×
Ad

ರಾಜ್ಯದಲ್ಲಿ ಸರಕಾರ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದೆ : ಅಹಿಂದ ಜನ ಚಳವಳಿ ಆರೋಪ

Update: 2023-03-01 22:11 IST

ಮಂಗಳೂರು: ಕರ್ನಾಟಕ ಸರಕಾರವು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವನ್ನು ಕಡೆಗಣಿಸಿದೆ. ಕೇಂದ್ರ ಸರಕಾರದಿಂದ ಪರಿಗಣಿಸಲ್ಪಟ್ಟಿ ಸಾಚಾರ್ ವರದಿಯ ಅನ್ವಯ ಹಿಂದಿನ ರಾಜ್ಯ ಸರಕಾರವು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಅಭಿವೃದ್ಧಿಗಾಗಿ ಜಾರಿಗೊಳಿಸಿದ ಹಲವಾರು ಕಾರ್ಯಕ್ರಮಗಳು ಈಗಿನ ಬಿಜೆಪಿ ನೇತೃತ್ವದ ಸರಕಾರ ಬಂದ ಬಳಿಕ ಕುಂಠಿತಗೊಂಡಿವೆ ಎಂದು  ಅಹಿಂದ ಜನ ಚಳವಳಿ (ರಿ) ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ವಕ್ತಾರ್ ಆರೋಪಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ  ಮಂಗಳವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಲ್ಪಸಂಖ್ಯಾತ ಸಮುದಾಯಗಳ ಶಿಕ್ಷಣಕ್ಕಾಗಿ ಈ ಹಿಂದೆ ನೀಡಲಾಗುತ್ತಿದ್ದ ಅನುದಾನದಲ್ಲಿ ಕಡಿತವಾಗಿದೆ ಎಂದರು.

ಅಲ್ಪಸಂಖ್ಯಾತರಿಗೆ  ಶಾಲಾ ಕಾಲೇಜುಗಳಲ್ಲಿ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಮತ್ತು ಉನ್ನತ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಪೂರ್ತಿ ಅನುದಾನವನ್ನು ನೀಡದೇ ಅವರ ಶಿಕ್ಷಣವು ಕುಂಠಿತಗೊಂಡಿರುತ್ತದೆ. ಅಲ್ಲದೆ ಸರಕಾರದಿಂದ ಈ ಹಿಂದೆ ಲಭ್ಯವಾಗುತ್ತಿದ್ದ ಗೃಹ ನಿರ್ಮಾಣ ಸಾಲ ಹಾಗೂ ಸಹಾಯಧನ ಕಡಿತಗೊಂಡಿದೆ ಎಂದರು.

ಸರಕಾರ ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದ್ದ ನೆರವನ್ನು ಮುಂದುವರಿಸುವಂತೆ ದ.ಕ. ಜಿಲ್ಲಾ ಅಹಿಂದ ಜನಚಳುವಳಿಯು ಒತ್ತಾಯಿಸುತ್ತದೆ. ಸರಕಾರವು ಈ ಬಗ್ಗೆ ನಿರ್ಲಕ್ಷ್ಯ  ತೋರಿದಲ್ಲಿ ಅದಕ್ಕಾಗಿ ಚಳುವಳಿಯ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಿಪಕ್ಷ ನಾಯಕ  ಸಿದ್ದರಾಮಯ್ಯನವರನ್ನು ಟಿಪ್ಪುವನ್ನು ಹೊಡೆದುರುಳಿಸಿದಂತೆ ಹೊಡೆದುರುಳಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣರು  ನೀಡಿರುವ ಹೇಳಿಕೆಯು  ಹಿಂಸೆ ಮತ್ತು ಕೊಲೆಗೆ ಪ್ರಚೋದನೆ ನೀಡುವಂತದ್ದಾಗಿದೆ.ಇದನ್ನು ಅಹಿಂದ ಚಳವಳಿ ಬಲವಾಗಿ ಖಂಡಿಸುತ್ತದೆ ಎಂದು ಯೂಸುಫ್ ವಕ್ತಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಹಿಂದ ಜನ ಚಳವಳಿ (ರಿ) ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಪದ್ಮನಾಭ ನರಿಂಗಾನ, ಉಪಾಧ್ಯಕ್ಷೆ ವಿಲಾಸಿನಿ, ಪದಾಧಿಕಾರಿಗಳಾದ ಉಮ್ಮರ್ ಕುಂಞಿ ಸಾಲೆತ್ತೂರು ಮತ್ತು ಮೀನಾಕ್ಷಿ ಉಪಸ್ಥಿತರಿದ್ದರು.

Similar News