ತಲಾ ಆದಾಯ ದುಪ್ಪಟ್ಟು! ನಿಜವಾಗಿಯೂ ಬಂತೇ ಅಚ್ಛೇ ದಿನ್?

Update: 2023-03-11 11:16 GMT

ದೇಶದ ತಲಾ ಆದಾಯ 2014-15ರಲ್ಲಿ ಇದ್ದುದಕ್ಕಿಂತ ದುಪ್ಪಟ್ಟಾಗಿದೆಯಂತೆ. ‘ಬಿಸಿನೆಸ್ ಸ್ಟ್ಯಾಂಡರ್ಡ್’ ವರದಿ ಪ್ರಕಾರ, 2014-15ರಲ್ಲಿ ಹಾಲಿ ದರದಲ್ಲಿ ರಾಷ್ಟ್ರೀಯ ತಲಾ ಆದಾಯ 86,647 ರೂ. ಇದ್ದದ್ದು ಈಗ 1,72,000 ರೂ. ಆಗಿದೆ. ಅಂದರೆ ಶೇ. 98.5ರಷ್ಟು ಹೆಚ್ಚಳವಾಗಿದೆ. ಆದರೆ ಇದು ಹಿಂದಿನ ವರ್ಷಗಳಲ್ಲಿ ಕಂಡುಬಂದ ಬೆಳವಣಿಗೆಗಿಂತ ಕಡಿಮೆ. 2014-15ರವರೆಗಿನ ಎಂಟು ವರ್ಷಗಳಲ್ಲಿ ಕಂಡುಬಂದ ಏರಿಕೆ ಶೇ. 157 ಇತ್ತು. ರಾಷ್ಟ್ರೀಯ ತಲಾ ಆದಾಯ 2006-07ರಲ್ಲಿ 33,717ರಿಂದ 2014-15ರಲ್ಲಿ 86,647ಕ್ಕೆ ಏರಿತ್ತು ಎಂದು ವರದಿ ಹೇಳಿದೆ.

ಹಾಗಾದರೆ, ದುಪ್ಪಟ್ಟಾಗಿದೆ ಎಂದು ಹೇಳಲಾಗುತ್ತಿರುವಂತೆ ನಿಜವಾಗಿಯೂ ದೇಶದ ತಲಾ ಆದಾಯ ಏರಿದೆಯೇ?
ಆರ್ಥಿಕ ಪ್ರಗತಿ ದೊಡ್ಡಮಟ್ಟದಲ್ಲಿ ಆಗಿದೆಯೆ?

ಇದನ್ನು ನೋಡುವ ಮೊದಲು ಏನಿದು ತಲಾ ಆದಾಯ ಎಂಬುದನ್ನು ನೋಡಬೇಕು. ದೇಶದ ಒಟ್ಟು ಆದಾಯವನ್ನು ದೇಶದ ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ದೇಶದ ತಲಾ ಆದಾಯ ಲೆಕ್ಕಹಾಕಲಾಗುತ್ತದೆ. ನಿಜವೇನೆಂದರೆ, ಕೆಲವೇ ಶ್ರೀಮಂತರ ಆದಾಯದಲ್ಲಿ ದೊಡ್ಡ ಪ್ರಮಾಣದ ಏರಿಕೆಯಾಗಿರುತ್ತದೆ. ಜನಸಾಮಾನ್ಯರ ಆದಾಯದಲ್ಲಿ ಏರಿಕೆಯೇ ಆಗದೆ ಇರಲೂಬಹುದು ಅಥವಾ ಇನ್ನಷ್ಟು ಇಳಿಕೆಯೇ ಆಗಿರಬಹುದು. ಈ ಏರಿಳಿತವನ್ನು ತಲಾ ಆದಾಯದ ಲೆಕ್ಕಾಚಾರದ ವೇಳೆ ಪರಿಗಣಿಸಲಾಗುವುದಿಲ್ಲ. ಹಾಗಾಗಿ ದೇಶದ ತಲಾ ಆದಾಯ ಎನ್ನುವುದು ದೇಶದ ಎಲ್ಲರ ಆದಾಯವಲ್ಲ. ಅದು ಆದಾಯದ ಅಸಮಾನ ಹಂಚಿಕೆಯನ್ನು ತೋರಿಸುವುದೇ ಇಲ್ಲ. ಅದು ಜೀವನಮಟ್ಟದ ಪಕ್ಕಾ ಚಿತ್ರಣವನ್ನು ಒದಗಿಸುವುದಿಲ್ಲ.
ಅಲ್ಲದೆ, ಈಗ ದೇಶದ ತಲಾ ಆದಾಯ ದುಪ್ಪಟ್ಟಾಗಿದೆ ಎಂದು ತೋರಿಸಲಾಗುತ್ತಿರುವುದು ಹಾಲಿ ದರದ ಲೆಕ್ಕಾಚಾರದಲ್ಲಿ. ಹಾಲಿ ದರದಲ್ಲಿ ಲೆಕ್ಕಾಚಾರ ಮಾಡಲಾಗುವ ದೇಶದ ತಲಾ ಆದಾಯ, ಹಣದುಬ್ಬರದ ಕಾರಣದಿಂದ ಜನರ ಜೀವನವೆಚ್ಚದಲ್ಲಿ ಆಗಿರುವ ಏರಿಕೆಯನ್ನು ಪರಿಗಣಿಸುವುದಿಲ್ಲ. ಹಾಗಾಗಿ ಇದು ವಾಸ್ತವ ಚಿತ್ರಣವಲ್ಲ ಎನ್ನುತ್ತಾರೆ ಪರಿಣಿತರು.

ಹಣದುಬ್ಬರ ಪ್ರಮಾಣವನ್ನೂ ಪರಿಗಣಿಸಿ ಲೆಕ್ಕಾಚಾರ ಮಾಡಲಾಗುವ ಸ್ಥಿರ ದರದ ತಲಾ ಆದಾಯ ನಿಜವಾದ ಆರ್ಥಿಕ ಚಿತ್ರಣವನ್ನು ಕೊಡುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅದರಂತೆ ಸ್ಥಿರದರದ ಲೆಕ್ಕಾಚಾರದ ತಲಾ ಆದಾಯದಲ್ಲಿ ಅಂಥ ಏರಿಕೆಯೇನೂ ಆಗಿಲ್ಲ ಎಂಬುದನ್ನು ಅಂಕಿಅಂಶಗಳೇ ಹೇಳುತ್ತಿವೆ. ಸ್ಥಿರ ದರದಲ್ಲಿ ತಲಾ ಆದಾಯ 2014-15ರಲ್ಲಿ 72,805 ರೂ.ನಷ್ಟಿತ್ತು. ಅದು 2022-23ರಲ್ಲಿ 98,118 ರೂ. ಗೆ ಏರಿದೆ. ಅಂದರೆ ಏರಿಕೆ ಪ್ರಮಾಣ ಶೇ. 35ರಷ್ಟು ಮಾತ್ರ.

ಅರ್ಥಶಾಸ್ತ್ರಜ್ಞೆ ಜಯತಿ ಘೋಷ್, ಹಾಲಿ ದರದಲ್ಲಿ ಜಿಡಿಪಿಯನ್ನು ನೋಡುತ್ತಿರುವುದರಿಂದ ದುಪ್ಪಟ್ಟಾಗಿದೆ ಎನ್ನಿಸುತ್ತಿದೆ. ಆದರೆ ಹಣದುಬ್ಬರವನ್ನು ಲೆಕ್ಕ ಹಾಕಿದರೆ ಹೆಚ್ಚಳವು ತುಂಬಾ ಕಡಿಮೆ ಎಂದಿರುವುದು ಇದನ್ನೇ. ಅವರ ಪ್ರಕಾರ, ಈ ಹೆಚ್ಚಳದ ಬಹುತೇಕ ಭಾಗ ಜನಸಂಖ್ಯೆಯ ಶೇ. 10ರಷ್ಟಿರುವ ಅತ್ಯಂತ ಶ್ರೀಮಂತರಿಗೆ ಸೇರಿದ್ದು.

ಆಕ್ಸ್ ಫಾಮ್ ಇಂಡಿಯಾ ವರದಿಯ ಪ್ರಕಾರ, 2021ರಲ್ಲಿ ಭಾರತದಲ್ಲಿನ ಜನಸಂಖ್ಯೆಯ ಶೇ.1ರಷ್ಟಿರುವ ಟಾಪ್ ಶ್ರೀಮಂತರ ಕೈಯಲ್ಲಿ ದೇಶದ ಒಟ್ಟು ಸಂಪತ್ತಿನ ಶೇ. 40.5ಕ್ಕಿಂತ ಹೆಚ್ಚು ಇದೆ. ಆದರೆ ಕೆಳಗಿನ ಶೇ. 50ರಷ್ಟು ಅಥವಾ 70 ಕೋಟಿ ಜನರ ಬಳಿ ಇರುವುದು ಒಟ್ಟು ಸಂಪತ್ತಿನ ಸುಮಾರು ಶೇ. 3ರಷ್ಟು ಮಾತ್ರ. ಕೋವಿಡ್ ಸಮಯದಲ್ಲಂತೂ ಶ್ರೀಮಂತರು ಇನ್ನೂ ಶ್ರೀಮಂತರಾದರು ಮತ್ತು ಅವರ ಸಂಪತ್ತು ಶೇ. 121ರಷ್ಟು ಏರಿತ್ತು. ಒಂದು ದಿನಕ್ಕೆ 3,608 ಕೋಟಿ ರೂ.ಗಳ ಹಾಗೆ ಅವರ ಆದಾಯ ಹೆಚ್ಚಳವಾಗಿತ್ತು.

ಆದ್ದರಿಂದಲೇ ಒಂದು ದೇಶದ ತಲಾ ಆದಾಯವು ಹೆಚ್ಚಿದ್ದರೆ, ಅದು ಒಟ್ಟು ಜನಸಂಖ್ಯೆಯ ಆದಾಯವೇ ಹೆಚ್ಚಾಗಿದೆ ಎಂದು ಅರ್ಥವಲ್ಲ. ಹಾಗಾಗಿ, ದೇಶದ ತಲಾ ಆದಾಯ ದುಪ್ಪಟ್ಟಾಗಿದೆ ಎಂದು ಈಗ ಹೇಳಲಾಗುತ್ತಿರುವುದು ವಾಸ್ತವ ಅಂಶವಲ್ಲ.

ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಅರುಣ್ ಕುಮಾರ್ ಪ್ರಕಾರ, ರಾಷ್ಟ್ರೀಯ ಆದಾಯ ಸೂಚಕವು ತಲಾ ಆದಾಯ ಎಷ್ಟು ಎಂಬುದನ್ನು ತೋರಿಸುತ್ತದೆ. ಆದರೆ ಶ್ರೀಮಂತರು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿರುವುದನ್ನೂ ಬಡವರು ಹೆಚ್ಚು ಪಡೆಯುತ್ತಿಲ್ಲ ಎಂಬ ಅಂಶವನ್ನೂ ಅದು ಮರೆಮಾಚುತ್ತದೆ.
ತಲಾ ಆದಾಯ ಎಂಬುದು ಸರಾಸರಿ ಸೂಚಕ. ಆದರೆ ಸರಾಸರಿ ವಿತರಣೆಯನ್ನು ಅದು ತೋರಿಸುವುದಿಲ್ಲ. ಭಾರತ ತೀವ್ರ ಅಸಮಾನತೆಯನ್ನು ಹೊಂದಿರುವ ದೇಶ. ಆದ್ದರಿಂದ, ತಲಾ ಆದಾಯವು ಕೆಳಭಾಗದ ಶೇ. 60-70ರಷ್ಟು ಜನರ ಸ್ಥಿತಿಯನ್ನು ನಿಖರವಾಗಿ ತಿಳಿಸುವುದಿಲ್ಲ. ಹಾಗಾಗಿ, ತಲಾ ಆದಾಯದ ಹೆಚ್ಚಳವಾದಂತೆಯೆ ತಳಮಟ್ಟದ ಶೇ. 60-70ರಷ್ಟು ಜನಸಂಖ್ಯೆಯ ಜೀವನವೂ ಅಷ್ಟೇ ಮಟ್ಟದಲ್ಲಿ ಸುಧಾರಿಸಿದೆ ಎಂದು ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಪ್ರೊ. ಅರುಣ್ ಕುಮಾರ್.

ಅವರು ವಿವರಿಸುವ ಇನ್ನೂ ಒಂದು ಆಯಾಮವೆಂದರೆ, ವೇತನ ಪಡೆಯದ ಅಥವಾ ಉಚಿತ ಕೆಲಸ ಮಾಡುವ ಗೃಹಿಣಿಯರನ್ನು ರಾಷ್ಟ್ರೀಯ ಆದಾಯದಲ್ಲಿ ಸೇರಿಸಲಾಗಿಲ್ಲ. ಹಾಗಾಗಿ, ತಲಾ ಆದಾಯವು ಆರ್ಥಿಕವಾಗಿ ಕೆಳವರ್ಗದ ಜನರ ಜೀವನಮಟ್ಟವನ್ನು ಕುರಿತು ಹೇಳುವುದಿಲ್ಲ. ಅದು ಶೇ. 5 ಅಥವಾ ಶೇ.1ರಷ್ಟಿರುವ ಶ್ರೀಮಂತರ ಪ್ರಗತಿಯನ್ನು ಮಾತ್ರ ಬಿಂಬಿಸುತ್ತದೆ ಎಂಬುದು.

ಅಲ್ಲದೆ, ಭಾರತದಲ್ಲಿ ಶೇ. 6ರಷ್ಟು ಕೆಲಸಗಾರರು ಮಾತ್ರ ಸಂಘಟಿತ ವಲಯದಲ್ಲಿ ದುಡಿಯುವವರು. ಉಳಿದ ಶೇ. 94ರಷ್ಟು ಮಂದಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರು. ಅವರ ಆದಾಯ ಏರುವುದಿಲ್ಲ. ಶ್ರೀಮಂತರ ಆದಾಯವಷ್ಟೇ ಹೆಚ್ಚುತ್ತಿದೆ. ಕಾರ್ಪೊರೇಟ್ ವಲಯದ ಸ್ಥಿತಿ ಉತ್ತಮವಾಗಿದೆ. ಷೇರುಗಳಲ್ಲಿ ಹೂಡಿಕೆ ಮಾಡಿದವರ ಸಂಪತ್ತು ಹೆಚ್ಚಿರಬಹುದು. ಆದರೆ ಕೆಳಗಿರುವ ಶೇ. 90ರಷ್ಟು ಜನರ ಪಾಲಿಗೆ ಈ ಭಾಗ್ಯವಿಲ್ಲ ಎನ್ನುತ್ತಾರೆ ಅವರು.

ಜನವರಿಯಲ್ಲಿ ಬಿಡುಗಡೆಯಾದ ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ವರದಿ ಪ್ರಕಾರ, 2022-23ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕುಟುಂಬಗಳ ನಿವ್ವಳ ಆರ್ಥಿಕ ಉಳಿತಾಯ ಮೂರು ದಶಕಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ಜನರು ಮೂಲಭೂತ ಅಗತ್ಯಗಳಿಗಾಗಿ ಖರ್ಚು ಮಾಡಲು ಸಾಲ ಮಾಡಿರುವ ಸಾಧ್ಯತೆಯೇ ಹೆಚ್ಚು ಎಂದು ಆ ವರದಿ ಹೇಳುತ್ತದೆ.

ಜಿಡಿಪಿ ಡೇಟಾ ಸರಿಯಾಗಿಲ್ಲ. ಏಕೆಂದರೆ ಅದರಲ್ಲಿ ಅಸಂಘಟಿತ ವಲಯದಲ್ಲಿನ ಕುಸಿತವನ್ನು ಲೆಕ್ಕಾಚಾರ ಮಾಡುತ್ತಿಲ್ಲ ಎಂಬುದರ ಕಡೆಗೂ ಪರಿಣಿತರು ಗಮನ ಸೆಳೆಯುತ್ತಾರೆ. ಜಿಡಿಪಿ ದತ್ತಾಂಶವೇ ತಪ್ಪಾಗಿರುವಾಗ ತಲಾ ಆದಾಯ ಲೆಕ್ಕಾಚಾರ ಕೂಡ ತಪ್ಪುಎಂಬುದು ತಜ್ಞರ ಅಭಿಪ್ರಾಯ.
ಒಟ್ಟಾರೆಯಾಗಿ, ತಲಾ ಆದಾಯ ಎಂಬುದು ಭಾರತೀಯರ ಸರಾಸರಿ ಆದಾಯ. ಸರಾಸರಿಯು ಹೆಚ್ಚುತ್ತಿರುವ ಅಸಮಾನತೆ ಬಗ್ಗೆ ಹೇಳುವುದೇ ಇಲ್ಲ. ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ ಮತ್ತು ಬಡವರು ಇನ್ನೂ ಬಡವರಾಗುತ್ತಿದ್ದಾರೆ. ಆದರೆ ದೇಶದ ತಲಾ ಆದಾಯ, ದೇಶದ ಪ್ರತಿಯೊಬ್ಬರ ಆದಾಯ ಎಂಬರ್ಥದಲ್ಲಿ ಬಿಂಬಿತವಾಗುತ್ತಿದೆ. ಸರಕಾರ ಬಡಾಯಿ ಕೊಚ್ಚಿಕೊಳ್ಳಲು ಮತ್ತೊಂದು ದಾರಿಯಾಗುತ್ತದೆ ಅಷ್ಟೆ.
ಬಡವರ, ಹಸಿದವರ ಕಷ್ಟ ಆ ಬಡಾಯಿಗಳ ನಡುವೆ ಸದ್ದಿಲ್ಲದಂತಾಗಿ ಹೋಗುತ್ತದೆ. ವಾಸ್ತವ ಮರೆಗೆ ಸರಿಯುತ್ತದೆ.

Similar News