ಮಾ 4 : ಪೊಯ್ಯತ್ತಬೈಲ್ ಉರೂಸ್ ಸಮಾಪನ
ಉಳ್ಳಾಲ: ಪೊಯ್ಯತ್ತಬೈಲ್ ಮಣಿವಾಠಿ ಬೀವಿ ದರ್ಗಾ ಶರೀಫ್‍ನಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮ ಮಾ. 4ರಂದು ಸಮಾಪನಗೊಳ್ಳಲಿದ್ದು, ಮಾ. 5ರಂದು ಹಗಲು ಉರೂಸ್ ಕಾರ್ಯಕ್ರಮ ಮತ್ತು ಮೌಲಿದ್ ಪಾರಾಯಣ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಪೊಯ್ಯತ್ತಬೈಲ್ ಉರೂಸ್ ಸಮಿತಿಯ ಪ್ರ. ಕಾರ್ಯದರ್ಶಿ ಹನೀಫ್ ಪಿ.ಕೆ. ತಿಳಿಸಿದರು.
ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವಧರ್ಮ ಸೌಹಾರ್ದ ಕೇಂದ್ರವಾಗಿರುವ ಮಣವಾಠಿ ಬೀವಿ ದರ್ಗಾ ಶರೀಫ್‍ನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಧರ್ಮದ ಜನರು ದರ್ಗಾಕ್ಕೆ ಭೇಟಿ ಭಾಗವಹಿಸುತ್ತಾರೆ. ಉರೂಸ್ ಸಮಾರೋಪದ ಅಂಗವಾಗಿ ಮಾ. 2ರಂದು ತಾಜುಶ್ಶರೀಹ ಹಾಗೂ ಮಾಣಿಕೋತ್ ಅನುಸ್ಮರಣೆ ನಡೆಯಲಿದೆ. ಅಸ್ಸಯ್ಯಿದ್ ಬದ್ರುದ್ದೀನ್ ತಂಙಳ್ ಬಾ-ಅಲವಿ ಚಿಪ್ಪಾರ್ ದುಆ ನೆರವೇರಿಸಲಿದ್ದು, ಅನುಸ್ಮರಣೆ ಪ್ರಭಾಷಣವನ್ನು ಅಸ್ಸಯ್ಯಿದ್ ಸಾದಾತ್ ತಂಙಳ್ ಗುರುವಾಯನಕೆರೆ ನಿರ್ವಹಿಸಲಿದ್ದಾರೆ. ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಮಾ. 4 ಶನಿವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಬ್ದು ಲ್ ಮಜೀದ್ ಫೈಝಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಸ್ಸಯ್ಯದ್ ಜಲಾಲುದ್ದೀನ್ ಜಮಲ್ಲೈಲಿ ತಂಙಳ್ ಪಾತೂರು ದುಆ ನೆರವೇರಿಸಲಿದ್ದಾರೆ. ಅಸ್ಸಯ್ಯದ್ ಬದ್ರುಸ್ಪಾದಾತ್ ಇಬ್ರಾಹಿಮುಲ್ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಙಳ್ ಉದ್ಘಾಟಿಸಲಿದ್ದಾರೆ. ಡಾ| ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೂಲೆ ಹಾಗೂ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್ ಪ್ರಭಾಷಣಗೈಯ್ಯಲಿದ್ದಾರೆ. ವೇದಕೆಯಲ್ಲಿ ಅಬ್ದುಲ್ ರಶೀದ್ ಉಳ್ಳಾಲ, ಜಮಾಅತ್ ಅಧ್ಯಕ್ಷ ಡಿಎಂಕೆ ಮುಹಮ್ಮದ್ ಉಪಸ್ಥಿತರಿರಲಿದ್ದಾರೆ ಎಂದರು.
ಮಾ. 5ರಂದು ಹಗಲು ಉರೂಸ್ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಖತ್ ಮುಲ್ ಖುರ್ ಆನ್ ಹಾಗೂ ಮಖಾಮ್ ಝಿಯಾರತ್, ಬೆಳಗ್ಗೆ 11ಕ್ಕೆ ಮೌಲಿದ್ ಪಾರಾಯಣ ಹಾಗೂ ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ನಿರಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿಯ ಅಧ್ಯಕ್ಷ ಡಿಎಂಕೆ ಮುಹಮ್ಮದ್, ಖಜಾಂಜಿ ಸಿದ್ದೀಕ್ ಹಾಜಿ ಟಿ.ಎ., ಪ್ರಚಾರ ಸಮಿತಿ ಅಧ್ಯಕ್ಷ ಮುಹಮ್ಮದ್ ಹಾಜಿ ಅಸನಬೈಲ್, ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ಉಪಸ್ಥಿತರಿದ್ದರು.