ಪಂಚಮಸಾಲಿ ಮೀಸಲಾತಿ ಒತ್ತಾಯಿಸಿ ಮಾ.4ಕ್ಕೆ ರಾಜ್ಯಾದ್ಯಂತ ರಸ್ತೆ ತಡೆ

Update: 2023-03-02 13:49 GMT

ಬೆಂಗಳೂರು, ಮಾ.2: ಹಿಂದುಳಿದ ವರ್ಗದ ಪ್ರವರ್ಗ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಮಾ.4ಕ್ಕೆ ರಾಜ್ಯಾದ್ಯಂತ ರಸ್ತೆ ತಡೆ ಚಳವಳಿ ನಡೆಸಲು ನಿರ್ಧರಿಸಿದೆ.

ಆನವರಿ 14ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಿರಂತರ ಧರಣಿ ನಡೆಸುತ್ತಿರುವ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಮೃತ್ಯುಂಜಯ ಸ್ವಾಮೀಜಿ ಅವರು, ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಾ.4ಕ್ಕೆ ಸತ್ಯಾಗ್ರಹ 50ನೆ ದಿನಕ್ಕೆ ಕಾಲಿಡುತ್ತಿದೆ. ಇಷ್ಟೊಂದು ಸುದೀರ್ಘ ಸತ್ಯಾಗ್ರಹ ಪಂಚಮಸಾಲಿ ಇತಿಹಾಸದಲ್ಲೇ ಪ್ರಥಮ. ತಮ್ಮ ಬೇಡಿಕೆ ಈಡೇರದಿರುವುದು ನೋವು ತಂದಿದೆ. ಹೃದಯವಿಲ್ಲದ ಈ ಸರಕಾರ, ಸಿಎಂ ಹಾಗೂ ಸಚಿವರು ಯಾವುದೇ ಸ್ಪಂದನೆ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಮೀಸಲಾತಿ ಬೇಡಿಕೆ ಈಡೇರಿಕೆಗೆ ಮಾ.15ರವರೆಗೂ ಕಾಲಾವಕಾಶ ನೀಡಲಾಗಿದೆ. ನಂತರ ಸತ್ಯಾಗ್ರಹಕ್ಕೆ ಸ್ವಲ್ಪವಿರಾಮ ನೀಡಿ ರಾಜ್ಯಾದ್ಯಂತ 224 ವಿಧಾನ ಸಭಾಕ್ಷೇತ್ರದಲ್ಲಿ ಸರಕಾರ ಮಾಡಿದ ಅನ್ಯಾಯಗಳನ್ನು ಜನತಾ ನ್ಯಾಯಾಲಯದ ಮುಂದೆ ತಿಳಿಸಲಾಗುವುದು ಎಂದರು.

ಸರಕಾರದ ಗಮನ ಸೆಳೆಯಲು ಮಾ.4ರಂದು ಬೆಳಗ್ಗೆ 11ಗಂಟೆಗೆ ರಾಜ್ಯಾದ್ಯಂತ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಗ್ರಾಮ ರಸ್ತೆಗಳನ್ನು ಬಂದ್ ಮಾಡಿ, ಚಳವಳಿ ನಡೆಸಲಾಗುವುದು ಎಂದು ಅವರು ಹೇಳಿದರು.

Similar News