ಮಂಗಳೂರಿನ ಕಸ ವಿಲೇವಾರಿ ಸಮಸ್ಯೆ: ಪರಿಹಾರಕ್ಕೆ ಶಾಸಕರ ಸಭೆ

Update: 2023-03-16 15:21 GMT

ಮಂಗಳೂರು, ಮಾ.16: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 120 ಚಾಲಕರು, ಕಸ ಸಂಗ್ರಹ ಮಾಡುವವರು ಸೇರಿದಂತೆ 620 ಹಾಗೂ ವೆಟ್‌ವೆಲ್ ಹಾಗೂ ಯುಜಿಡಿಯಲ್ಲಿ ಕೆಲಸ ಮಾಡುವ 250 ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಎದುರಾದ ಕಸ ವಿಲೇವಾರಿಯ ಸಮಸ್ಯೆಯ ಪರಿಹಾರಕದ್ಕೆ ಗುರುವಾರ ಶಾಸಕರಾದ ವೇದವ್ಯಾಸ್ ಕಾಮತ್ ಹಾಗೂ ಭರತ್ ಶೆಟ್ಟಿ, ಮೇಯರ್ ಜಯಾನಂದ ಅಂಚನ್‌ರ ನೇತೃತ್ವದಲ್ಲಿ ಗುರುವಾರ ಪಾಲಿಕೆಯಲ್ಲಿ ಸಭೆ ನಡೆಯಿತು.

ಬೆಂಗಳೂರು ಮಟ್ಟದಲ್ಲಿ ಈಡೇರಬೇಕಾದ ಬೇಡಿಕೆಗಳಿಗೆ ಕಳೆದ ಸೋಮವಾರದಿಂದ ಸಿಬ್ಬಂದಿ ವರ್ಗವು ಪ್ರತಿಭಟನೆ ನಡೆಸುತ್ತಿರುವುದರಿಂದ ಮಂಗಳೂರು ನಗರದ ಮನೆ ಮನೆ ಕಸ ಸಂಗ್ರಹಕ್ಕೆ ಸಮಸ್ಯೆ ಉಂಟಾಗಿದೆ.  ಪಾಲಿಕೆ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿಗೆ ಮಾ.17ರಿಂದಲೇ ಆ್ಯಂಟಿನಿ ವೇಸ್ಟ್ ಮ್ಯಾನೇಜ್ಮೆಂಟ್‌ನಿಂದ ಹೆಚ್ಚುವರಿಯಾಗಿ ಸಿಬ್ಬಂದಿ ನಿಯೋಜನೆ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಇಂತಹ ಸಂದರ್ಭಗಳಲ್ಲಿ ಏಜೆನ್ಸಿಯವರು ಅಗತ್ಯ ವ್ಯವಸ್ಥೆ ಮಾಡಬೇಕು. ಪ್ರತಿಭಟನೆ ಅಂತ್ಯವಾಗುವವರಿಗೆ ಬೇಕಾದ ಸಿಬ್ಬಂದಿ ನಿಯೋಜನೆ ಮಾಡಬೇಕು. ಮನೆ ಮನೆಯ ಕಸ ಸಂಗ್ರಹಣೆಗೆ ಬೇಕಾದಷ್ಟು ಸಿಬ್ಬಂದಿ ಹಾಗೂ ವಾಹನ ಚಾಲಕರನ್ನು ವ್ಯವಸ್ಥೆ ಮಾಡಬೇಕು. ನಗರದ ಜನರ ಸ್ವಚ್ಛತೆ ಸಲುವಾಗಿ ಅಗತ್ಯ ಕ್ರಮಗಳು ಆಗಬೇಕು. ವೆಟ್‌ವೆಲ್ ಹಾಗೂ ಎಸ್ಟಿಪಿಗಳನ್ನು ಸುವ್ಯವಸ್ಥಿತವಾಗಿ ನಡೆಸಬೇಕು ಎಂದು ಸೂಚನೆ ನೀಡಿದರು.

ಸುಮಾರು 80 ಸಿಬ್ಬಂದಿಯನ್ನು ಕಸ ವಿಲೇವಾರಿಗೆ ನಿಯೋಜನೆ ಮಾಡಲು ಆ್ಯಂಟನಿ ವೆಸ್ಟ್ ಮ್ಯಾನೇಜ್ಮೆಂಟ್ ಸೆಲ್ ವ್ಯವಸ್ಥೆ ಮಾಡಿಕೊಳ್ಳಬೇಕು. ವೆಟ್‌ವೆಲ್ ನಿರ್ವಹಣೆಗೆ ತುರ್ತಾಗಿ ಸಿಬ್ಬಂದಿ ನಿಯೋಜನೆ ಮಾಡಬೇಕು. 20ರಿಂದ 30 ವಾಹನಗಳಿಂದ ಕಸವನ್ನು ಸಂಗ್ರಹ ಮಾಡಲು ಸ್ಥಳೀಯ ಪಾಲಿಕೆ ಸದಸ್ಯರ ಸಹಕಾರ ಪಡೆದು ಕಸ ವಿಲೇವಾರಿಗೆ ಮಾ.17ರಿಂದಲೇ ಕಾರ್ಯನಿರ್ವಹಿಸಬೇಕು. ಕನಿಷ್ಠ 60 ವಾಹನಗಳಲ್ಲಿ ಕಸ ಸಂಗ್ರಹಣೆಗೆ ಬೇಕಾದ ಸಿದ್ಧತೆ ನಡೆಯಬೇಕು ಎಂದು ಶಾಸಕರು ಹಾಗೂ ಮೇಯರ್ ಸೂಚನೆ ನೀಡಿದರು.

ಈ ಸಂದರ್ಭ ಉಪ ಮೇಯರ್ ಪೂರ್ಣಿಮಾ, ಆಯುಕ್ತ ಚನ್ನಬಸಪ್ಪಮತ್ತಿತರರು ಉಪಸ್ಥಿತರಿದ್ದರು.

Similar News