ವಾರಕ್ಕೆ 5 ದಿನ, ದಿನಕ್ಕೆ 7 ಗಂಟೆ ಕೆಲಸದ ಅವಧಿ ನಿಗದಿಗಾಗಿ ಸಿಐಟಿಯು ಒತ್ತಾಯ

ಕಾರ್ಖಾನೆಗಳ ತಿದ್ದುಪಡಿ ವಿಧೇಯಕಕ್ಕೆ ವಿರೋಧ

Update: 2023-02-28 13:28 GMT

ಬೆಂಗಳೂರು, ಫೆ. 28: ರಾಜ್ಯ ಸರಕಾರ ಜಾರಿಗೊಳಿಸಿರುವ ಕಾರ್ಖಾನೆಗಳ ತಿದ್ದುಪಡಿ ವಿಧೇಯಕ-2023 ಅನ್ನು ವಿರೋಧಿಸಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ನಾಳೆ(ಮಾ.1) ಮಧ್ಯಾಹ್ನ 3 ಗಂಟೆಗೆ ನಗರದ ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಸರಕಾರ ತಿದ್ದುಪಡಿ ವಿಧೇಯಕ ಜಾರಿಯನ್ನು ಖಂಡಿಸಿ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ವಿಧೇಯಕ ಪ್ರತಿದಹನ ಪ್ರತಿಭಟನೆಗೆ ಸಿಐಟಿಯು ಕರೆ ನೀಡಿದ್ದು, ರಾಜ್ಯ ಸಮಿತಿಯು ವಾರಕ್ಕೆ 5 ದಿನ ಕೆಲಸ, ದಿನಕ್ಕೆ 7 ಗಂಟೆ ಅಥವಾ ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದೆ.

ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ -1948ಕ್ಕೆ ತಿದ್ದುಪಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023ನ್ನು ಬಂಡವಾಳದಾರರ ಲಾಭಕ್ಕಾಗಿ ರಾಜ್ಯ ಸರಕಾರ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿರುವುದು ಕಾರ್ಮಿಕ ವಿರೋಧಿ ನಡೆಯಾಗಿದೆ ಸಿಐಟಿಯು ಖಂಡಿಸಿದೆ.

ಬಿಜೆಪಿ ಸರಕಾರ ಮತ್ತೆ ಚುನಾವಣೆ ಹೊಸ್ತಿಲಲ್ಲಿ ಬಂಡವಾಳಗಾರರ ಲಾಭವನ್ನು ಹೆಚ್ಚಿಸಲು ಈ ತಿದ್ದುಪಡಿ ವಿಧೇಯಕವನ್ನು ಶಾಸನಸಭೆಯಲ್ಲಿ ಅಂಗೀಕಾರ ಮಾಡಿರುವುದು, ಅದರ ಕಾರ್ಮಿಕ ವಿರೋಧಿ ನಿಲುವನ್ನು ದೃಢಪಡಿಸಿದೆ ಎಂದು ಸಂಘಟನೆ ತಿಳಿಸಿದ್ದು, ಕಾರ್ಖಾನೆಗಳಲ್ಲಿ ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಗೆ, ಕಾರ್ಮಿಕರ ಮೇಲೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡಗಳನ್ನು ಕಡಿಮೆ ಮಾಡಿ ಕಾರ್ಮಿಕರ ಜೀವನವನ್ನು ಉತ್ತಮಪಡಿಸಬೇಕೆಂದು ಮನವಿ ಮಾಡಿದೆ.

Similar News