ಆಧುನಿಕ ಸಾಧನ ಬಳಸಿ ಇತಿಹಾಸ ನಿರ್ಮಿಸಿದ ಸುಪ್ರೀಂಕೋರ್ಟ್‌ ಗೆ ಮೂವರು ಬೆಂಗಳೂರಿಗರು ನೆರವಾಗಿದ್ದು ಹೇಗೆ?

Update: 2023-02-26 09:25 GMT

ಬೆಂಗಳೂರು: ನೇರ ಭಾಷಾಂತರ ಮಾಡುವ ಭಾಗವಾಗಿ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವನ್ನು ಬಳಸಿಕೊಂಡು ಈ ವಾರ ಸುಪ್ರೀಂಕೋರ್ಟ್ ಇತಿಹಾಸ ನಿರ್ಮಿಸಿತು. ಕುತೂಹಲದ ಸಂಗತಿಯೆಂದರೆ, ಈ ತಂತ್ರಜ್ಞಾನ ಬಳಕೆಯ ನಡೆಯಿಂದ ಕಾನೂನು ಪ್ರಕ್ರಿಯೆಯು ಆಧುನೀಕರಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದ್ದು, ಇದರ ಹಿಂದೆ ಬೆಂಗಳೂರು ಸಂಪರ್ಕವಿರುವುದು ಬಹಿರಂಗಗೊಂಡಿದೆ ಎಂದು timesofindia.com ವರದಿ ಮಾಡಿದೆ.

ಫೆಬ್ರವರಿ 21ರಂದು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ಎದುರು ವಿಚಾರಣೆಗೆ ಬಂದಿದ್ದ ಮಹಾರಾಷ್ಟ್ರ ರಾಜಕೀಯ ವಿವಾದದ ಸಂದರ್ಭದಲ್ಲಿ ನಡೆದ ನ್ಯಾಯಾಲಯದ ಕಲಾಪವನ್ನು ಕೃತಕ ಬುದ್ಧಿಮತ್ತೆ ಯಂತ್ರವು ನೇರವಾಗಿ ಪಠ್ಯಕ್ಕೆ ಭಾಷಾಂತರಿಸಿತು. TERES (Technology Enabled RESolution) ಎನ್ನಲಾಗುವ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬೆಂಗಳೂರು ಮೂಲದ ವಿಕಾಸ್ ಮಹೇಂದ್ರ, ಅವರ ಸಹೋದರ ವಿನಯ್ ಮಹೇಂದ್ರ ಹಾಗೂ ಭಾಮೈದುನ ಬದರಿವಿಶಾಲ್ ಕಿನ್ಹಾಲ್ ಅಭಿವೃದ್ಧಿ ಪಡಿಸಿದ್ದಾರೆ. ನ್ಯಾಯಾಲಯ ಕಲಾಪ ಮುಕ್ತಾಯಗೊಂಡ ನಂತರ ಸುಪ್ರೀಂಕೋರ್ಟ್ ಆ ಭಾಷಾಂತರವನ್ನು ಅಧಿಕೃತವಾಗಿ ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿತು.
ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಲಾಯಿತಾದರೂ, ಕಾನೂನು ಭಾಷಾಂತರದ ಈ ಪ್ರಪ್ರಥಮ ತಂತ್ರಜ್ಞಾನ ಆಧಾರಿತ ಎದುರುಗೊಳ್ಳುವಿಕೆಯಿಂದ ನ್ಯಾಯಾಲಯದಲ್ಲಿನ ಪ್ರತಿ ಪದವೂ ದಾಖಲೀಕರಣಗೊಳ್ಳುವುದರಿಂದ ಉತ್ತರದಾಯಿತ್ವ ಹಾಗೂ ಪಾರದರ್ಶಕತೆಯನ್ನು ಹಿಗ್ಗಿಸಲಿದೆ ಎಂದು ಕಾನೂನು ತಜ್ಞರು ಅನುಮೋದಿಸಿದ್ದಾರೆ.

ಸಿಂಗಪೂರ್ ಸೇರಿದಂತೆ ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸಿರುವ ಮಧ್ಯಸ್ಥಿಕೆ ತಜ್ಞ ಹಾಗೂ ಬೆಂಗಳೂರು ಮೂಲದ ನೊಮೊಲಜಿ ಟೆಕ್ನಾಲಜಿ ಪ್ರೈವೇಟ್ ಲಿಮಿಡೆಡ್ ಸಂಸ್ಥಾಪಕ, 37 ವರ್ಷದ ವಿಕಾಸ್ ಪ್ರಕಾರ, "ಈ ಪ್ರಯಾಣವು ಕುತೂಹಲಕಾರಿ ಹಾಗೂ ನಾಟಕೀಯವಾಗಿತ್ತು" ಎಂದು ಹೇಳಿದ್ದಾರೆ.

ಭಾಷಾಂತರ ತಂತ್ರಜ್ಞಾನದ ಕುರಿತು, "ವಾದಿ-ಪ್ರತಿವಾದಿಗಳಿಬ್ಬರಿಗೂ ಈ ತಂತ್ರಜ್ಞಾನದಿಂದ ಲಾಭವಾಗಲಿದೆ. ಮೊದಲನೆಯದಾಗಿ, ವಕೀಲರು ವಾದ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಹಾಗೂ ತಮ್ಮ ಪ್ರತಿ ಪದವನ್ನೂ ಅಳೆದು ತೂಗಿ ಬಳಸಬೇಕು. ಆಗ ಅವರ ವಾದಕ್ಕೆ ಉತ್ತರದಾಯಿತ್ವ ಒದಗಲಿದೆ. ಎರಡನೆಯದಾಗಿ, ಕಕ್ಷಿದಾರರಿಗೆ ತಮ್ಮ ವಕೀಲರು ಏನು ವಾದ ಮಾಡುತ್ತಿದ್ದಾರೆ ಎಂಬ ಬಗ್ಗೆ ಉತ್ತಮ ತಿಳಿವಳಿಕೆ ಮೂಡುತ್ತದೆ. ಮೂರನೆಯದಾಗಿ, ನ್ಯಾಯಾಧೀಶರು ಬೇಕಾಬಿಟ್ಟಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ನಾಲ್ಕನೆಯದಾಗಿ, ವಕೀಲರು ತಮ್ಮ ಎಲ್ಲ ವಾದಗಳೂ ದಾಖಲಾಗುವುದನ್ನು ಖಾತ್ರಿ ಪಡಿಸಿಕೊಳ್ಳಬಹುದು" ಎಂದು ವಿಕಾಸ್ ಅಭಿಪ್ರಾಯ ಪಟ್ಟಿದ್ದಾರೆ.

ಆರ್‌ವಿ ಕಾಲೇಜಿನಿಂದ ಎಂಜಿನಿಯರಿಂಗ್ ಪದವೀಧರರಾಗಿರುವ ವಿಕಾಸ್ ಸಹೋದರ ವಿನಯ್ ಸಂಸ್ಥೆಯ ತಾಂತ್ರಿಕತೆಯ ಹೊಣೆ ವಹಿಸಿಕೊಂಡಿದ್ದರೆ, ಅವರ ಭಾಮೈದುನ ಕಿನ್ಹಾಲ್ ಕಾರ್ಯನಿರ್ವಹಣೆಯ ಮುಖ್ಯಸ್ಥರಾಗಿದ್ದಾರೆ.

Similar News