ಕಂಬಳ ನಾಡಕ್ರೀಡೆಯಾಗಿ ಘೋಷಣೆಯಾಗಬೇಕು: ಮಂಜುನಾಥ ಭಂಡಾರಿ

Update: 2023-03-11 17:14 GMT

ಉಪ್ಪಿನಂಗಡಿ: ಕಂಬಳವೆನ್ನುವುದು ನಮ್ಮ ಜನಪದೀಯ ಕ್ರೀಡೆಯಾಗಿದ್ದು, ಇದನ್ನು ನಾಡ ಕ್ರೀಡೆಯಾಗಿ ಘೋಷಿಸ ಬೇಕೆಂದು ನಾನೀಗಾಗಲೇ ಸರಕಾರದ ಮುಂದೆ ಪ್ರಸ್ತಾಪಿಸಿದ್ದೇನೆ. ಸರಕಾರವು ಇದಕ್ಕಾಗಿ ಅಧ್ಯಯನ ಸಮಿತಿಯನ್ನು ರಚನೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದರು.

ಇಲ್ಲಿನ ಹಳೆಗೇಟು ಬಳಿಯ ನೇತ್ರಾವತಿ ನದಿ ಕಿನಾರೆಯಲ್ಲಿ ನಡೆಯುತ್ತಿರುವ 37ನೇ ವರ್ಷದ ಹೊನಲು ಬೆಳಕಿನ ವಿಜಯ- ವಿಕ್ರಮ ಜೋಡುಕರೆ ಕಂಬಳದಲ್ಲಿ ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಂಬಳವೆನ್ನುವುದು ಈ ನಾಡಿನ ಸಂಭ್ರಮವಾಗಬೇಕು. ಅದಕ್ಕಾಗಿ ಇದನ್ನು ಸರಕಾರ ನಾಡ ಕ್ರೀಡೆಯಾಗಿ ಘೋಷಣೆ ಮಾಡಬೇಕೆಂಬ ಪ್ರಸ್ತಾಪವನ್ನು ನಾನು ಸರಕಾರದ ಮುಂದಿಟ್ಟಿದ್ದೇನೆ. ಅದಕ್ಕಾಗಿ ಸರಕಾರವು ಅಧ್ಯಯನ ಸಮಿತಿಯನ್ನು ಮಾಡಿದ್ದು, ಈ ಬಾರಿಯಲ್ಲದಿದ್ದರೂ ಮುಂದಿನ ಬಾರಿಯಾದರೂ ಕಂಬಳವು ನಾಡ ಕ್ರೀಡೆಯಾಗಿ ಘೋಷಣೆಯಾಗುತ್ತದೆ ಎಂಬ ವಿಶ್ವಾಸವಿದೆ ಎಂದ ಅವರು, ಕಂಬಳಕ್ಕೆ ವರ್ಷಕ್ಕೆ ಎರಡು ಕೋಟಿ ರೂ.ಗಳನ್ನು ಮೀಸಲಿಡಬೇಕೆಂದು ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದು, ಆದರೆ ಕಂಬಳ ಸಮಿತಿಯವರು ಬಳಿಕದ ಕಾರ್ಯಗಳಿಗೆ ಮುಂದೆ ಬರಲು ಹೆಚ್ಚಿನ ಆಸಕ್ತಿ ತೋರಿಸದಿರುವುದರಿಂದ ಅದಕ್ಕೆ ಸ್ವಲ್ಪ ಹಿನ್ನಡೆಯಾಗಿದೆ ಎಂದರು.

ಉದ್ಯಮಿ ವೇಣುಗೋಪಾಲ ಶೆಟ್ಟಿ ಮಾತನಾಡಿ, ರಾಜ್ಯಕ್ಕೆ ಸೀಮಿತವಾಗಿದ್ದ ಕಂಬಳವು ಕಾಂತಾರ ಸಿನಿಮಾದಿಂದಾಗಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು ಗುರುತಿಸಿಕೊಳ್ಳುವಂತಾಗಿದೆ. ಕಂಬಳವೆನ್ನುವುದು ನಮ್ಮ ಜನಪದ ಕ್ರೀಡೆಯಾಗಿದ್ದು, ಇದನ್ನು ಉಳಿಸಿ- ಬೆಳೆಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ ಎಂದು ಆರೋಪಿಸಿ ಪೇಟಾದವರು ನಿರಂತರವಾಗಿ ಕಂಬಳಕ್ಕೆ ಉಪದ್ರ ಕೊಟ್ಟರೂ, ಕಂಬಳಕ್ಕೆ ಹಿನ್ನಡೆಯಾಗಿಲ್ಲ. ಎಲ್ಲರ ಸಹಕಾರದಿಂದ ಅದು ಇನ್ನಷ್ಟು ಬೆಳೆದಿದ್ದು, ರಾಜ ವೈಭವದಿಂದ ನಡೆಯುವಂತಾಗಿದೆ. ಕಂಬಳಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಮೂಲಕ ಮಸೂದೆ ತಂದರೂ, ಪೇಟಾದವರು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅದರ ತೀರ್ಪು ಕಾಯ್ದಿರಿಸಲಾಗಿದೆ. ತೀರ್ಪು ಬಂದರೂ ಕಂಬಳದಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳು ಆಗಬಹುದೇ ಹೊರತು ಕಂಬಳ ಮಾತ್ರ ನಿಲ್ಲಲು ಸಾಧ್ಯವಿಲ್ಲ ಎಂಬ ವಿಶ್ವಾಸವಿದೆ. ಜಲ್ಲಿಕಟ್ಟ್‍ನಂತಹ ಕ್ರೀಡೆಯ ನಿಷೇಧಕ್ಕೆ ಪೇಟಾದವರು ಕಾನೂನು ಮೊರೆ ಹೋದಾಗ ಜಲ್ಲಿಕಟ್ಟ್ ಕ್ರೀಡೆಯ ಉಳಿವಿಗಾಗಿ ತಮಿಳುನಾಡಿನ ಸುಮಾರು 700ರಷ್ಟು ಜನ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇಲ್ಲಿ ಅಂತಹ ಹೋರಾಟದ ಕಿಚ್ಚು ಇಲ್ಲ. ಕಂಬಳದ ವಿರುದ್ಧ ಪೇಟಾದವರು ಸುಪ್ರೀಂಕೋರ್ಟ್‍ನ ಕದ ತಟ್ಟಿದಾಗ ಅಲ್ಲಿ ಕಂಬಳದ ಪರ ವಕೀಲರನ್ನು ನೇಮಿಸಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರ ಬಿಟ್ಟರೆ, ಉಪ್ಪಿನಂಗಡಿ ಕಂಬಳ ಸಮಿತಿ ಮಾತ್ರ. ಕಂಬಳದ ಉಳಿವಿಗಾಗಿ ಹೋರಾಟಗಳು ಸಾಕಷ್ಟು ಆಗಿದ್ದರೂ ಕಾನೂನು ಹೋರಾಟಕ್ಕೆ ಮುಂದಾಗಿರುವುದು ಉಪ್ಪಿನಂಗಡಿ ಕಂಬಳ ಸಮಿತಿ ಮಾತ್ರ. ಇನ್ನು ಮುಂದೆಯೂ ಕಂಬಳಕ್ಕಾಗಿ ಯಾವುದೇ ತರಹದ ಕಾನೂನು ಹೋರಾಟಕ್ಕೂ ನಾನು ಸಿದ್ಧನಿದ್ದೇನೆ. ಕಂಬಳವೆನ್ನುವುದು ರೈತಾಪಿ ವರ್ಗದವರ ಹಕ್ಕಾಗಿದೆ. ಇದರ ಉಳಿವಿಗೆ ಪ್ರತಿಯೋರ್ವರು ಧ್ವನಿಯೆತ್ತಬೇಕು ಎಂದರು.

ಕಂಬಳದಲ್ಲಿ ರಾಜಕೀಯ, ಜಾತಿ -ಧರ್ಮದ ಬೇಧವಿಲ್ಲ. ಎಲ್ಲರೂ ಇಲ್ಲಿ ಒಂದೇ ತಾಯಿಯ ಮಕ್ಕಳೆಂಬಂತೆ ಭಾಗವಹಿಸುತ್ತಾರೆ. ಬಡ ಜನರ ಸೇವೆ, ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ಕಂಬಳದ ವಿಚಾರದಲ್ಲಿ ರಾಜಕೀಯ ಮಾಡುವಂತಹ ಮನೋಸ್ಥಿತಿ ನನ್ನದ್ದಲ್ಲ. ನಾನು ಇದು ಇಷ್ಟಪಟ್ಟು ಮಾಡುವ ಕಾರ್ಯಗಳು. ಇನ್ನು ಮುಂದೆಯೂ ಇದನ್ನು ಮುಂದುವರಿಸುತ್ತೇನೆ. ಇದನ್ನೆಲ್ಲಾ ಸಹಿಸದ ಕೆಲವರು ಟೀಕೆಗಳನ್ನು ಮಾಡಬಹುದು. ಆದರೆ ಅಂತವರಿಗೆ ಉತ್ತರ ಕೊಡುವ ಅಗತ್ಯನೂ ನನಗಿಲ್ಲ ಎಂದ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಂಬಳ ಸಮಿತಿಗೆ ಪಿಲಿಕುಳದಲ್ಲಿ ಎರಡು ಎಕ್ರೆ ಜಾಗವನ್ನು ಮೀಸಲಿಡಬೇಕು. ಅಲ್ಲೊಂದು ಕಂಬಳ ಭವನದ ನಿರ್ಮಾಣವಾಗಬೇಕು ಎಂದರು.

ಈ ಸಂದರ್ಭ ಕಂಬಳ ಕೋಣಗಳ ಯಜಮಾನ ಅಮ್ಟೂರು ಗ್ರಾಮದ ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರಕುಮಾರ್, ಉದ್ಯಮಿಗಳಾದ ವೇಣುಗೋಪಾಲ ಶೆಟ್ಟಿ, ನಟೇಶ್ ಪೂಜಾರಿ, ವಿದ್ಯಾಧರ ಜೈನ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬಂಟರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುಗುತ್ತು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ, ಪ್ರಮುಖರಾದ ಎಂ.ಎಸ್. ಮುಹಮ್ಮದ್, ಜಗಜೀವನ್‍ದಾಸ್ ರೈ, ಮಾರ್ಸೆಲ್ ವೇಗಸ್, ಸತೀಶ್ ಕುಮಾರ್ ಕೆಡೆಂಜಿ, ರಾಜರಾಮ್ ಶೆಟ್ಟಿ ಕೋಲ್ಪೆಗುತ್ತು, ಜಯಂತ ನಡುಬೈಲು, ಗಂಗಾಧರ ರೈ, ನವೀನ್‍ಚಂದ್ರ ಆಳ್ವ ತಿರುವೈಲುಗುತ್ತು, ಡಾ. ನಿರಂಜನ್ ರೈ, ಸುದೇಶ್ ಶೆಟ್ಟಿ ಶಾಂತಿನಗರ, ಸುಬ್ರಹ್ಮಣ್ಯ ರೈ ಕೊಡಿಪ್ಪಾಡಿ, ಪ್ರೀತಮ್ ಶೆಟ್ಟಿ, ರಿತೇಶ್ ಶೆಟ್ಟಿ,  ರಾಕೇಶ್ ಶೆಟ್ಟಿ ಕೆಮ್ಮಾರ, ದಾಸಪ್ಪ ಗೌಡ, ಶಿವರಾಮ್ ಪ್ರಸಾದ್, ಲೋಕೇಶ್ ಶೆಟ್ಟಿ ಕಬಕ, ನವೀನ್ ಶೆಣೈ, ವಿಶ್ವಾಸ್ ಶೆಣೈ, ರೋಶನ್ ರೈ ಬನ್ನೂರು, ಉಲ್ಲಾಸ್ ಕೋಟ್ಯಾನ್ ಪಲ್ಲತ್ತಾರು, ಅರುಣ್ ಕುಮಾರ್ ರೈ ಆನಾಜೆ, ರಮೇಶ್ ರೈ, ಸುದೇಶ್ ಶೆಟ್ಟಿ, ರಾಮಣ್ಣ ಪಿಲಿಂಜ, ಅಶೋಕ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಜತೀಂದ್ರ ಶೆಟ್ಟಿ ಅಲಿಮಾರ್, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಪ್ರಕಾಶ್ ರೈ ಕೊೈಲ ಬಡಗನ್ನೂರು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಶಿವಪ್ರಸಾದ್ ರೈ ಮಠಂತಬೆಟ್ಟು, ಜಯಂತ ಪೊರೋಳಿ, ದಾಸಪ್ಪ ಗೌಡ,  ವಿಠಲ ಶೆಟ್ಟಿ ಕೊಲ್ಲೊಟ್ಟು, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಜೊತೆ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ದಿಲೀಪ್ ಶೆಟ್ಟಿ ಕರಾಯ,  ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಶಿವರಾಮ ಶೆಟ್ಟಿ ಗೋಳ್ತಮಜಲು, ಸಮಿತಿಯ ನಿಹಾಲ್ ಪಿ. ಶೆಟ್ಟಿ, ಸತೀಶ್ ಶೆಟ್ಟಿ ಹೆನ್ನಾಳ,  ಜಗದೀಶ್ ಪರಕಜೆ, ಜಯಾನಂದ ಗೌಡ, ಕೃಷ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಕಂಬಳ ಸಮಿತಿಯ ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

Similar News