ಮಂಗಳೂರು : ಅಪಾರ್ಟ್‌ಮೆಂಟ್ ನಲ್ಲಿ ಬೆಂಕಿ ಅವಘಡ
Update: 2023-03-08 22:49 IST
ಮಂಗಳೂರು, ಮಾ.8: ನಗರದ ಅತ್ತಾವರದ ಅಪಾರ್ಟ್ ಮೆಂಟ್‌ವೊಂದರಲ್ಲಿ ಬುಧವಾರ ಅಲ್ಪ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ತಕ್ಷಣ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ, ಸಂಭಾವ್ಯ ಅನಾಹುತ ತಪ್ಪಿಸಿದೆ ಎಂದು ತಿಳಿದು ಬಂದಿದೆ.
ಮೂರು ಅಂತಸ್ತಿನ ಅಪಾರ್ಟ್ ಮೆಂಟ್‌ನ ಎರಡನೇ ಮಹಡಿಯಲ್ಲಿರುವ ಫ್ಲ್ಯಾಟ್ ನಿಂದ ರಾತ್ರಿ ಸುಮಾರು 7:30ರ ವೇಳೆಗೆ ಹೊಗೆ ಬರುತ್ತಿದ್ದುದನ್ನು ಗಮನಿಸಿದ ಇತರ ಫ್ಲ್ಯಾಟ್ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಬೆಂಕಿ ಕಾಣಿಸಿಕೊಂಡ ಫ್ಲ್ಯಾಟ್‌ನ ಜನರು ಬೆಂಗಳೂರಿಗೆ ತೆರಳಿದ್ದು, ಬಾಗಿಲು ಮುಚ್ಚಿರುವುದು ಕಂಡು ಬಂದಿದೆ. ಹಾಗಾಗಿ ಅಗ್ನಿಶಾಮಕ ದಳದವರು ಬಾಗಿಲು ತೆರೆದು ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡದಿಂದ ಬೆಡ್ ರೂಮ್ ನಲ್ಲಿದ್ದ ಕೆಲವು ಪರಿಕರಗಳು ಸುಟ್ಟು ಹೋಗಿರುವುದಾಗಿ ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.