ಮೋದಿ ಕ್ರೀಡಾಂಗಣದಲ್ಲಿ ಮೋದಿ!

Update: 2023-06-30 05:55 GMT

ಪಂದ್ಯದ ಸಮಯದಲ್ಲಿಯೇ, ಪ್ರದರ್ಶನದಲ್ಲಿದ್ದ ಒಂದು ಬೋರ್ಡ್‌ನಲ್ಲಿ ಪ್ರಧಾನ ಮಂತ್ರಿಗಳಿಬ್ಬರೂ ಒಟ್ಟಿಗೆ ಇದ್ದರು. ಮುಂಭಾಗದಲ್ಲಿ ಮೋದಿ, ಅವರು ಮೂರು ಇಂಚು ಕಡಿಮೆ ಎತ್ತರವಿದ್ದರೂ ದೊಡ್ಡದಾಗಿ ಕಾಣುವಂತೆ ತೋರಿಸಲಾಯಿತು. ಆ್ಯಂಟೊನಿ ಅಲ್ಬನೀಸ್ ಅವರ ಖಾಸಗಿ ಭಾವನೆಗಳು ಏನಿದ್ದಿರಬಹುದು ಎಂದು ನನಗೆ ಅಚ್ಚರಿ. ನಾರ್ಸಿಸಿಸಂನ ಈ ಅದ್ಭುತ ಪ್ರದರ್ಶನದಲ್ಲಿ ಮತ್ತೊಬ್ಬರಾಗಿದ್ದುದಕ್ಕೆ ಅವರು ಖುಷಿಯಾಗಿದ್ದರೆ?


ನವೆಂಬರ್ 2009ರಲ್ಲಿ, ಅಹಮದಾಬಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯ ಆಯೋಜಿಸಲಾಗಿತ್ತು. ಸಚಿನ್ ತೆಂಡೂಲ್ಕರ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಪ್ಪತ್ತು ವರ್ಷಗಳನ್ನು ಪೂರೈಸಿದ್ದರು. ಈ ಪಂದ್ಯಕ್ಕೆ ಎರಡು ತಿಂಗಳ ಮೊದಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಹೀಗಾಗಿ, ತೆಂಡೂಲ್ಕರ್ ಅವರನ್ನು ಸನ್ಮಾನಿಸುವ ನಿರ್ಧಾರ ಕೈಗೊಂಡಾಗ, ಮೋದಿ ಸನ್ಮಾನ ಮಾಡಿದರು. ನಾನು ದೂರದರ್ಶನದಲ್ಲಿ ನೋಡುತ್ತಿದ್ದೆ; ಟೆಸ್ಟ್ ಆರಂಭಕ್ಕೂ ಮುನ್ನ ಮುಖ್ಯಮಂತ್ರಿಗಳು ಸಚಿನ್‌ಗೆ ಸ್ಮರಣಿಕೆ ನೀಡಿ, ಅವರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ಕೊಟ್ಟಿದ್ದರು.

2009ರಲ್ಲಿ ಸಚಿನ್ ತೆಂಡೂಲ್ಕರ್, ನರೇಂದ್ರ ಮೋದಿಗಿಂತ ಹೆಚ್ಚು ಪ್ರಸಿದ್ಧರಾಗಿದ್ದರು. ಬ್ರಾಂಡ್ ಹೆಸರಿಗಿಂತಲೂ ಹೆಚ್ಚು ಹೆಸರಾಗಿದ್ದರು ಮತ್ತು ಮನೆಮಾತಾಗಿದ್ದರು. ಸಚಿನ್ ಜೊತೆಗಿನ ಕಾಣಿಸಿಕೊಳ್ಳುವಿಕೆ ಒಳ್ಳೆಯ ಪ್ರಚಾರ ಕೊಟ್ಟಿತು. ನಾಲ್ಕು ವರ್ಷಗಳ ಬಳಿಕ ಅಂದರೆ ಅಕ್ಟೋಬರ್ 2013ರಲ್ಲಿ ಮೋದಿ ಪ್ರಧಾನಿಯಾಗಲು ಪ್ರಚಾರ ಶುರು ಮಾಡಿದ್ದರು ಮತ್ತು ಈ ಪ್ರಯತ್ನದಲ್ಲಿ, ಮಹಾನ್ ಕ್ರಿಕೆಟಿಗನ ಬದಲು ಒಬ್ಬ ಮಹಾನ್ ರಾಜನೀತಿಜ್ಞನ ಜೊತೆ ಜೋಡಿಸಿಕೊಳ್ಳಲು ಬಯಸಿದರು. ಅದಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲರ ಬೃಹತ್ ಪ್ರತಿಮೆ ನಿರ್ಮಿಸಲು ಯೋಜಿಸಲಾಯಿತು. ಪಟೇಲ್ ಅವರು ಜವಾಹರಲಾಲ್ ನೆಹರೂ ಅವರಿಗಿಂತ ಉತ್ತಮ ಪ್ರಧಾನಿಯಾಗುತ್ತಿದ್ದರು. ಅವರು ಆ ಹುದ್ದೆಯಲ್ಲಿದ್ದಿದ್ದರೆ ಭಾರತ ಮೊದಲಿನಿಂದಲೂ ಸುರಕ್ಷಿತ, ಬಲಿಷ್ಠ, ಹೆಚ್ಚು ಸ್ವಾವಲಂಬಿ ರಾಷ್ಟ್ರವಾಗುತ್ತಿತ್ತು ಎಂದು ಮೋದಿ ಪ್ರಚಾರ ಭಾಷಣಗಳಲ್ಲಿ ಪ್ರತಿಪಾದಿಸಿದರು.

2009ರಲ್ಲಿ ನರೇಂದ್ರ ಮೋದಿಗೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಸ್ವಲ್ಪ ಗುರುತಿಸಿಕೊಳ್ಳಬೇಕಾಗಿತ್ತು. 2013-14ರಲ್ಲಿ ಸರ್ದಾರ್ ಪಟೇಲ್ ಅವರೊಂದಿಗೆ ಗುರುತಿಸಿಕೊಳ್ಳುವ ಅಗತ್ಯ ಕಡಿಮೆಯಾಗಿತ್ತು. ಬಳಿಕ ಅವರು ಸತತ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ವಿಜಯದತ್ತ ಮುನ್ನಡೆಸಿದ್ದಾರೆ. ಅವರೀಗ ಸಂಪೂರ್ಣ ತಮ್ಮದೇ ಆದ ವ್ಯಕ್ತಿತ್ವ ಹೊಂದಿದ್ದು, ಮಾಜಿ ಗುರು ಎಲ್.ಕೆ. ಅಡ್ವಾಣಿ, ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ, ಮಾಜಿ ಹೀರೋ ಸರ್ದಾರ್ ಪಟೇಲ್ ಈ ಯಾರೊಬ್ಬರ ನೆರವೂ ಬೇಕಿಲ್ಲ.

ನರೇಂದ್ರ ಮೋದಿ ಸಚಿನ್ ತೆಂಡೂಲ್ಕರ್ ಅವರಿಗೆ ಸ್ಮರಣಿಕೆ ನೀಡಿದ್ದನ್ನು ವೀಕ್ಷಿಸಿದ ಹನ್ನೊಂದೂವರೆ ವರ್ಷಗಳ ನಂತರ, ನಾನು ಕೋಟ್ಯಂತರ ಭಾರತೀಯರೊಂದಿಗೆ- ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿನ ಮತ್ತೊಂದು ಟೆಸ್ಟ್ ಪಂದ್ಯದ ಆರಂಭವನ್ನು ವೀಕ್ಷಿಸಲು ಮತ್ತೆ ದೂರದರ್ಶನದ ಮುಂದೆ ಇದ್ದೆ. ಇನ್ನು ಅದು ಸರ್ದಾರ್ ಪಟೇಲ್ ಕ್ರೀಡಾಂಗಣವಾಗಿ ಉಳಿದಿಲ್ಲ ಎಂಬುದು ಬಹುಬೇಗ ಗೊತ್ತಾಗಿತ್ತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಆರಂಭಕ್ಕೆ ಸ್ವಲ್ಪಮೊದಲು, ಭಾರತದ ರಾಷ್ಟ್ರಪತಿ, ಗೃಹ ಮಂತ್ರಿಯೊಡನೆ ಫಲಕವೊಂದನ್ನು ಅನಾವರಣಗೊಳಿಸಿದ್ದರು. ಒಂದು ಕಾಲದಲ್ಲಿ ಯಾರನ್ನು ಗೌರವಿಸುವುದಾಗಿ, ಪೂಜಿಸುವುದಾಗಿ ನರೇಂದ್ರ ಮೋದಿ ಹೇಳಿದ್ದರೊ ಅದೇ ಮಹನೀಯನ ಹೆಸರಿನ ಕ್ರೀಡಾಂಗಣಕ್ಕೆ ಈಗ ಮೋದಿಯವರದೇ ಹೆಸರನ್ನಿಡಲಾಗಿತ್ತು.

ಅಧಿಕಾರದಲ್ಲಿದ್ದಾಗಲೇ ತನ್ನ ಹೆಸರಿನ ಕ್ರೀಡಾಂಗಣವನ್ನು ಹೊಂದುವ ಮೂಲಕ ಮೋದಿ ಸ್ಟಾಲಿನ್, ಹಿಟ್ಲರ್, ಮುಸ್ಸೋಲಿನಿ, ಸದ್ದಾಂ ಹುಸೈನ್ ಮತ್ತು ಗಡಾಫಿಯ ಸಾಲಿಗೆ ಸೇರಿದರು. 'ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ'ದ ಪ್ರಧಾನಮಂತ್ರಿ ಎಂಥವರ ಜೊತೆಯಾಗಿರಲು ಬಯಸುತ್ತಾರೆ ಎಂಬುದು ತಿಳಿಯಲಿಲ್ಲ. ಅದೇನೇ ಇದ್ದರೂ, ಈ ಗೌರವದಿಂದ ಮೋದಿ ಸ್ವಲ್ಪವೂ ಮುಜುಗರಗೊಳ್ಳಲಿಲ್ಲ ಯಾರಾದರೂ ಅದನ್ನು ಹಾಗೆಂದುಕೊಳ್ಳುವುದಾದರೆ. ಗುರುವಾರ, ಭಾರತಕ್ಕೆ ಭೇಟಿ ನೀಡಿದ ಆಸ್ಟ್ರೇಲಿಯ ಪ್ರಧಾನಿ ಆ್ಯಂಟೊನಿ ಅಲ್ಬನೀಸ್ ಅವರೊಡನೆ ತಮ್ಮ ಹೆಸರಿನ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವ ಮೂಲಕ ಅವರು ಹೊಸ ಇತಿಹಾಸ ನಿರ್ಮಿಸಿದರು.

ಮುಸ್ಸೋಲಿನಿ ಒಮ್ಮೆಯಾದರೂ ಟುರಿನ್‌ನ ಸ್ಟೇಡಿಯಂನಲ್ಲಿ ಅದಕ್ಕೆ ತನ್ನ ಹೆಸರಿಟ್ಟಾದ ಬಳಿಕ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದನೋ ಅಥವಾ ಸ್ಟಾಲಿನ್ ಮಾಸ್ಕೋದಲ್ಲಿ ತನ್ನ ಹೆಸರನ್ನು ಹೊಂದಿದ್ದ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್‌ನ್ನು ಎಂದಾದರೂ ವೀಕ್ಷಿಸಿದ್ದನೋ ನನಗೆ ಗೊತ್ತಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ನರೇಂದ್ರ ಮೋದಿ ವಿಜೃಂಭಣೆಯಿಂದ ಆಗಮಿಸಿದಾಗ ಅವರು ಕೇವಲ ತನಗಾಗಿ ಅಲ್ಲ, ಭಾರತಕ್ಕಾಗಿ ಮತ್ತು ಜಗತ್ತಿಗಾಗಿ ಇತಿಹಾಸ ನಿರ್ಮಿಸುತ್ತಿದ್ದರು.

ಒಬ್ಬ ಭಾರತೀಯ ಪ್ರಜಾಪ್ರಭುತ್ವವಾದಿಯಾಗಿ ನಾನು ಮೋದಿ ವ್ಯಕ್ತಿತ್ವದ ಬೆಳವಣಿಗೆಯನ್ನು ದಿಗ್ಭ್ರಮೆಯಿಂದ ನೋಡಿದ್ದೇನೆ. ಅದರ ಮುಂದುವರಿಕೆಯಾದ ಮೊನ್ನೆಯ ಈ ಉದಾಹರಣೆ ಕೂಡ ಕ್ರಿಕೆಟ್ ಅಭಿಮಾನಿಯಾಗಿ ನನ್ನ ಸಂವೇದನೆಯನ್ನು ಘಾಸಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅವರನ್ನು ಅತ್ಯಂತ ನಿಷ್ಠಾವಂತ ಅನುಯಾಯಿಗಳು ಸ್ವಾಗತಿಸುವಂತಾಗಲು ವಿತರಿಸುವುದಕ್ಕಾಗಿ ಮೊದಲ ದಿನದ ಪಂದ್ಯದ ಟಿಕೆಟ್‌ಗಳನ್ನು ದೊಡ್ಡ ಸಂಖ್ಯೆಯಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ತೆಗೆದಿರಿಸಿಬಿಟ್ಟಿತ್ತು.

ಇದರ ಬಗ್ಗೆ ಮೊದಲು ತಿಳಿದದ್ದೇ, ಪಂದ್ಯ ವೀಕ್ಷಣೆಗೆ ಅಹಮದಾಬಾದ್‌ಗೆ ಹೋಗಬೇಕೆಂದುಕೊಂಡಿದ್ದ ಸ್ನೇಹಿತರೊಬ್ಬರು ಪಂದ್ಯದ ಟಿಕೆಟ್‌ಗಳು ಎರಡನೇ ದಿನದಿಂದ ಮಾತ್ರವೇ ಸಾರ್ವಜನಿಕರಿಗೆ ಲಭ್ಯವಿವೆ ಎಂಬುದನ್ನು ಹೇಳಿದಾಗ. ಮೊದಲ ದಿನದ ಟಿಕೆಟ್‌ಗಳು ಲಭ್ಯವಿಲ್ಲ ಎಂದು ಟಿಕೆಟ್ ವೆಬ್‌ಸೈಟ್‌ಗಳು ಹೇಳುತ್ತಿದ್ದವು. ಪರಿಚಯಸ್ಥರೊಬ್ಬರು 'ಭಕ್ತ ಕೋಟಾ' ಎಂದು ಕರೆಯಬಹುದಾದ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ನನ್ನ ಸ್ನೇಹಿತರು ಹೇಗೋ ಕಂಡುಕೊಂಡರು. ಇದಾಗುತ್ತಿದ್ದಂತೆ, ಆಸ್ಟ್ರೇಲಿಯದ ಅಭಿಮಾನಿಗಳಿಗೂ ಮೊದಲ ದಿನದ ಟಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇದರ ಬಗ್ಗೆ ತಿಳಿದುಕೊಂಡು, ಪೀಟರ್ ಲಾಲೋರ್ ಅವರು 'ದಿ ಆಸ್ಟ್ರೇಲಿಯನ್'ನಲ್ಲಿ ಒಂದು ವರದಿಯನ್ನು ಬರೆದರು. ಅಲ್ಲಿ ಅವರು ಟಿಕೆಟ್‌ಗಳ ಅಲಭ್ಯತೆಗೆ ಸಂಬಂಧಿಸಿದಂತೆ, ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತಕ್ಕೆ ಪ್ರಯಾಣಿಸಿದ್ದ ನೂರಾರು ಆಸ್ಟ್ರೇಲಿಯನ್ನರಿಗೆ ಅಗಾಧವಾದ ಹತಾಶೆಯಾಗಿದೆ. ಹತ್ತಾರು ಸಾವಿರ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳ ಬಗ್ಗೆ ಹೇಳಬೇಕಾಗಿಲ್ಲ ಎಂದು ಬರೆದರು. ಭಾರತದ ಪ್ರಧಾನಿಗೆ ತಾನು ಹೇಗೆ ತೋರಿಸಿಕೊಳ್ಳಬೇಕೆಂಬುದು ಗೊತ್ತು. ರಾಷ್ಟ್ರಗೀತೆಯ ವೇಳೆ ಆಸ್ಟ್ರೇಲಿಯ ಪ್ರಧಾನಿ ಜೊತೆ ಕಾಣಿಸಿಕೊಳ್ಳುವಾಗ ಅವರ ಆಯ್ದ ಅಭಿಮಾನಿಗಳ ದಂಡು ಕ್ರೀಡಾಂಗಣವನ್ನು ತುಂಬಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ ಎಂದೂ ಲಾಲೋರ್ ಬರೆದರು.

ಲಾಲೋರ್ ಅವರ ವರದಿಯ ಬಳಿಕ ಆಸ್ಟ್ರೇಲಿಯ ರಾಜತಾಂತ್ರಿಕರು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ಲಾಬಿ ಮಾಡಿದರು. ಕಡೆಗೂ ಭಾರತಕ್ಕೆ ಪ್ರಯಾಣಿಸಿದ ನೂರಾರು ಕ್ರಿಕೆಟ್ ಅಭಿಮಾನಿಗಳಿಗೆ ಟಿಕೆಟ್ ಮಾರಾಟ ಮಾಡಲು ವಿಶೇಷ ಬೂತ್ ತೆರೆಯಲಾಯಿತು. ಅದು, ಆಸ್ಟ್ರೇಲಿಯ ಬರಹಗಾರರೊಬ್ಬರು ಹತ್ತಾರು ಸಾವಿರ ಸ್ಥಳೀಯ ಅಭಿಮಾನಿಗಳು ತತ್ತರಿಸಿದ್ದರ ಬಗ್ಗೆ ಗಮನ ಸೆಳೆದಿದ್ದರಿಂದ ಇನ್ನೂ ಉಳಿದಿದೆ. ಅವರ ಪರವಾಗಿ ಲಾಬಿ ಮಾಡಲು ಯಾರೂ ಇರಲಿಲ್ಲ. ಭಾರತದಲ್ಲಿನ ಕ್ರಿಕೆಟ್ ಮಾಧ್ಯಮವೂ ಇತರ ಮಾಧ್ಯಮಗಳ ಹಾಗೆಯೇ ಗೋದಿ ಮಾಧ್ಯಮ. ಆಡಳಿತ ಪಕ್ಷದ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿಯ ಹಿಡಿತದಲ್ಲಿನ ಬಿಸಿಸಿಐ ವಿರುದ್ಧ ಹೇಳಲು ಅದು ಹಿಂಜರಿಯುತ್ತದೆ.

ಗೋದಿ ಕ್ರಿಕೆಟ್ ಮಾಧ್ಯಮ ಮೌನವಾಗಿತ್ತು. ಆದರೂ, ಟ್ವಿಟರ್‌ನಲ್ಲಿ ಭಾರತೀಯ ಅಭಿಮಾನಿಗಳಿಂದ ಪ್ರತಿಭಟನೆ ವ್ಯಕ್ತವಾಯಿತು. ಬಳಿಕ ಇತರ ಕೆಲವು ಟಿಕೆಟ್‌ಗಳನ್ನು ತರಾತುರಿಯಲ್ಲಿ ಮಾರಾಟಕ್ಕೆ ಇಡಲಾಯಿತು. ಆದರೆ ಇನ್ನೂ ಹೆಚ್ಚಿನ ಸಂಖ್ಯೆಯ ಟಿಕೆಟ್‌ಗಳನ್ನು ಅನಿರ್ದಿಷ್ಟ ಅತಿಥಿಗಳಿಗಾಗಿ ಮೀಸಲಿರಿಸಲಾಗಿತ್ತು. (ಟಿಕೆಟ್ ಪಡೆಯಲು ಸಾಧ್ಯವಾಗದ ಅಹಮದಾಬಾದ್‌ನ ಹಲವಾರು ನಿವಾಸಿಗಳ ಬಗ್ಗೆ ನನಗೆ ತಿಳಿದಿದೆ - ಅವರಿಗೆ ನೀಡಲಾದ ವಿವರಣೆ, ''ಮೋದಿಜಿ ಆ ರಹೇ ಹೈ''.) ಜಿಸಿಎ ಮತ್ತು ಬಿಸಿಸಿಐ ಮಾರ್ಗಗಳು ಪಿಎಂ-ಕೇರ್ಸ್‌ನಂತೆಯೇ ರಹಸ್ಯವಾಗಿ ಮುಚ್ಚಿಹೋಗಿವೆ. ಆದ್ದರಿಂದ, ಈ ಹಿಡಿದಿಡಲಾಗುವ ಪ್ರೇಕ್ಷಕರ ಕಲ್ಪನೆ ಯಾರಿಗೆ ಮೊದಲು ಹೊಳೆಯಿತು ಮತ್ತು ಅಂತಿಮವಾಗಿ ಎಷ್ಟು ಟಿಕೆಟ್‌ಗಳನ್ನು ಖಾಸಗಿ ವಿತರಣೆಗಾಗಿ ಇರಿಸಲಾಗಿತ್ತು ಇಂಥ ಯಾವ ಸಂಗತಿಗಳೂ ಎಂದಿಗೂ ಸಾರ್ವಜನಿಕಗೊಳ್ಳುವುದಿಲ್ಲ.

ಅಹಮದಾಬಾದ್‌ನಲ್ಲಿರುವ ಕ್ರೀಡಾಂಗಣದಲ್ಲಿ 1,30,000ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದು. ಭಾರತದಲ್ಲಿ ಟೆಸ್ಟ್ ಪಂದ್ಯ ನೋಡಲು ಮೂವತ್ತು ಅಥವಾ ನಲವತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಬರುವುದು ಅಪರೂಪ. ವರದಿಗಳ ಪ್ರಕಾರ, ಮೋದಿ ಆರಾಧಕ ಜನಸಮೂಹವನ್ನು ಬಯಸುವುದರ ಹೊರತಾಗಿಯೂ ಆಯೋಜಕರು ಟೆಸ್ಟ್ ಪಂದ್ಯ ವೀಕ್ಷಿಸಲು ಅತಿ ಹೆಚ್ಚಿನ ಸಂಖ್ಯೆಯ ಜನ ಎಂಬ ವಿಶ್ವ ದಾಖಲೆ ಸ್ಥಾಪಿಸಲು ಬಯಸಿದ್ದರು. ಈ ದಾಖಲೆಯನ್ನೀಗ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ಹೊಂದಿದೆ. ಈ ಸರಕಾರ ಹೇಳಿಕೊಂಡಿರುವ ಇತರ ಕೆಲವು ವಿಶ್ವ ದಾಖಲೆಗಳಂತೆ ಇದನ್ನು ವಿಶೇಷ ಬಗೆಯಲ್ಲಿ ಸಾಧಿಸಬೇಕಾಗಿತ್ತು. ಬಿಸಿಸಿಐನಂತೆ, ಕ್ರಿಕೆಟ್ ಆಸ್ಟ್ರೇಲಿಯ ಆಡಳಿತ ಪಕ್ಷದ ರಾಜಕಾರಣಿಗಳ ಕೈಗೊಂಬೆಯಲ್ಲ. ಎಂಸಿಜಿಯಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಪ್ರಾಮಾಣಿಕ ಕ್ರಿಕೆಟ್ ಅಭಿಮಾನಿ; ರಾಜಕೀಯ ರ್ಯಾಲಿಯಲ್ಲಿ ಭಾಗವಹಿಸಲು ಯಾರೂ ಅಲ್ಲಿಗೆ ಬರುವುದಿಲ್ಲ. (ಹೇಳಲೇಬೇಕಿರುವುದೆಂದರೆ, ಮೋದಿ ಅಹಮದಾಬಾದ್‌ನ ಮೈದಾನದಿಂದ ನಿರ್ಗಮಿಸಿದ ಒಂದು ಗಂಟೆಯೊಳಗೆ, ಜನಸಮೂಹವೂ ಬಲು ಬೇಗ ಕರಗಿತ್ತು.)

ಕ್ರೀಡಾಂಗಣದಲ್ಲಿ, ಭಾರತದ ಪ್ರಧಾನಿಯ ದೊಡ್ಡ ಪೋಸ್ಟರ್‌ಗಳನ್ನು ಹಲವು ದಿನಗಳ ಮುಂಚಿತವಾಗಿ ಹಾಕಲಾಯಿತು; ಆಟಗಾರರು ಅವರ ಬಿಗ್ ಬ್ರದರ್‌ಲಿ ನದರಿನಡಿಯಲ್ಲಿ ಅಭ್ಯಾಸ ಮಾಡಬೇಕಿತ್ತು. ಪಂದ್ಯಕ್ಕೆ ಸ್ವಲ್ಪಮೊದಲು, ಮೋದಿ ಮತ್ತು ಆಸ್ಟ್ರೇಲಿಯ ಪ್ರಧಾನಿ ಚಿನ್ನ ಲೇಪಿತ ಬಂಡಿಯಲ್ಲಿ ಮೈದಾನದಾದ್ಯಂತ ಪರೇಡ್ ಮಾಡಿದರು, ಪ್ರೇಕ್ಷಕರತ್ತ ಕೈ ಬೀಸಿದರು. ಪ್ರಧಾನಿಗೆ ಅವರ ಹತ್ತಿರದ ರಾಜಕೀಯ ಸಹಚರನ ಪುತ್ರ ಉಡುಗೊರೆ ನೀಡಿದ್ದೂ ಆಯಿತು. ಕ್ಯಾಮರಾಗಳು ಝೂಮ್ ಇನ್ ಆಗುತ್ತಿದ್ದಂತೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ನರೇಂದ್ರ ಮೋದಿಗೆ ನೀಡುವುದು ಕಂಡಿತ್ತು.

ಪಂದ್ಯದ ಸಮಯದಲ್ಲಿಯೇ, ಪ್ರದರ್ಶನದಲ್ಲಿದ್ದ ಒಂದು ಬೋರ್ಡ್‌ನಲ್ಲಿ ಪ್ರಧಾನ ಮಂತ್ರಿಗಳಿಬ್ಬರೂ ಒಟ್ಟಿಗೆ ಇದ್ದರು. ಮುಂಭಾಗದಲ್ಲಿ ಮೋದಿ, ಅವರು ಮೂರು ಇಂಚು ಕಡಿಮೆ ಎತ್ತರವಿದ್ದರೂ ದೊಡ್ಡದಾಗಿ ಕಾಣುವಂತೆ ತೋರಿಸಲಾಯಿತು. ಆ್ಯಂಟೊನಿ ಅಲ್ಬನೀಸ್ ಅವರ ಖಾಸಗಿ ಭಾವನೆಗಳು ಏನಿದ್ದಿರಬಹುದು ಎಂದು ನನಗೆ ಅಚ್ಚರಿ. ನಾರ್ಸಿಸಿಸಂನ ಈ ಅದ್ಭುತ ಪ್ರದರ್ಶನದಲ್ಲಿ ಮತ್ತೊಬ್ಬರಾಗಿದ್ದುದಕ್ಕೆ ಅವರು ಖುಷಿಯಾಗಿದ್ದರೆ?

ನಿಜವಾಗಿಯೂ, ಅಹಮದಾಬಾದ್‌ಗೆ ಈ ಟೆಸ್ಟ್ ಅನ್ನು ಮೊದಲ ಆದ್ಯತೆಯಲ್ಲಿ ಆಯೋಜಿಸಲು ಕಾರಣವೇ ಇರಲಿಲ್ಲ. ಕೋಲ್ಕತಾ ಕಳೆದ ಮೂರು ವರ್ಷಗಳಲ್ಲಿ ಟೆಸ್ಟ್ ಪಂದ್ಯ ಆಯೋಜಿಸುವ ಅವಕಾಶವನ್ನೇ ಪಡೆದಿಲ್ಲ. ಭಾರತ ವಿರುದ್ಧ ಆಸ್ಟ್ರೇಲಿಯ ಪ್ರದರ್ಶನದ ಸರಣಿಗಳಿಗೆ ಚೆನ್ನೈ, ಬೆಂಗಳೂರು ಮತ್ತು ಮುಂಬೈನಂತಹ ನಗರಗಳು ಖಂಡಿತವಾಗಿಯೂ ಅಹಮದಾಬಾದ್‌ಗಿಂತ ಹೆಚ್ಚಿನ ಅರ್ಹತೆ ಹೊಂದಿವೆ. ಆದಾಗ್ಯೂ, ಈ ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನು ಟಿಎಂಸಿ ಆಡಳಿತದ ಕೋಲ್ಕತಾ ಅಥವಾ ಡಿಎಂಕೆ ಆಡಳಿತದ ಚೆನ್ನೈನಲ್ಲಿ ಆಡಿದ್ದರೆ, ಅಹಮದಾಬಾದ್‌ನಲ್ಲಿ ಮೋದಿಗೆ ನೀಡಿದ ಸ್ವಾಗತವನ್ನು ಬಿಜೆಪಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಪ್ರಸಕ್ತ ಬಿಜೆಪಿ ಆಡಳಿತದಲ್ಲಿರುವ ಬೆಂಗಳೂರು ಅಥವಾ ಮುಂಬೈನಲ್ಲಿಯೂ ಮೋದಿ ಭಕ್ತರ ಸಲುವಾಗಿ ನಿಜವಾದ ಕ್ರಿಕೆಟ್ ಅಭಿಮಾನಿಗಳನ್ನು ಹೊರಹಾಕುವುದು ಅಸಾಧ್ಯವಾಗಿತ್ತು. ಗುಜರಾತಿನಲ್ಲಿ ಮಾತ್ರ ವ್ಯಕ್ತಿತ್ವ ಆರಾಧನೆಯ ಬಯಕೆಗಳನ್ನು ತೃಪ್ತಿಕರವಾಗಿ ಪೂರೈಸಬಹುದಿತ್ತು. ಇದರೊಂದಿಗೆ, ಈ ಸಲ, ಒಂದು ಕಾಲದ ಶ್ರೇಷ್ಠ, ಈಗ ಅಷ್ಟೇ ಭ್ರಷ್ಟ ಕ್ರಿಕೆಟ್ ಆಟ ಅದರ ವಾಹನವಾಯಿತು.

Similar News