ಪ್ರಾಜೆಕ್ಟ್ ಆಶಿಯಾನ: ಎಚ್.ಐ.ಎಫ್. ಇಂಡಿಯಾದಿಂದ ಫಲಾನುಭವಿಗೆ 28ನೇ ಮನೆ ಹಸ್ತಾಂತರ

Update: 2023-02-25 06:09 GMT

ಮಂಗಳೂರು, ಫೆ.25: ಆರ್ಥಿಕವಾಗಿ ಹಿಂದುಳಿದವರಿಗೆ, ನಿರ್ಗತಿಕರಿಗೆ ಹೊಸ ಮನೆ ನಿರ್ಮಿಸಿ ಕೊಡಲು ಎಚ್.ಐ.ಎಫ್. ಇಂಡಿಯಾ ಹಮ್ಮಿಕೊಂಡಿರುವ ಪ್ರಾಜೆಕ್ಟ್ ಆಶಿಯಾನ ಯೋಜನೆಯಡಿ ಕಡಬ ತಾಲೂಕಿನ ನೆಲ್ಯಾಡಿಯ ಹೊಸಮಜಲು ಎಂಬಲ್ಲಿ ನಿರ್ಮಿಸಲಾದ 28ನೇ ಮನೆಯನ್ನು ವಿಧವೆ ಫಲಾನುಭವಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಹ್ಸಾನ್ ಮಸೀದಿಯ ಖತೀಬ್ ಮೌಲಾನ ತಯ್ಯಬ್ ಮಾತನಾಡಿ, ದೇವ ಭಯ ಮತ್ತು ಪ್ರಾಮಾಣಿಕ ನಿಸ್ವಾರ್ಥ ಸೇವೆ ಕಾರಣ ಎಚ್.ಐ.ಎಫ್. ಗೆ ಅರ್ಹರಿಗೆ 28 ಮನೆಗಳನ್ನು ನಿರ್ಮಿಸಿ ಕೊಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಬದ್ರಿಯ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎಂ.ಬಿ.ನಝೀರ್ ಮಠ ಮಾತನಾಡಿ, ಎಚ್.ಐ.ಎಫ್ ಇಂಡಿಯಾದ ಸಮಾಜಮುಖಿ ಕಾರ್ಯಗಳಾದ ಸೂರಿಲ್ಲದವರಿಗೆ ಮನೆ ನಿರ್ಮಾಣ, ಅರ್ಹರಿಗೆ ವೈದ್ಯಕೀಯ ನೆರವು, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್, ಮಸೀದಿಗಳ ನಿರ್ಮಾಣ ಇವೆಲ್ಲವೂ  ಪ್ರತಿ ಮೊಹಲ್ಲ, ಮಸೀದಿಗಳಲ್ಲಿರುವ ಸಂಘಟನೆ  ಮಾಡಬೇಕಾದಂತಹ ಮಾದರಿ ಕಾರ್ಯ ಎಂದರು.

ಅತಿಥಿಗಳು ಫಲಾನುಭವಿಗೆ ಮನೆಯ ಕೈ ಕೀಲಿ ಹಸ್ತಾಂತರಿಸುವುದರ ಜೊತೆಗೆ ಒಂದು ತಿಂಗಳ ರೇಷನ್ ಕಿಟ್ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್.ಐ.ಎಫ್. ಇಂಡಿಯಾ ಕಾರ್ಯದರ್ಶಿ ಆದಿಲ್ ಫರ್ವೇಝ್  ಮಾತನಾಡಿ, 29 ಮತ್ತು 30ನೇ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಅತಿ ಶೀಘ್ರದಲ್ಲಿ ಫಲಾನುಭವಿಗಳಿಗೆ ಆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

ಶಕೀಫ್ ಆದಿಲ್ ಫರ್ವೇಝ್ ಕಿರಾತ್ ಪಠಿಸಿದರು. ಎಚ್.ಐ.ಎಫ್ ಪ್ರಾಜೆಕ್ಟ್ ಆಶಿಯಾನದ ಸಂಚಾಲಕ ಔಸಾಫ್ ಹುಸೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Similar News