ಮಾ.24ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

Update: 2023-03-05 15:03 GMT

ಬೆಂಗಳೂರು, ಮಾ. 5: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಸಾರಿಗೆ ನೌಕರರ ಒಕ್ಕೂಟ ಮಾ.24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ.

ಬಿಎಂಟಿಸಿ, ಕೆಎಸ್ಸಾರ್ಟಿಸಿ, ಎನ್‍ಡಬ್ಲ್ಯೂಕೆಆರ್‍ಟಿಸಿ ಹಾಗೂ ಕೆಕೆಆರ್‍ಟಿಸಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿಭಟನೆ ಹಿನ್ನೆಲೆ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದೆಂದು ಮುನ್ಸೂಚನೆ ನೀಡಲಾಗಿದೆ.

ಈ ಕುರಿತು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಆರ್.ಚಂದ್ರಶೇಖರ್ ಮಾತನಾಡಿ, ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತಾಗಿ ಸರಕಾರಕ್ಕೆ ನೂರಾರು ಮನವಿಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹತ್ತೂ ಹಲವು ಪ್ರತಿಭಟನೆಗಳ ಮೂಲಕವೂ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಾರಿಗೆ ನೌಕರರ ಬದುಕು ಸಂಕಷ್ಟದಲ್ಲಿದ್ದು, 2016ರಿಂದ ಈವರೆಗೆ ವೇತನ ಏರಿಕೆಯಾಗಿಲ್ಲ ಎಂದು ಆರೋಪಿಸಿದರು.

ಪ್ರಯಾಣಿಕರಿಗೆ ತೊಂದರೆ ಮಾಡಬಾರದು ಎನ್ನುವ ಉದ್ದೇಶದಿಂದ ಇಷ್ಟು ದಿನ ಮುಷ್ಕರದ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ನಾವು ಹೀಗೆ ಮುಂದುವರಿದರೆ ಸರಕಾರ ಎಚ್ಚೆತ್ತುಕೊಳ್ಳುವುದಿಲ್ಲ. ಆದ್ದರಿಂದ ಸಾವಿರಾರು ಸಾರಿಗೆ ನೌಕರರ ಬದುಕಿನ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಗ್ರ ಹೋರಾಟದ ಅನಿವಾರ್ಯತೆ ಇದೆ. ಮಾರ್ಚ್ 24ರಿಂದ ಸೇವೆಗೆ ಹಾಜರಾಗದೆ ನೌಕರರು ಮುಷ್ಕರಕ್ಕೆ ನಿರ್ಧರಿಸಿದ್ದು, ವೇತನ ಏರಿಕೆಯೊಂದಿಗೆ 2021ರಲ್ಲಿ ವಜಾಗೊಂಡಿರುವ ನೌಕರರು ಮರುನೇಮಕವಾಗಬೇಕು ಎಂದು ಆಗ್ರಹಿಸಿದರು.

Similar News