ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆರಂಭ: ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳ ಪರದಾಟ
ಇಂದಿನ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ, ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಮಾ.1: 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘ ನೀಡಿರುವ ಕರೆಯಂತೆ ರಾಜ್ಯಾದ್ಯಂತ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸೆಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ, ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದಿಂದ ಮಧ್ಯಂತರ ವರದಿ ಪಡೆದು, 2022ರ ಜು.1ರಿಂದ ಜಾರಿಗೆ ಬರುವಂತೆ ಶೇ.40ರಷ್ಟು ವೇತನ ಹೆಚ್ಚಳ ಹಾಗೂ ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೊಳಿಸಬೇಕೆಂಬುದು ಮುಷ್ಕರನಿರತ ರಾಜ್ಯ ಸರಕಾರಿ ನೌಕರರ ಬೇಡಿಕೆಯಾಗಿದೆ. ಈ ಮುಷ್ಕರಕ್ಕೆ ಸರಕಾರಿ ವೈದ್ಯಾಧಿಕಾರಿಗಳ ಸಂಘ ಕೂಡ ಬೆಂಬಲ ನೀಡಿದ್ದು, ರಾಜ್ಯದ ಹಲವೆಡೆ ಸರಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದ ಕಾರಣ ರೋಗಿಗಳ ಪರದಾಡುವಂತಾಗಿದೆ. ಗರ್ಭಿಣಿಯರು, ಹಿರಿಯ ನಾಗರಿಕರು ಸೇರಿದಂತೆ ರೋಗಿಗಳು ಸಂಕಷ್ಟಕ್ಕೀಡಾಗಿರುವುದು ವರದಿಯಾಗಿದೆ. ಬಹುತೇಕ ನೌಕರರು ಕಚೇರಿಗೆ ಗೈರು ಹಾಜರಾಗಿದ್ದಾರೆ.
ಸಂಧಾನ ಸಭೆ ವಿಫಲ: ಮುಷ್ಕರ ಕರೆಯ ಹಿನ್ನೆಲೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಮಂಗಳವಾರ ವಿಧಾನಸೌಧದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಸಂಧಾನ ಸಭೆ ನಡೆಸಿದರು. ಈ ವೇಳೆ ಬೇಡಿಕೆಗಳ ಈಡೇರಿಕೆಗೆ ಕಾಲಾವಕಾಶ ನೀಡುವಂತೆ ವಂದಿತಾ ಶರ್ಮ ಕೋರಿದ್ದಾರೆ. ಆದರೆ ಸರಕಾರಿ ನೌಕರರು ಒಪ್ಪಲಿಲ್ಲ. ಸರಕಾರ ನಮ್ಮ ಬೇಡಿಕೆಗಳ ಬಗ್ಗೆ ಆದೇಶ ಹೊರಡಿಸಿದರೆ, ಕೂಡಲೇ ನಾವು ಮುಷ್ಕರ ಹಿಂಪಡೆಯುತ್ತೇವೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದಾರೆ.