ಮಾಡಾಳ್ ಪ್ರಕರಣ | BJP ಸರಕಾರದ ಭ್ರಷ್ಟಾಚಾರದ ಮತ್ತೊಂದು ಮುಖವಾಡ ಕಳಚಿದೆ: ರಾಮಲಿಂಗಾರೆಡ್ಡಿ ಕಿಡಿ

Update: 2023-03-08 12:52 GMT

ಬೆಂಗಳೂರು, ಮಾ. 8: ‘ಸರಕಾರ ಹಾಗೂ ಸರಕಾರಿ ವಕೀಲರ ಬೆಂಬಲ ಇಲ್ಲವಾದರೆ ಒಂದೇ ದಿನದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಸಿಗಲು ಹೇಗೆ ಸಾಧ್ಯ? ಬೇರೆ ಪಕ್ಷದವರಿಗೆ ಇಂತಹ ಪ್ರಕರಣದಲ್ಲಿ 2-3 ತಿಂಗಳಾದರೂ ಜಾಮೀನು ಸಿಗುವುದಿಲ್ಲ. ಮಾಡಾಳ್ ಪ್ರಕರಣ ಬಿಜೆಪಿ (Bharatiya Janata Party) ಸರಕಾರದ ಭ್ರಷ್ಟಾಚಾರದ ಮತ್ತೊಂದು ಮುಖವಾಡ ಕಳಚಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಭ್ರಷ್ಟಾಚಾರಗಳು ಬೆಳಕಿಗೆ ಬಂದಿದ್ದು, ಪಿಎಸ್ಸೈ ಹಗರಣ ಸೇರಿದಂತೆ ಅನೇಕ ನೇಮಕಾತಿ ಹಗರಣ ನಡೆದಿವೆ. ಈ ಬಗ್ಗೆ ವಿಪಕ್ಷಗಳು ಹೇಳುವುದು ಮಾತ್ರವಲ್ಲದೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಇಷ್ಟಾದರೂ ಬಿಜೆಪಿ ಸರಕಾರರ ಸಾಕ್ಷಿ ಕೊಡಿ ಎನ್ನುತ್ತಿದ್ದರು. ಆದರೆ, ಈಗ ಬಿಜೆಪಿ ಶಾಸಕರು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದಾರೆ ಎಂದು ಟೀಕಿಸಿದರು.

‘ನಾನು ಮನೆಯಲ್ಲೇ ಇದ್ದೆ ಏಲ್ಲೂ ಹೋಗಿಲ್ಲ ಎಂದು ಶಾಸಕರು ಹೇಳಿದ್ದು, ಸರಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟು ನಿಷ್ಕ್ರಿಯವಾಗಿದೆ ಎಂಬುದಕ್ಕೆ ಇದು ಸಾಕ್ಷಿ. ಈ ಸರಕಾರದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರೇ ಹೆಚ್ಚು ಭ್ರಷ್ಟಾಚಾರ ಮಾತನಾಡಿದ್ದಾರೆ. ಇಷ್ಟಾದರೂ ಬಿಜೆಪಿಯ ಭಂಡ ಸರಕಾರ ಸಾಕ್ಷಿ ಕೇಳುತ್ತಿದೆ. ಇದೀಗ ಅವರು ಸಾಕ್ಷಿ ಸಮೇತ ಸಿಕ್ಕಿಬಿದ್ದಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ಭ್ರಷ್ಟ ಸಂಸ್ಕೃತಿ: ‘ಭ್ರಷ್ಟರ ರಕ್ಷಣೆ ಬಿಜೆಪಿಗೆ ಹೊಸದೇನಲ್ಲ, ಸಾಧ್ವಿ ಪ್ರಘ್ಯಾ ಸಿಂಗ್ ಅವರು ಭಯೋತ್ಪಾದಕ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ ಬಿಜೆಪಿಯವರು ಅವರಿಗೆ ಟಿಕೆಟ್ ನೀಡಿ ಸಂಸದರನ್ನಾಗಿ ಮಾಡಿದೆ. ಇನ್ನು ಗುಜರಾತಿನಲ್ಲಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದು, ಅವರಿಗೆ ಭವ್ಯ ಸ್ವಾಗತ ಮಾಡಿದ್ದಾರೆ. ಬಿಜೆಪಿ ಸಂಸ್ಕೃತಿಯೇ ಈ ರೀತಿ ಇದೆ’ ಎಂದು ಅವರು ವಾಗ್ದಾಳಿ ನಡೆಸಿದರು.

‘ಶಿವಕುಮಾರ್ ಪ್ರಕರಣವೇ ಬೇರೆ, ಈ ಪ್ರಕರಣವೇ ಬೇರೆ. ಆಗ ಸಾರ್ವಜನಿಕ ಸಭೆ ಮಾಡಿ ಅವರಿಗೆ ಆದ ಅನ್ಯಾಯದ ಬಗ್ಗೆ ತಿಳಿಸಲಾಗಿತ್ತು. ಅವರದು ಲಂಚದ ಪ್ರಕರಣವಾಗಿರಲಿಲ್ಲ’ ಎಂದು ಅವರು, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಪೊಲೀಸ್ ಇಲಾಖೆ ಸರಕಾರ ಹೇಳಿದಂತೆ ಕೇಳಬೇಕು. ಸರಕಾರದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅವರು ದೂರಿದರು. 

Similar News