ಶಾಲೆ ಖಾತಾ ಹಣ ಹಿಂಪಡೆಗೆ ಸೂಚನೆ: ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಆಕ್ರೋಶ

Update: 2023-03-16 15:42 GMT

ಮಂಗಳೂರು: ಶಾಲೆಯ ಖಾತೆಯಲ್ಲಿರುವ ಎಲ್ಲಾ ಸಂಚಿತ ನಿಧಿಯ ಹಣವನ್ನು ರಾಜ್ಯ ಕಚೇರಿಗೆ ಹಿಂದಿರುಗಿಸು ವಂತೆ ಹಾಗೂ ಶೂನ್ಯ ಬಾಕಿ ದೃಢೀಕರಣ ಕೇಳಿರುವುದನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಅಧ್ಯಕ್ಷ ಮೊಯ್ದಿನ್ ಕುಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕರ ಸೂಚನೆಯ ಮೇರೆಗೆ ಮುಖ್ಯ ಲೆಕ್ಕಾಧಿಕಾರಿಯು ಪತ್ರದ ಮೂಲಕ  ಹಣ ವಾಪಸ್‌ಗೆ ಸೂಚಿಸಿದ್ದಾರೆ. ಸರಕಾರವು ಶಾಲೆಗಳನ್ನು ಶೂನ್ಯ ಬ್ಯಾಲೆನ್ಸ್‌ಗಳಾಗಿ ಮಾಡಿ ಕ್ರಮೇಣವಾಗಿ ಮುಚ್ಚಿಸುವ ಹುನ್ನಾರ ಮಾಡುತ್ತಿದೆ. ಮುಖ್ಯ ಲೆಕ್ಕಾಧಿಕಾರಿಯ ಪತ್ರದಲ್ಲಿ ಶಾಲೆಗಳ ಖಾತೆಯಲ್ಲಿರುವ ಬ್ಯಾಂಕ್ ಬಡ್ಡಿಯ ಮೊತ್ತವನ್ನು ಒಳಗೊಂಡಂತೆ ಉಳಿದಿರುವ ಎಲ್ಲಾ ಅನುದಾನಗಳನ್ನು ಕೂಡಲೇ ರಾಜ್ಯ ಎಸ್‌ಎಸ್‌ಎ ಕಚೇರಿಗೆ ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಶಿಕ್ಷಣ ಅಭಿಯಾನದ ನಿರ್ದೇಶಕರ ಈ ಆದೇಶವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಬಲವಾಗಿ ಖಂಡಿಸುತ್ತದೆ. ಅತ್ಯಲ್ಪಸಂಚಿತ ನಿಧಿಯನ್ನು ಶಾಲೆಯ ವಿವಿಧ ಮೂಲಭೂತ ಕಾರ್ಯಗಳಿಗೆ ಹಾಗೂ ಶೈಕ್ಷಣಿಕ ಹಾಗೂ ಶಿಕ್ಷಣೇತರ ಚಟುವಟಿಕೆ ಗಳಿಗೆ ಬಳಸಲಾಗುತ್ತಿತ್ತು. ಆದರೆ ಈ ಆದೇಶದಿಂದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರವು ಮಕ್ಕಳ ಶಿಕ್ಷಣವನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಮೊಯ್ದಿನ್ ಕುಟ್ಟಿ ಆರೋಪಿಸಿದ್ದಾರೆ.

ರಾಜ್ಯ ಸರಕಾರವು ಶಾಲೆಗಳಿಗೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ. ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರೇ ಶಾಲೆಯ ಆರ್ಥಿಕ ವ್ಯವಸ್ಥೆಯನ್ನು ನಿಭಾಯಿಸುತ್ತಿದ್ದಾರೆ. ಸರಕಾರಿ ಅಧಿಕಾರಿಗಳು ದಿನನಿತ್ಯ ಬಂದು ಹೋಗುವ ಆತಿಥ್ಯಕ್ಕೆ ಕೋಟ್ಯಂತರ ಖರ್ಚು ಮಾಡಲು ಸಾಧ್ಯವಿದೆ. ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಅನುದಾನ ನೀಡುವ ಬದಲು, ಉಳಿಕೆ ಹಣವನ್ನು ಕಸಿದು ಶಾಲೆಗಳ ಆರ್ಥಿಕ ಅಸ್ತಿತ್ವನ್ನೇ ನಾಶಪಡಿಸುತ್ತಿದೆ. ಸರಕಾರ ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ವೇದಿಕೆಯು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.

Similar News