ಕಾಕಂಬಿ ಹಗರಣ | ಸಿಎಂ, ಸಂಸದರು, ಸಚಿವರು ಭಾಗಿ: ಪ್ರಿಯಾಂಕ್ ಖರ್ಗೆ ಆರೋಪ

Update: 2023-02-28 14:48 GMT

ಬೆಂಗಳೂರು, ಫೆ.28: ಕಾಕಂಬಿಯನ್ನು ಗೋವಾ ಬಂದರಿನ ಮೂಲಕ ರಫ್ತಿಗೆ ಅವಕಾಶ ಮಾಡಿಕೊಡಲು ಇಬ್ಬರು ಬಿಜೆಪಿ ಸಂಸದರು ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ವ್ಯವಹರಿಸಿದ್ದು, ಮುಖ್ಯಮಂತ್ರಿ, ಅಬಕಾರಿ ಸಚಿವರು ಮತ್ತು ಆಯುಕ್ತರನ್ನು ಕರೆಸಿ ಅನುಮತಿ ಕೊಡಿಸಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ದಾಖಲೆಯೊಂದಿಗೆ ಆರೋಪಿಸಿದ್ದಾರೆ.

ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟಾದರೂ ಸರಿ, ಹೈಕಮಾಂಡ್ ಮನವೊಲಿಸಲು ಮುಂದಾಗಿರುವ ಸಿಎಂ ಈ ಮೂಲಕ 200 ಕೋಟಿ ರೂ.ಮೊತ್ತದ ದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಸರಕಾರದಲ್ಲಿ ದಾಖಲೆ ಇಲ್ಲದೆಯೂ ಶೇ.40ರಷ್ಟು ಕಮಿಷನ್ ನೀಡಿದರೆ ಎಲ್ಲ ವ್ಯವಹಾರಗಳನ್ನು ಸುಲಭವಾಗಿ ಮಾಡಬಹುದು ಎಂಬುದಕ್ಕೆ ಈ ಹಗರಣ ನಿದರ್ಶನ. ಕಾಕಂಬಿ ರಫ್ತಿಗೆ ಕೇಂದ್ರ ಹಣಕಾಸು ಸಚಿವರು ಶಿಫಾರಸ್ಸು ಪತ್ರ ನೀಡಿದ್ದರಿಂದ ಬೊಮ್ಮಾಯಿ ರಾಜ್ಯಕ್ಕೆ ಆಗುವ ನಷ್ಟವನ್ನು ಲೆಕ್ಕಿಸದೇ ಕಾಕಂಬಿ ರಫ್ತಿಗೆ ಅವಕಾಶ ನೀಡಿದ್ದಾರೆ ಎಂದು ದೂರಿದರು.

ಕಾಕಂಬಿ ರಫ್ತನ್ನು ಕಾನೂನು ಬದ್ಧವಾಗಿ ಮಾಡಿದ್ದರೆ ಸರಕಾರದ ಬೊಕ್ಕಸಕ್ಕೆ 60ಕೋಟಿ ರೂ.ತೆರಿಗೆ ರೂಪದಲ್ಲಿ ಆದಾಯವಾಗುತ್ತಿತ್ತು. ಆದರೆ, ಇದನ್ನು ತಪ್ಪಿಸಿ ಗೋವಾದಿಂದ ರಫ್ತು ಮಾಡಲು ಮುಂಬೈ ಮೂಲದ ಕೆ.ಎನ್.ರಿಸೋರ್ಸಸ್ ಎಂಬ ಖಾಸಗಿ ಕಂಪೆನಿಗೆ ಅನುಮತಿ ನೀಡಲಾಗಿದೆ. ಈ ಕಂಪೆನಿ 3 ವರ್ಷಗಳಿಂದ ಜಿಎಸ್ಟಿ ಪಾವತಿಸಿಲ್ಲ. ಆದರೂ ಅನುಮತಿ ನೀಡುತ್ತಾರೆ ಎಂದು ಹೇಳಿದರು.

ಕೆ.ಎನ್.ರಿಸೋರ್ಸಸ್ ಎಂಬ ಖಾಸಗಿ ಕಂಪೆನಿ 2022ರ ಸೆಪ್ಟೆಂಬರ್‍ನಲ್ಲಿ 2ಲಕ್ಷ ಮೆಟ್ರಿಕ್ ಟನ್ ಕಾಕಂಬಿ ರಫ್ತಿಗೆ ಅನುಮತಿ ಕೇಳುತ್ತಾರೆ. ಅವರ ಬಳಿ ಯಾವುದೇ ದಾಖಲೆ ಇಲ್ಲದಿದ್ದರೂ ಸರಕಾರ ವಿಶೇಷ ಪ್ರೀತಿಯಿಂದ ಎಂ1, ಎಂ2 ಪರವಾನಗಿ ಕೊಟ್ಟಿದೆ. ಕೇವಲ 2 ತಿಂಗಳಲ್ಲಿ ದಾಖಲೆ ಇಲ್ಲದಿದ್ದರೂ ಪರವಾನಗಿ ನೀಡಲಾಗಿದೆ. ಇದರ ವಿರುದ್ಧ ಸ್ಟೇಟ್ ಡಿಸ್ಟಿಲರಿ ಓನರ್ಸ್ ಅಸೋಸಿಯೇಷನ್ ಅವರು ಪ್ರತಿಭಟನೆ ಮಾಡಿದರೂ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ತಿಳಿಸಿದರು.

ಬಿಜೆಪಿ ಸಮಾವೇಶಗಳಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೆಸರನ್ನೇ ಬಿಜೆಪಿ ವರಿಷ್ಠರು ಪ್ರಸ್ತಾಪಿಸುತ್ತಿಲ್ಲ. ಶಿವಮೊಗ್ಗದ ಕಾರ್ಯಕ್ರಮದಲ್ಲಿ ಮೋದಿ ಅವರು ಮುಖ್ಯಮಂತ್ರಿಗಳ ಹೆಸರನ್ನೇ ತೆಗೆದುಕೊಳ್ಳಲಿಲ್ಲ. ಇದರಿಂದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಇದು ಶೇ.40ರಷ್ಟು ಭ್ರಷ್ಟಾಚಾರದ ಸರಕಾರ. ನಾವು ಇವರ ಹೆಸರು ತೆಗೆದುಕೊಂಡರೆ ಜನ ನಮಗೆ ಮತ ಹಾಕುವುದಿಲ್ಲ ಎಂದು ತಿಳಿಯುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಮಾತನಾಡಿ, ಅಬಕಾರಿ ಇಲಾಖೆಯಲ್ಲಿನ 200 ಕೋಟಿ ರೂ. ಅವ್ಯವಹಾರದ ಬಗ್ಗೆ ಅದರಲ್ಲಿ 80 ಕೋಟಿ ರೂ.ಗಳಷ್ಟು ಕಿಕ್ ಬ್ಯಾಕ್ ಕುರಿತು ಪ್ರಸ್ತಾಪಿಸಿದ್ದೇವೆ. ರಾಜ್ಯದಲ್ಲಿ ಚುನಾವಣೆ ನಿಮಿತ್ತವಾಗಿ ಪ್ರಧಾನಮಂತ್ರಿಗಳು 6 ತಿಂಗಳಲ್ಲಿ ಕರ್ನಾಟಕಕ್ಕೆ ಪದೇ ಪದೆ ಆಗಮಿಸುತ್ತಿದ್ದಾರೆ. ವಿಪರ್ಯಾಸ ಎಂದರೆ, ಅವರು ಪೇಸಿಎಂ, 40ರಷ್ಟು ಕಮಿಷನ್, ರಾಜ್ಯದಲ್ಲಿನ ಹಗರಣಗಳ ಬಗ್ಗೆ ಪ್ರಧಾನಮಂತ್ರಿಗಳು ಕೇಂದ್ರ ಗೃಹಸಚಿವರು ಮಾತನಾಡುತ್ತಿಲ್ಲ. ಕಾಂಗ್ರೆಸ್ ವಿರೋಧ ಪಕ್ಷವಾಗಿ ಅಬಕಾರಿ ಇಲಾಖೆ ಮಾತ್ರವಲ್ಲ, ಇನ್ನು ಇತರೆ ಇಲಾಖೆಯಲ್ಲಿನ ಹಗರಣಗಳ ಬಗ್ಗೆ ದಾಖಲೆ ಸಮೇತ ಮುಂದಿಡುತ್ತದೆ ಎಂದರು

ಹಗರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ರಚಿಸಿ:

‘ಪಠ್ಯಪುಸ್ತಕ, ಶಾಲಾ ಬ್ಯಾಗ್, ಶೂ ಯಾವುದನ್ನು ಬಿಡದ ರೀತಿಯಲ್ಲಿ ಬಿಜೆಪಿಯವರು ಲೂಟಿ ಮಾಡುತ್ತಿದ್ದಾರೆ. ನಾವು ದಾಖಲೆ ಸಮೇತ ಮಾತನಾಡಿದರೆ ನಮ್ಮ ವಿರುದ್ಧ ಸಿಐಡಿ ನೋಟಿಸ್ ನೀಡುತ್ತಾರೆ. ಕಾಕಂಬಿ ಹಗರಣದಲ್ಲಿ ಆ ಇಬ್ಬರು ಸಂಸದರು ಮತ್ತು ಮುಖ್ಯಮಂತ್ರಿಗಳ ಪಾತ್ರ ರಾಜ್ಯದ ಜನತೆಗೆ ತಿಳಿಯಬೇಕು. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಕಾಲದಲ್ಲಿ ಮಾತ್ರ ಹಗರಣ ನಡೆದಿದೆ ತಾವೆಲ್ಲಾ ಪ್ರಾಮಾಣಿಕರು ಎಂದು ಹೇಳುವ ಬಿಜೆಪಿಯವರು, ಬಿಜೆಪಿ ಮತ್ತು ಕಾಂಗ್ರೆಸ್ 2 ಆರೋಪಗಳ ವಿಚಾರಣೆಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಒಂದು ತ್ವರಿತ ನ್ಯಾಯಾಲಯವನ್ನು ಸ್ಥಾಪಿಸಿ ವಿಚಾರಣೆ ನಡೆಸಲಿ. ಚುನಾವಣೆಯನ್ನು 2 ತಿಂಗಳು ಮುಂದಕ್ಕೆ ಹಾಕಿ ಈ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಕಾಂಗ್ರೆಸ್ ಸಿದ್ಧವಿದೆ. ನೀವು ಸಿದ್ಧವಿದ್ದೀರಾ’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಬಿಜೆಪಿಯವರಿಗೆ ಶೋಭಕ್ಕ ಗೊತ್ತೇ ಹೊರತು ಅಬ್ಬಕ್ಕ ಗೊತ್ತಿಲ್ಲ:

‘ಕಾಕಂಬಿ ಅಕ್ರಮ ರಫ್ತಿನ ಪ್ರಕರಣದ ಬಗ್ಗೆ ಲೋಕಾಯುಕ್ತದಲ್ಲಿ ಈಗಾಗಲೇ ದೂರು ದಾಖಲಾಗಿದೆ. ಈ ಬಗ್ಗೆ ಚರ್ಚೆ ಮಾಡದೇ, ನಳಿನ್ ಕುಮಾರ್ ಕಟೀಲ್, ಟಿಪ್ಪು ವರ್ಸಸ್ ಸಾರ್ವಕರ್, ಟಿಪ್ಪು ವರ್ಸಸ್ ಅಬ್ಬಕ್ಕ ಅವರ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರಿಗೆ ಶೋಭಕ್ಕ ಗೊತ್ತೇ ಹೊರತು ಉಳ್ಳಾಳದ ವೀರ ರಾಣಿ ಅಬ್ಬಕ್ಕನ ಬಗ್ಗೆ ಗೊತ್ತಿಲ್ಲ. ಇವರು ತಮ್ಮ ಹಗರಣಗಳನ್ನು ಮುಚ್ಚಿಕೊಳ್ಳಲು ಟಿಪ್ಪು ವರ್ಸಸ್ ಅಬ್ಬಕ್ಕ ಎನ್ನುತ್ತಿದ್ದಾರೆ. ಈ ಬಗ್ಗೆ ಕಟೀಲ್ ಚರ್ಚೆಗೆ ಬರಲಿ’ ಎಂದು ಪ್ರಿಯಾಂಕ್ ಖರ್ಗೆ ಸವಾಲೆಸೆದರು. 

Similar News