×
Ad

4 ಕೋಟಿ ಜನರನ್ನು ತಲುಪುವ ಬಿಜೆಪಿಯ ರಥಗಳ ಯಾತ್ರೆಗಳು: ಎನ್.ರವಿಕುಮಾರ್

Update: 2023-02-28 12:06 IST

ಬೆಂಗಳೂರು, ಫೆ.27: ಬಿಜೆಪಿಯ ನಾಲ್ಕು ರಥಗಳು ಒಟ್ಟು 4 ಕೋಟಿ ಜನರನ್ನು ತಲುಪುವ ಉದ್ದೇಶ ಹೊಂದಿದ್ದು, ಪಕ್ಷ ಬಹುಮತ ಪಡೆಯಲು ಇದು ಪೂರಕ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

ಸೋಮವಾರ ಲಾಲ್‍ಬಾಗ್ ಸಮೀಪದ ಎಸ್.ಎಂ.ಕಣ್ಣಪ್ಪ ಆಟೋ ಮೊಬೈಲ್ಸ್‍ನಲ್ಲಿ ಬಿಜೆಪಿ ವಿಜಯಸಂಕಲ್ಪ ಯಾತ್ರೆಯ 4 ರಥಗಳ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 4 ರಥಗಳ ಲೈಲ್ಯಾಂಡ್ ಚಾಸಿಯನ್ನು ಪ್ರಕಾಶ್ ರೋಡ್‍ಲೈನ್ಸ್ ನವರು ನಿರ್ಮಿಸುತ್ತಿದ್ದಾರೆ. ಪ್ರತಿ ರಥವು 30 ಅಡಿ ಉದ್ದ, 8 ಅಡಿ ಅಗಲದ್ದಾಗಿದೆ. ರಥದಲ್ಲಿ ನಿಂತು ಭಾಷಣ ಮಾಡಲು ಸುಂದರ ಕೆನೊಪಿ ರಚಿಸಿದ್ದೇವೆ ಎಂದರು.

4 ಮೊಬೈಲ್ ಚಾರ್ಜರ್‍ಗಳು, ರೋಡ್ ಶೋಗೆ ಪೂರಕ ಮೈಕ್ ವ್ಯವಸ್ಥೆ ಇದ್ದು, ಸುಮಾರು ಒಂದು ಕಿ.ಮೀ. ದೂರಕ್ಕೆ ಕೇಳಿಸುವಷ್ಟು ಪ್ರಬಲವಾಗಿದೆ. ಕೆನೊಪಿ ಮೇಲೆ 4 ದೊಡ್ಡ ಹಾರನ್ ಇದೆ. ಬಸ್ ಒಳಗಡೆ 7 ಆಸನಗಳಿವೆ. ಹೋಂ ಥಿಯೇಟರ್ ಇದೆ. 32 ಇಂಚಿನ ಟಿವಿ, ಚಾಲಕನ ಜೊತೆ ಮಾತನಾಡಲು ಇಂಟರ್‍ಕಾಂ ವ್ಯವಸ್ಥೆ ಇದೆ. ಜನರೇಟರ್ ಇದೆ. ಆಡಿಯೋ ಸಿಸ್ಟಂ, ಕ್ಯಾಮೆರಾ, ಹೊರಮುಖವಾಗಿ ಎಲ್‍ಇಡಿ ಡಿಸ್‍ಪ್ಲೇ ಇದೆ ಎಂದು ಅವರು ತಿಳಿಸಿದರು.

ಚುನಾವಣಾ ಗೀತೆ, ಭಾಷಣ ಕೇಳಿಸುವುದಲ್ಲದೆ, 5 ಸಾವಿರ ಜನರಿಗೆ ಬಸ್‍ನಿಂದ ಭಾಷಣ ಮಾಡುವ ವ್ಯವಸ್ಥೆ ಒಳಗೊಂಡಿದೆ. ಯಾತ್ರೆ ಯಶಸ್ವಿಗೆ ಮುಂಚಿತವಾಗಿಯೇ 4 ಸಪೋರ್ಟ್ ವಾಹನ ತೆರಳಲಿದೆ. ಅದು ಕೂಡ ಬ್ರ್ಯಾಂಡೆಡ್ ಆಗಿದೆ. ಮಾಧ್ಯಮದವರು ವಿಡಿಯೋ, ಫೋಟೋ ತೆಗೆಯಲು ಅನುಕೂಲ ಮಾಡಿಕೊಡಲು 4 ಮೀಡಿಯಾ ವೆಹಿಕಲ್ ಇರುತ್ತದೆ ಎಂದು ರವಿಕುಮಾರ್ ಹೇಳಿದರು.

ರಥಯಾತ್ರೆ, ಪಾದಯಾತ್ರೆ, ಕಾರ್ಯಕರ್ತರ ಪರಿಶ್ರಮ, ನಾಯಕರ ಪರಿಶ್ರಮದಿಂದ ಬಿಜೆಪಿಯನ್ನು ದೇಶದಲ್ಲಿ ಕಟ್ಟಿದ್ದೇವೆ. ಹೋರಾಟಗಳು, ಆಂದೋಲನಗಳು, ಅಭಿವೃದ್ಧಿ ಕಾರ್ಯಗಳು ನಮ್ಮ ಬಿಜೆಪಿಗೆ ದೇಶ ಮತ್ತು ರಾಜ್ಯದಲ್ಲಿ 2 ಸೀಟಿನಿಂದ ಸಂಪೂರ್ಣ ಬಹುಮತ ತಂದುಕೊಡುವಲ್ಲಿ ರಥಯಾತ್ರೆಗಳು ಮುಖ್ಯ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದರು.

Similar News