ರಾಷ್ಟ್ರದ ಹಿತ ಬಯಸುವ ಪಕ್ಷಕ್ಕೆ ಸೇರ್ಪಡೆಯಾಗಿರೋದು ನನಗೆ ಖುಷಿ ತಂದಿದೆ: ಭಾಸ್ಕರ್ ರಾವ್

'ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಬೆಳೆಯುತ್ತಿಲ್ಲ' ► ಬಿಜೆಪಿ ಸರಕಾರದ ವಿರುದ್ಧದ PSI ಹಗರಣ ಆರೋಪದ ಬಗ್ಗೆ ಅವರು ಹೇಳಿದ್ದೇನು?

Update: 2023-03-01 08:25 GMT

ಬೆಂಗಳೂರು: 'ನನ್ನ ಬದುಕಿನಲ್ಲಿ ಇಂದು ಬಹಳ ಸಂತೋಷದ ದಿನ. ಸನಾತನ ಧರ್ಮಕ್ಕೆ ಸೇರಿದ ರಾಷ್ಟ್ರೀಯತೆ, ರಾಷ್ಟ್ರದ ಹಿತ ಬಯಸುವ ಪಕ್ಷಕ್ಕೆ (BJP) ನಾನು ಸೇರ್ಪಡೆ ಆಗಿರುವುದಕ್ಕೆ ಖುಷಿ ಇದೆ. ಬಾಲ್ಯದಿಂದಲೂ ನಾನು ರಾಷ್ಟ್ರೀಯತೆ, ಸನಾತನ ಧರ್ಮಕ್ಕೆ ಬದ್ಧನಾಗಿದ್ದವನು' ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

ಅವರು ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

'ಸ್ವಯಂ ನಿವೃತ್ತಿ ಪಡೆದು ಕೆಲವು ಕಾಲ ಸಮಾಜಕ್ಕೆ, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಆಶಯದೊಂದಿಗೆ ರಾಜಕಾರಣಕ್ಕೆ ಇಳಿದೆ. ಆಮ್‌ ಆದ್ಮಿ ಪಾರ್ಟಿಗೆ ಸೇರಿದೆ. ಆದರೆ, ಒಂದು ವರ್ಷ ಕಾಲ ಆ ಪಕ್ಷವನ್ನು ಕಟ್ಟಲು ರಾಜ್ಯದಲ್ಲಿ ಬಹಳಷ್ಟು ಶ್ರಮವಹಿಸಿದೆವು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಅವರ ಕಾರ್ಯವಿಧಾನದಲ್ಲೂ ಒಂದು ಪ್ರಗತಿ ಇರಲಿಲ್ಲ' ಎಂದು ತಿಳಿಸಿದರು.

'ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಬೆಳೆಯುತ್ತಿಲ್ಲ . ನನಗೆ ಈಗಾಗಲೇ 58 ವರ್ಷ ವಯಸ್ಸಾಗಿದೆ. ಆದ್ದರಿಂದ ಇನ್ನಷ್ಟು ಸಮಯ ವ್ಯರ್ಥ ಮಾಡದೇ ಬಿಜೆಪಿಗೆ ಸೇರಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬ ಆಶಯದೊಂದಿಗೆ ಇಲ್ಲಿ ಸೇರ್ಪಡೆ ಆಗಿದ್ದೇನೆ. ನನ್ನ ಪಾತ್ರವನ್ನು, ನನ್ನ ಹೊಣೆಗಾರಿಕೆಯನ್ನು ಪಕ್ಷ ಬಯಸುವ ಕೆಲಸವನ್ನು ಮಾಡಲು ಬದ್ಧನಾಗಿದ್ದೇನೆ' ಎಂದು ಹೇಳಿದರು.

'ಮೋದಿಜಿ, ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಯಡಿಯೂರಪ್ಪ, ಕಟೀಲ್, ಪ್ರಲ್ಹಾದ ಜೋಶಿ ಅವರ ಪಕ್ಷದ ಜೊತೆ ಇರಲು ಬಂದಿದ್ದೇನೆ. ಪಕ್ಷದ ಕಾರ್ಯಕ್ರಮಗಳಿಗೆ ಸಹಕರಿಸುವೆ. ಅಖಂಡ ಭಾರತವನ್ನು ಗಟ್ಟಿಯಾಗಿ ಇಡಲು ಇದೊಂದೇ ಪಕ್ಷದಿಂದ ಸಾಧ್ಯ' ಎಂದರು.

PSI ಹಗರಣದ ಬಗ್ಗೆ ಹೇಳಿದ್ದೇನು?

'ಹಗರಣ ಆಗಿದೆ ಅಂತ ಹೇಳೋದಕ್ಕಿಂತ ಅದನ್ನು ಸರಿಪಡಿಸಿಕೊಳ್ಳೋದಕ್ಕೆ ಈಗ ಅವಕಾಶಗಳಿವೆ. ಪಿಎಸ್ಐ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಿ, ಯುವ ಜನತೆ ಮತ್ತೊಮ್ಮೆ ಅವಕಾಶ ನೀಡಬೇಕು. ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಟೀಕೆ, ಆರೋಪ ಮಾಡಿಲ್ಲ' ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. 

Similar News