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಎರಡು ಸಮುದಾಯಗಳನ್ನು ಶಾಂತಿ ಮತ್ತು ಸೌಹಾರ್ದತೆಯಲ್ಲಿ ಒಟ್ಟುಗೂಡಿಸಿದ 'ಸಂಯೋಜಿತ ಸಂಸ್ಕೃತಿ' ಇತ್ತು ಎಂದು ವಸಾಹತುಪೂರ್ವ ಭಾರತದ ಪರಿಪೂರ್ಣ ಹಿಂದೂ-ಮುಸ್ಲಿಮ್ ಬಾಂಧವ್ಯ ಕುರಿತು ಮಾತನಾಡುವವರಿಗಿಂತ ಭಿನ್ನವಾಗಿ ಅಸ್ಸೇಗ್ ನಿರೂಪಣೆಯಿದೆ. ಆದರೂ, ದಾಖಲಾದ ಚರಿತ್ರೆಯಂತೆ, ಹಿಂದೂ, ಮುಸ್ಲಿಮರು ಹೆಚ್ಚೇನೂ ಸಂಘರ್ಷವಿಲ್ಲದೆ ನೆರೆಹೊರೆಯವರಾಗಿ ಇದ್ದರು ಎಂಬುದನ್ನು ಆತ ಹೇಳುತ್ತಾರೆ. ದೈನಂದಿನ ಜೀವನದಲ್ಲಿ, ಸಂಘರ್ಷಕ್ಕಿಂತ ಸಹಬಾಳ್ವೆ ಹೆಚ್ಚಾಗಿ ಗೋಚರಿಸುತ್ತದೆ. ಅವರ ಆರ್ಥಿಕ ಬದುಕು ಪರಸ್ಪರ ಅವಲಂಬಿತವಾಗಿತ್ತು, ಹಿಂದೂ ವ್ಯಾಪಾರಿಗಳು ಮುಸ್ಲಿಮರಿಗೆ ಹಾಗೂ ಮುಸ್ಲಿಮರು ಹಿಂದೂಗಳಿಗೆ ಸೇವೆ ಒದಗಿಸುತ್ತಿದ್ದರು. ಅವರು ಪ್ರತ್ಯೇಕ ವಸತಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ಅಂತರ್ ಧರ್ಮೀಯ ವಿವಾಹವೆಂಬುದು ಅಸ್ತಿತ್ವದಲ್ಲಿಯೇ ಇರಲಿಲ್ಲ. ಹತ್ತಿರದ ಸ್ನೇಹ ಕೂಡ ಅಪರೂಪವಾಗಿತ್ತು. ಹಿಂದೂ, ಮುಸ್ಲಿಮರು ಶತಮಾನಗಳಿಂದಲೂ ಬೀದಿಯಲ್ಲಿ, ಮಾರುಕಟ್ಟೆಯಲ್ಲಿ ಮತ್ತು ಎಲ್ಲೋ ಒಮ್ಮೆಮ್ಮೆ ಪುಣ್ಯಸ್ಥಳಗಳಲ್ಲೂ ಪರಸ್ಪರ ಸ್ಪರ್ಶಿಸಿ ನಡೆಯುತ್ತಿದ್ದರು.

ಪುಸ್ತಕದ ಒಂದು ಭಾಗ ಉತ್ತರ ಕರ್ನಾಟಕದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಭೇಟಿ ನೀಡುವ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಹೇಳುತ್ತದೆ. ಎಲ್ಲಾ ಗ್ರಾಮಸ್ಥರು ಪೀರ್‌ಗೆ ಗೌರವ ಸಲ್ಲಿಸುವ ಮುಸ್ಲಿಮ್ ಸಂತನ ರಸ್ತೆಬದಿಯ ದರ್ಗಾ ಕೂಡ ಅವುಗಳಲ್ಲಿ ಸೇರಿದೆ. ಕೆಲವು ಹಿಂದೂಗಳು, ತಮ್ಮ ಮುಸ್ಲಿಮ್ ಬಂಧುಗಳ ಉದಾಹರಣೆಯನ್ನು ಅನುಸರಿಸುತ್ತಾರೆ. ಹೊಸ ಉದ್ಯಮವನ್ನು ಪ್ರಾರಂಭಿಸುವ ಮೊದಲು ಮುಸ್ಲಿಮ್ ಸಂತನ ಆಶೀರ್ವಾದ ಪಡೆಯಲು ಎಂದಿಗೂ ಮರೆಯುವುದಿಲ್ಲ.
ಅಸ್ಸೇಗ್ ದಾಖಲಿಸಿದ ಧಾರ್ಮಿಕ ಸಾಮರಸ್ಯದ ಅತ್ಯಂತ ಆಸಕ್ತಿದಾಯಕ ಉದಾಹರಣೆಯೆಂದರೆ, ರಾಜಬಾಗ್ ಸವಾರ್ ಎಂಬ ಜಾನಪದ ನಾಯಕನ ಪುಣ್ಯಸ್ಥಳಗಳು. ಆತನನ್ನು ಹಿಂದೂಗಳು ಗುರು ಎಂದೂ, ಮುಸ್ಲಿಮರು ಸಂತ ಎಂದೂ ಪರಿಗಣಿಸುತ್ತಾರೆ.
ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರೊಫೆಸರ್ ಅಸ್ಸೇಗ್ ಪುಸ್ತಕವನ್ನು ಓದುತ್ತಿದ್ದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾದ ಬಿಜೆಪಿ ತನ್ನ ಪ್ರಚಾರವನ್ನು ಹಿಂದೂಗಳು ವರ್ಸಸ್ ಮುಸ್ಲಿಮರು ಎಂದೇ ಮಾಡುವುದನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡಿದೆ. ಈ ನಿರ್ಧಾರವನ್ನು ಒಂದು ವರ್ಷದ ಹಿಂದೆ ತೆಗೆದುಕೊಳ್ಳಲಾಗಿದೆ. ಹಾಗಾಗಿ ಹಿಜಾಬ್, ಹಲಾಲ್ ಮತ್ತು ಹಿಂದೂ, ಮುಸ್ಲಿಮರ ನಡುವಿನ ಪ್ರೇಮಸಂಬಂಧಗಳ ಸುತ್ತಲಿನ ವಿವಾದಗಳನ್ನು ಸಂಘ ಪರಿವಾರ ಮತ್ತದರ ಘಟಕಗಳು ಪ್ರಚೋದಿಸುತ್ತಿವೆ ಮತ್ತು ಜೀವಂತವಾಗಿರಿಸಿವೆ. ರಾಜ್ಯದಲ್ಲಿ ಹಿಂದೂಗಳು ಮುಸ್ಲಿಮರ ಬಗ್ಗೆ ಭಯಭೀತರಾಗುವಂತೆ ಮತ್ತು ಅನುಮಾನದಿಂದ ಅವರನ್ನು ನೋಡುವಂತೆ ಮಾಡುವುದು ಬಿಜೆಪಿಯ ಮುಖ್ಯ ಚುನಾವಣಾ ತಂತ್ರವಾಗಿದೆ.
ಜುಲೈ 2019ರಲ್ಲಿ ಆಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಭಾಗವಾಗಿದ್ದ ಶಾಸಕರನ್ನು ಸೆಳೆಯುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಅಂದಿನಿಂದ ಮೂರೂವರೆ ವರ್ಷಗಳಲ್ಲಿ ರಾಜ್ಯ ಸರಕಾರದ ಸಾಧನೆ ಸಂಪೂರ್ಣ ಕೆಳಮಟ್ಟದಲ್ಲಿದೆ. ಭ್ರಷ್ಟಾಚಾರದ ಆರೋಪಗಳು ಬೇಕಾದಷ್ಟಿವೆ. ಕಳೆದ ವರ್ಷ ಆಗಸ್ಟ್‌ನಲ್ಲಿ ರಾಜ್ಯದ ರಾಜಧಾನಿ ಮತ್ತು ದೇಶದ ಐಟಿ ಉದ್ಯಮದ ಹೆಗ್ಗುರುತಿಗೆ ಧಕ್ಕೆತಂದ ಸಂಪೂರ್ಣ ಸ್ವಯಂಕೃತಾಪರಾಧದ ಪರಿಣಾಮವಾಗಿ ಉಂಟಾದ ಪ್ರವಾಹದ ವೇಳೆ ಆಡಳಿತಾತ್ಮಕ ಅಸಮರ್ಥತೆಯ ಪುರಾವೆಗಳು ಎದ್ದುಕಂಡಿವೆ.
ಇಂಥ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ಹಿಂದೂ, ಮುಸ್ಲಿಮ್ ಪ್ರಶ್ನೆಯನ್ನು ಮುಂದೆ ಮಾಡುತ್ತದೆಂದು ಕೆಲವರು ವಾದಿಸುತ್ತಾರೆ. ಆದರೂ, ಇದು ಸಿದ್ಧಾಂತದ ವಿಷಯವಾಗಿದೆ. ಕರ್ನಾಟಕ ರಾಜಕೀಯವನ್ನು ಬಹಳ ಸಮಯದಿಂದ ಕಂಡಿರುವ ಪ್ರೊ. ಜೇಮ್ಸ್ ಮ್ಯಾನರ್ 'ದಿ ವೈರ್'ಗೆ ಬರೆದ ಲೇಖನದಲ್ಲಿ, ಕೋಮು ಧ್ರುವೀಕರಣದ ಬಿಜೆಪಿಯ ಪ್ರಯತ್ನಗಳ ಬಗ್ಗೆ ಹೇಳುತ್ತ, ಹಲವು ತಿಂಗಳುಗಳಿಂದ ಇದನ್ನು ಬಲವಂತವಾಗಿ ಮತ್ತು ವ್ಯವಸ್ಥಿತವಾಗಿ ಉಳಿಸಿಕೊಂಡಿದೆ ಮತ್ತು ಇದು ಇತರ ರಾಜ್ಯಗಳಲ್ಲಿ ವಿರಳವಾಗಿ ಕಂಡುಬರುವ ಮಟ್ಟವನ್ನು ತಲುಪಿದೆ ಎಂದು ಬರೆಯುತ್ತಾರೆ. ಈ ಕಠಿಣ ಹಿಂದುತ್ವದ ತಲೆತಲಾಂತರದ ಅನ್ವೇಷಣೆ, ಅವರು ಗಮನಿಸುವಂತೆ, ಹಿಂದಿನ ಇಂಥದೇ ನಡೆಗಳಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರ ಉದ್ದೇಶಗಳು ಸಫಲವಾದ ಹಿನ್ನೆಲೆಯಿಂದ ಪ್ರಚೋದಿತವಾದವುಗಳಾಗಿವೆ. ಕರ್ನಾಟಕದ ಸಂಸದರೊಬ್ಬರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡುವಾಗ, ಅವರು ಲಿಂಗಾಯತ ಅಥವಾ ಒಕ್ಕಲಿಗರನ್ನು (ರಾಜ್ಯದ ಪ್ರಬಲ ಸಮುದಾಯಗಳನ್ನು) ಆಯ್ಕೆ ಮಾಡಲಿಲ್ಲ. ಬದಲಾಗಿ, ತೀವ್ರವಾದಿ ಬ್ರಾಹ್ಮಣ ಅನಂತ್ ಕುಮಾರ್ ಹೆಗಡೆಯನ್ನು ಆಯ್ಕೆ ಮಾಡಿದರು. ನಂತರ ಬಿಜೆಪಿಯ ರಾಷ್ಟ್ರೀಯ ಯುವ ಘಟಕದ ಮುಖ್ಯಸ್ಥನ ಸ್ಥಾನಕ್ಕೆ ಮತ್ತೊಬ್ಬ ಪ್ರಚೋದನಾಕಾರಿ ಮಾತುಗಾರ, ಬೆಂಗಳೂರು ದಕ್ಷಿಣ ಸಂಸದ, ಬ್ರಾಹ್ಮಣ ಸಮುದಾಯದ ತೇಜಸ್ವಿ ಸೂರ್ಯರನ್ನು ಆರಿಸಿದರು.
ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಪ್ರಚೋದಕರ ಪಟ್ಟಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಿಂದುತ್ವದ ಸೂಪರ್-ಟ್ರೋಲ್ ಆಗಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಬೆಂಕಿ ಹಚ್ಚುವಂತೆ ಮಾತನಾಡುವ ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೆಸರುಗಳನ್ನು ಸೇರಿಸಬಹುದು.
ಈ ಎಲ್ಲಾ ನೇಮಕಾತಿಗಳ ಹಿಂದಿರುವುದು ಗೃಹ ಸಚಿವ ಅಮಿತ್ ಶಾ ಕೈವಾಡ. ಅವರು ತಮ್ಮ ಹುದ್ದೆ ನಿರ್ವಹಣೆಯಲ್ಲಿ ತೋರಿಸುವುದಕ್ಕಿಂತ ಹೆಚ್ಚು ಸಕ್ರಿಯ ಪಾತ್ರವನ್ನು ಈ ರಾಜ್ಯದ ರಾಜಕೀಯದಲ್ಲಿ ವಹಿಸುತ್ತಾರೆ. 2022ರ ಕೊನೆಯ ವಾರದಲ್ಲಿ, ಕರ್ನಾಟಕದಲ್ಲಿ ಪಕ್ಷದ ಪ್ರಚಾರವನ್ನು ಔಪಚಾರಿಕವಾಗಿ ಉದ್ಘಾಟಿಸಿದ ಶಾ, ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಟಿಪ್ಪುವನ್ನು ವೈಭವೀಕರಿಸುವವರು' ಮತ್ತು 'ದೇಶಭಕ್ತರು' ಇವರಿಬ್ಬರಲ್ಲಿ ನೀವು ಆಯ್ಕೆ ಮಾಡಬೇಕಿದೆ ಎಂದು ಮತದಾರರಿಗೆ ಹೇಳಿದರು. 'ಟಿಪ್ಪು ಅನುಯಾಯಿಗಳು' ಎಂಬುದು ಇಲ್ಲಿ ಮುಸ್ಲಿಮರನ್ನು ಸಂಕೇತಿಸುತ್ತದೆ. ಗೃಹ ಸಚಿವರ ಈ ರೀತಿಯನ್ನು ಉತ್ಸಾಹದಿಂದ ಮುಂದುವರಿಸಿದ ಕರ್ನಾಟಕ ಬಿಜೆಪಿ ಅಧ್ಯಕ್ಷರು ಕೆಲ ದಿನಗಳ ನಂತರ, ಒಳಚರಂಡಿ ಮತ್ತು ಮೂಲಭೂತ ಸೌಕರ್ಯದಂಥ ಸಣ್ಣ ಸಮಸ್ಯೆಗಳನ್ನು ಬಿಟ್ಟು 'ಲವ್ ಜಿಹಾದ್' ವಿಚಾರದಲ್ಲಿ ಗಮನ ಕೇಂದ್ರೀಕರಿಸುವಂತೆ ಮತದಾರರನ್ನು ಒತ್ತಾಯಿಸಿದರು. ಕಳೆದ ವಾರ ಕಟೀಲು, ''ಟಿಪ್ಪುವಿನ ಅನುಯಾಯಿಗಳು ಈ ನೆಲದಲ್ಲಿ ಉಳಿಯಬಾರದು. ರಾಮನ ಭಜನೆ ಮಾಡುವವರು ಮಾತ್ರ ಉಳಿಯಬೇಕು'' ಎಂದು ಮತದಾರರ ಮುಂದೆ ಹೇಳಿದರು.
ಯೋಧ ಮತ್ತು ಆಡಳಿತಗಾರನಾಗಿ ಟಿಪ್ಪು ಸುಲ್ತಾನ್ ವಿವಾದಾತ್ಮಕವಾಗಿ ಉಳಿದಿದ್ದಾನೆ. ಆತ ಹಿಂದೂ ದೇವಾಲಯಗಳಿಗೆ ದತ್ತಿಗಳನ್ನು ನೀಡಿದ ಮತ್ತು ಇಸ್ಲಾಮಿಕ್ ನಂಬಿಕೆಗೂ ಅಷ್ಟೇ ಪ್ರಾಮುಖ್ಯತೆ ಕೊಟ್ಟಿದ್ದ. ಆದಾಗ್ಯೂ, ಈ 18ನೇ ಶತಮಾನದ ವ್ಯಕ್ತಿ ಹಿಂದುತ್ವದ ಇತಿಹಾಸಕಾರರು ಆರೋಪಿಸುವಂತೆ ನಿಜವಾಗಿ ತಪ್ಪಿತಸ್ಥನಾಗಿದ್ದರೆ, 21ನೇ ಶತಮಾನದಲ್ಲಿ ಕಾನೂನು ಪಾಲಿಸುವ ಮುಸ್ಲಿಮರನ್ನು ಏಕೆ ಶಿಕ್ಷಿಸಬೇಕು? ಮುಗ್ಧ ನಾಗರಿಕರನ್ನು ಹಿಂಸಿಸಲು ಇತಿಹಾಸವನ್ನು ಆಯುಧವಾಗಿಸುವುದು ನಾಗರಿಕ ನಡವಳಿಕೆಯ ಎಲ್ಲಾ ಮಾನದಂಡಗಳಿಗೆ ವಿರುದ್ಧವಾಗಿದೆ.
ಪುಸ್ತಕದ ಇಂಗ್ಲಿಷ್ ಆವೃತ್ತಿಯ ಮುನ್ನುಡಿಯಲ್ಲಿ, ಜಾಕಿ ಅಸ್ಸೇಗ್ ತಮ್ಮ ಸಂಶೋಧನೆಯು, ''ಹಿಂದೂ, ಮುಸ್ಲಿಮರ ನಡುವಿನ 'ಯುದ್ಧ' ಎಂದು ಕರೆಯಲ್ಪಡುವ ಒಂದು ನಿಯಮವಲ್ಲ, ಆದರೆ ಅದು ಅನ್ಯದ್ವೇಷ ಮತ್ತು ಜನಾಂಗೀಯ-ರಾಷ್ಟ್ರೀಯತೆಯಲ್ಲಿ ಹುಟ್ಟಿಕೊಂಡ ಐತಿಹಾಸಿಕ ಸುಳ್ಳು ಎಂದು ಸಾಬೀತುಪಡಿಸುತ್ತದೆ'' ಎನ್ನುತ್ತಾರೆ. ದುರಂತವೆಂದರೆ, ಇದನ್ನು ಬರೆದ ನಂತರದ ವರ್ಷಗಳಲ್ಲಿ, ಈ ಐತಿಹಾಸಿಕ ಸುಳ್ಳೇ ಹೆಚ್ಚು ಅನುಯಾಯಿಗಳನ್ನು ಗೆದ್ದಿದೆ. ರಾಜಕೀಯದ ಮಟ್ಟದಲ್ಲಿ, 'ಹಿಂದೂ' ಮತಬ್ಯಾಂಕ್ ನಿರ್ಮಾಣ ಬಿಜೆಪಿಗೆ ಕ್ಷಿಪ್ರ ಚುನಾವಣಾ ಲಾಭವನ್ನು ತಂದಿದೆ. ದೈನಂದಿನ ಜೀವನದ ಮಟ್ಟದಲ್ಲಿ, ಇದು ವಿಭಿನ್ನ ನಂಬಿಕೆ ಸಂಪ್ರದಾಯಗಳ ಭಾರತೀಯರ ನಡುವಿನ ದ್ವೇಷವನ್ನು ಹೆಚ್ಚಿಸಿದೆ.
ಪ್ರೊ. ಅಸ್ಸೇಗ್ 1980 ಮತ್ತು 1990ರ ದಶಕದ ಆರಂಭದಲ್ಲಿ ತಮ್ಮ ಕ್ಷೇತ್ರಕಾರ್ಯ ನಡೆಸಿದರು. ಅದು ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಹಿಂದೂ-ಮುಸ್ಲಿಮ್ ಗಲಭೆಗಳ ಅಲೆಯು ಭುಗಿಲೆದ್ದ ಮತ್ತು ದಕ್ಷಿಣದ ರಾಜ್ಯ ಕರ್ನಾಟಕದಲ್ಲಿ ಅದರ ಗಣನೀಯ ಪರಿಣಾಮಗಳನ್ನು ಉಂಟುಮಾಡಿದ್ದ ಹೊತ್ತಾಗಿತ್ತು. ರಾಮಜನ್ಮಭೂಮಿ ಅಭಿಯಾನದೊಂದಿಗೆ ರಾಜಕೀಯ ಶಕ್ತಿಯಾಗಿ ಬಿಜೆಪಿ ಅತಿ ವೇಗದಲ್ಲಿ ಬೆಳೆಯುತ್ತಿತ್ತು. ಹಿಂದುತ್ವ ಸಿದ್ಧಾಂತಕರು ರಾಮಾಯಣದಲ್ಲಿ ಬರುವ ಪವಿತ್ರ ರಾಷ್ಟ್ರದ ಭೂಪ್ರದೇಶದ ಕಲ್ಪನೆಯೊಂದಿಗೆ ಭಾರತದ ಭೂಪಟವನ್ನು ಪುನಃ ಬರೆಯಬಯಸಿದ್ದರು. ರಾಮನಿಂದ ಓಡಿಸಲ್ಪಟ್ಟ ರಾಕ್ಷಸರೆಂದು ಮುಸ್ಲಿಮರನ್ನು ಕಾಣಲಾಗುತ್ತಿತ್ತು. ಹಿಂದೂ ರಾಷ್ಟ್ರದಲ್ಲಿ ಮುಸ್ಲಿಮರಿಗೆ ಪಾಲಿನ ಏಕೈಕ ಆಯ್ಕೆಯೆಂದರೆ ಸಮೀಕರಣ, ಹೊರಹೋಗುವುದು ಅಥವಾ ವಿನಾಶ ಎಂಬ ಸ್ಥಿತಿಯನ್ನು ಈ ಹಿಂದೂ ಸಿದ್ಧಾಂತಕಾರರು ನಿರ್ಮಿಸ ಬಯಸಿದ್ದರು ಎಂದು ಅಸ್ಸೇಗ್ ಬರೆಯುತ್ತಾರೆ.
1990ರ ದಶಕದ ಅಂತ್ಯದ ವೇಳೆಗೆ, ಕರ್ನಾಟಕದಲ್ಲಿ ಕೋಮು ಸಂಘರ್ಷವು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಈ ಶತಮಾನದ ಮೊದಲ ಎರಡು ದಶಕಗಳು ಸಾಪೇಕ್ಷ ಸಾಮಾಜಿಕ ಶಾಂತಿಗೆ ಸಾಕ್ಷಿಯಾದವು. ಆದರೆ ಈಗ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿದೆ. ಇಸ್ಲಾಮಿಕ್ ಮೂಲಭೂತವಾದವು ಯಾವುದೇ ರೀತಿಯಲ್ಲಿ ಇಲ್ಲದಿದ್ದರೂ, ಸಂಖ್ಯಾಬಲ, ಆರ್ಥಿಕ ಶಕ್ತಿ ಮತ್ತು ಕೇಂದ್ರದಲ್ಲಿನ ರಾಜಕೀಯ ಪ್ರಾಬಲ್ಯದಿಂದ ನಿರ್ದೇಶಿತವಾಗುತ್ತಿರುವ ಬಹುಸಂಖ್ಯಾತ ಕೋಮುವಾದವು ರಾಜ್ಯಕ್ಕೆ ತೀವ್ರ ಅಪಾಯಕಾರಿಯಾಗಿದೆ.
ಪ್ರಧಾನಿ ಮತ್ತು ಆರೆಸ್ಸೆಸ್ ಮುಖ್ಯಸ್ಥರು ಸಾಂದರ್ಭಿಕವಾಗಿ ಮುಸ್ಲಿಮರನ್ನು ಓಲೈಸುವ ಮಾತನಾಡಬಹುದು. ಆದರೆ, ಗೃಹ ಸಚಿವರು, ಕರ್ನಾಟಕ ಬಿಜೆಪಿ ಅಧ್ಯಕ್ಷರು ಮತ್ತಿತರ ಪ್ರಮುಖ ರಾಜಕಾರಣಿಗಳ ವಾಕ್ಚಾತುರ್ಯವು ಕರ್ನಾಟಕದಲ್ಲಿ ಪಕ್ಷದ ತಂತ್ರ ಏನು ಎಂಬುದನ್ನು ಅಂದರೆ, ಹಿಂದೂಗಳನ್ನು ಹಿಂದುತ್ವದ ಪರ ಮತ್ತು ಮುಸ್ಲಿಮರ ವಿರುದ್ಧ ಮತ ಚಲಾಯಿಸುವಂತೆ ಮಾಡುವುದೆಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಕೇವಲ ತಂತ್ರಗಳ ವಿಷಯವಲ್ಲ (ಕಳಪೆ ಪ್ರದರ್ಶನವನ್ನು ಮರೆಮಾಚುವುದು); ಆದರೆ ಅದರಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ, ನಂಬಿಕೆಯ ವಿಷಯವಾಗಿದೆ. ಹಿಂದೂ ಪ್ರಾಬಲ್ಯಕ್ಕೆ ಬದ್ಧತೆ ಮತ್ತು ಮುಸ್ಲಿಮರನ್ನು ಕಳಂಕಗೊಳಿಸುವ ಮತ್ತು ರಾಕ್ಷಸೀಕರಿಸುವ ಬಯಕೆ ಹಿಂದುತ್ವ ಸಿದ್ಧಾಂತದ ತಿರುಳಾಗಿದೆ.
ಇದಕ್ಕಿಂತ ಮೊದಲು ಉತ್ತರ ಪ್ರದೇಶ ಮತ್ತು ಅಸ್ಸಾಮ್‌ನಲ್ಲಿ ಆದಂತೆ ಕರ್ನಾಟಕದಲ್ಲಿಯೂ ಬಿಜೆಪಿಯು ಧಾರ್ಮಿಕ ಧ್ರುವೀಕರಣದ ಮೂಲಕ ನಿರ್ಣಾಯಕ ಚುನಾವಣೆಯನ್ನು ಗೆಲ್ಲುವ ಭರವಸೆ ಹೊಂದಿದೆ. ಈ ರಾಜ್ಯದ ವಿಶಿಷ್ಟತೆಯಾದ ತ್ರಿಕೋನ ಸ್ಪರ್ಧೆಯಲ್ಲಿ ಅರ್ಧ ಅಥವಾ ಅದಕ್ಕಿಂತ ಹೆಚ್ಚು ಹಿಂದೂಗಳು ನಿರ್ದಿಷ್ಟವಾಗಿ ಹಿಂದೂಗಳಾಗಿ ಮತ ಚಲಾಯಿಸಿದರೆ ಪಕ್ಷವು ಯಶಸ್ವಿಯಾಗಿ ತನ್ನ ಉದ್ದೇಶ ಸಾಧಿಸಿದಂತಾಗುತ್ತದೆ ಎಂಬುದು ಅದರ ಲೆಕ್ಕಾಚಾರ. ಈ ತಂತ್ರವು ಯಶಸ್ವಿಯಾದರೆ, ಕರ್ನಾಟಕದ ಶಾಂತಿ ಮತ್ತು ಸಮೃದ್ಧಿಯ ನಿರೀಕ್ಷೆಗಳನ್ನು ಮತ್ತಷ್ಟು ಹಾಳುಗೆಡವುತ್ತದೆ

Similar News