ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್’ ಬಗ್ಗೆ ವಿಶ್ವಾಸವಿಡಿ: ರಣದೀಪ್ ಸಿಂಗ್ ಸುರ್ಜೇವಾಲ

ದ.ಕ. ಜಿಲ್ಲಾ ಕಾಂಗ್ರೆಸ್ ನಾಯಕರ ಸಭೆಯಲ್ಲಿ ‘ಗ್ಯಾರಂಟಿ ಕಾರ್ಡ್’ ಬಿಡುಗಡೆ

Update: 2023-03-02 14:13 GMT

ಮಂಗಳೂರು: ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಆಶ್ವಾಸನೆಯನ್ನು ಒಳಗೊಂಡ ‘ಗ್ಯಾರಂಟಿ ಕಾರ್ಡ್’ನ ಮೇಲೆ ಮತದಾರರು ಸಂಪೂರ್ಣವಾಗಿ ವಿಶ್ವಾಸವಿಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮನವಿ ಮಾಡಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಬೆಂದೂರ್ ಸಂತ ಸೆಬಾಸ್ಟಿಯನ್ ಹಾಲ್‌ನಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ನ ‘ಗ್ಯಾರಂಟಿ ಕಾರ್ಡ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಯಾವತ್ತೂ ಕೂಡ ಸುಳ್ಳು ಆಶ್ವಾಸನೆಯನ್ನು ನೀಡುವುದಿಲ್ಲ. ಜಾರಿಗೊಳಿಸಬಹುದಾದ ಯೋಜನೆಗಳನ್ನಷ್ಟೇ ಪ್ರಕಟಿಸುತ್ತಿದೆ. ಈ ‘ಗ್ಯಾರಂಟಿ ಕಾರ್ಡ್’ನಲ್ಲಿ ನಮೂದಿಸಲಾದ ಪ್ರತೀ ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ., ಪ್ರತೀ ಮನೆಗೆ ಮಾಸಿಕ 200 ಯುನಿಟ್ ಉಚಿತ ವಿದ್ಯುತ್, ಪ್ರತಿಯೊಬ್ಬರಿಗೆ ಮಾಸಿಕ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು. ನಾನೊಬ್ಬ ಆರ್ಥಿಕ ತಜ್ಞನಾಗಿ ಈ ‘ಗ್ಯಾರಂಟಿ ಕಾರ್ಡ್’ ಎಂದೂ ನಮ್ಮ ಸರಕಾರಕ್ಕೆ ಆರ್ಥಿಕ ಹೊರೆಯಾಗುವುದಿಲ್ಲವೆಂದು ಖಚಿತಪಡಿಸಬಲ್ಲೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿವೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿವರನ್ನು ದೇಶದ ವಿವಿಧ ಕಡೆ ಹೋದಾಗಲೆಲ್ಲಾ ಶೇ.40 ಸರಕಾರದ ಮುಖ್ಯಮಂತ್ರಿ, ಪೇಸಿಎಂ ಎಂದು ಜನರು ಅಪಹಾಸ್ಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರರ ಸಂಘಟನೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಯು ರಾಜ್ಯ ಸರಕಾರದ ಕಮಿಷನ್ ಬಗ್ಗೆ ಪ್ರಧಾನಿಗೆ ದೂರು ನೀಡಿದರೂ ಕೂಡ ಪ್ರಯೋಜನವಾಗಿಲ್ಲ. ದೂರು ನೀಡಿದ ಬಳಿಕ ಪ್ರಧಾನಿ ರಾಜ್ಯಕ್ಕೆ 8 ಬಾರಿ ಭೇಟಿ ನೀಡಿದರೂ ಈ ಬಗ್ಗೆ ಸೊಲ್ಲೆತ್ತಲಿಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಾನು ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದ ಪ್ರಧಾನಿಯು ಇಂದು ತಿನ್ನಿ, ಲೂಟಿ ಮಾಡಿ ಎಂಬಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರೂ ಸೌಜನ್ಯಕ್ಕಾದರೂ ಪ್ರಧಾನಿ ಸಂತೋಷ್ ಪಾಟೀಲ್‌ರ ಮನೆಗೆ ಹೋಗಲಿಲ್ಲ.ಕಾರ್ಯಕರ್ತರನ್ನೇ ಲೂಟಿ ಮಾಡುವ ಬಿಜೆಪಿ ನಾಯಕರು ಇನ್ನು ಕರ್ನಾಟಕದ ಜನತೆಯನ್ನು ಬಿಟ್ಟಾರೆಯೇ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿಯವರೇ, ನಳಿನ್ ಕುಮಾರ್ ಕಟೀಲ್‌ರೇ, ಯಡಿಯೂರಪ್ಪ ಅವರೇ, ನಿಮಗೆ ಹಣ ಬೇಕಾ? ನಾವು ಕೊಡುತ್ತೇವೆ. ಆದರೆ ರಾಜ್ಯವನ್ನು ಲೂಟಿ ಮಾಡಬೇಡಿ ಎಂದು ವ್ಯಂಗ್ಯವಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯದ 8 ಸಚಿವರು, 17 ಬಿಜೆಪಿ ಶಾಸಕರ ವಿರುದ್ಧ ಕಮಿಷನ್ ಆರೋಪವಿದೆ. ಆದರೆ ಬಿಜೆಪಿ ಮುಖಂಡರು ಈ ಬಗ್ಗೆ ಮೌನ ತಾಳಿದ್ದಾರೆ. ಇದು ಡಬಲ್ ಇಂಜಿನ್ ಸರಕಾರವಲ್ಲ, ಡಬಲ್ ಕಮಿಷನ್ ಸರಕಾರ ಎಂದರು.

ಮುಖ್ಯಮಂತ್ರಿ ಸ್ಥಾನವು 2 ಸಾವಿರ ಕೋಟಿ ರೂ.ಗೆ ಹರಾಜಾಗಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಬಹಿರಂಗವಾಗಿ ಹೇಳಿರುವುದು ವಾಸ್ತವ ಸತ್ಯ. ಸರಕಾರಿ ಹುದ್ದೆಯನ್ನು ತರಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಹಾಗೇ ಮಾರಾಟ ಮಾಡಲಾಗುತ್ತದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
ಸಚಿವ ಅಶ್ವಥನಾರಾಯಣ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಯವರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ದಿನ ಮತ್ತು ಸಮಯ ಹಾಗೂ ಸ್ಥಳ ನಿಗದಿಪಡಿಸಲಿ. ನಾವು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ಕರೆತರುವೆವು. ನಮ್ಮಲ್ಲಿ ಬುಲೆಟ್ ಕಡಿಮೆಯಿರಬಹುದು. ಆದರೆ ಎದೆಗಾರಿಕೆ ಜಾಸ್ತಿ ಇದೆ. ಹಾಗಾಗಿ ರಾಜ್ಯದ ಜನತೆಗಾಗಿ ನಾವು ಯಾವುದಕ್ಕೂ ಸಿದ್ಧರಿದ್ದೇವೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹಾಕಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ ಕಾಂಗ್ರೆಸ್ ಅನೇಕ ಜನಪರ ಯೋಜನೆಗಳನ್ನು ಪ್ರಕಟಿಸಿದೆ. ಅದನ್ನು ಬಿಜೆಪಿಗರು ಮರೆಮಾಚಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ. ವಸ್ತುಸ್ಥಿತಿ ಏನು ಎಂಬುದನ್ನು ಕಾಂಗ್ರೆಸ್ಸಿಗರು ಮತದಾರರ ಮನೆಬಾಗಿಲಿಗೆ ಮುಟ್ಟಿಸಬೇಕು ಎಂದರು.

ವೇದಿಕೆಯಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಶಾಸಕ ಹಾಗೂ ಮೈಸೂರು ವಿಭಾಗದ ಕಾಂಗ್ರೆಸ್ ಉಸ್ತುವಾರಿ ರೋಜಿ ಜಾನ್, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಶಕುಂತಳಾ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಇನಾಯತ್ ಅಲಿ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಕೆ.ಕೆ.ಶಾಹುಲ್ ಹಮೀದ್, ಲುಕ್ಮಾನ್ ಬಂಟ್ವಾಳ, ರಾಜಶೇಖರ ಕೋಟ್ಯಾನ್, ನಿವೇದಿತಾ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

Similar News