ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಇದ್ದರೂ 10 ಎಕರೆ ವಕ್ಫ್ ಆಸ್ತಿ ಖಾಸಗಿ ಬಿಲ್ಡರ್ ಗೆ ಮಾರಾಟ: ಆರೋಪ

Update: 2023-03-16 17:12 GMT

ಬೆಂಗಳೂರು, ಮಾ.16: ಬೆಂಗಳೂರಿನ ಮಹದೇವಪುರ ಕ್ಷೇತ್ರದ ವರ್ತೂರು ಗ್ರಾಮದಲ್ಲಿರುವ ಜಾಮಿಯಾ ಮಸೀದಿಗೆ ಸೇರಿದ 10 ಎಕರೆ ವಕ್ಫ್ ಆಸ್ತಿಯನ್ನು ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಖಾಸಗಿ ಬಿಲ್ಡರ್ ಗೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಗುರುವಾರ ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ *ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉಬೇದುಲ್ಲಾ ಶರೀಫ್*, ಹೈಕೋರ್ಟ್‍ನಲ್ಲಿ ಈ ಜಮೀನು ಉಳಿಸಲು ಕಾನೂನು ಹೋರಾಟ ಮಾಡುತ್ತಿರುವ ಅಡ್ವೋಕೇಟ್ ಹನೀಫ್, ವಕ್ಫ್ ಬೋರ್ಡ್ ಸಿಇಒಗೆ ಪತ್ರ ಬರೆದು ವರ್ತೂರಿನಲ್ಲಿ 10 ಎಕರೆ ವಕ್ಫ್ ಜಮೀನನ್ನು 19 ಕೋಟಿ ರೂ.ಗಳಿಗೆ ಮಾರಾಟ ಮಾಡಿರುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ ಎಂದರು.

ಈ ಜಮೀನಿಗೆ ಸಂಬಂಧಿಸಿದಂತೆ ಎಸಿ ಕೋರ್ಟ್ ನೀಡಿರುವ ಆದೇಶವನ್ನು ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ನೀಡಲಾಗಿದೆ. ಅಲ್ಲದೆ, ಪ್ರಕರಣ ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷರು ಹಸ್ತಕ್ಷೇಪ ಮಾಡಿ, ತಮ್ಮ ಆಪ್ತ ಕೇರಳ ಮೂಲದ ನವಾಫಿಲ್ ಎಂಬವರ ಮೂಲಕ ಹನೀಫ್ ಮೇಲೆ ಒತ್ತಡ ಹೇರಿ, ಬಿಲ್ಡರ್ ಪರವಾಗಿ ಪ್ರಕರಣ ಆಗುವಂತೆ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ವರ್ತೂರಿನ ಜಾಮಿಯಾ ಮಸೀದಿಯ 20 ಎಕರೆ ಜಾಗ ಇದೆ. ಈ ಪೈಕಿ 10 ಎಕರೆ ಜಮೀನನ್ನು ಅಮೀರ್ ಜಾನ್ ಎಂಬವರು ಭೂ ನ್ಯಾಯ ಮಂಡಳಿಯಲ್ಲಿ ವ್ಯಾಜ್ಯ ಹೂಡಿದ್ದರು. 2022ರಲ್ಲಿ ಎಸಿ ಕೋರ್ಟ್‍ನಲ್ಲಿ ಈ ಜಮೀನು ಅಮೀರ್ ಜಾನ್‍ಗೆ ನೀಡುವಂತೆ ಆದೇಶ ಆಯಿತು. ಹನೀಫ್ ಈ ವಿಚಾರವನ್ನು ವಕ್ಫ್ ಬೋರ್ಡ್ ಗಮನಕ್ಕೆ ತಂದು ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ಉಬೇದುಲ್ಲಾ ಶರೀಫ್ ಹೇಳಿದರು.

ಇದೇ ವೇಳೆ ಅಮೀರ್ ಜಾನ್ ನಿಧನ ಹೊಂದಿದ್ದರು. ಅವರ ಕುಟುಂಬ ಸದಸ್ಯರು ಆ ಜಮೀನನ್ನು ಒಬ್ಬ ಬಿಲ್ಡರ್‍ಗೆ 19 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಈ ಸಂಬಂಧ ಹನೀಫ್ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ವಕ್ಫ್ ಬೋರ್ಡ್ ಪರವಾಗಿ ವಾದ ಮಾಡಲು ಹಿರಿಯ ನ್ಯಾಯವಾದಿಯನ್ನು ನೇಮಿಸುವಂತೆ ಪದೇ ಪದೇ ಮನವಿ ಮಾಡಿದರೂ, ವಕ್ಫ್ ಬೋರ್ಡ್ ಅಧ್ಯಕ್ಷರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದರು.

ಹನೀಫ್ ಅವರನ್ನು ಭೇಟಿ ಮಾಡಿದ ನವಾಫಿಲ್, ವರ್ತೂರಿನ ಜಮೀನು ಖರೀದಿ ಮಾಡಿರುವ ಬಿಲ್ಡರ್ ತನ್ನ ಸ್ನೇಹಿತ ಹಾಗೂ ನಾನು ಅದರಲ್ಲಿ ಪಾಲುದಾರ. ನೀವು ನಮಗೆ ಸಹಕಾರ ನೀಡಿ ಎಂದು ಕೋರಿದ್ದಾರೆ. ಅಲ್ಲದೆ, ಓರ್ವ ಪ್ರಮುಖ ಧಾರ್ಮಿಕ ಗುರು ಮೂಲಕವು ಹನೀಫ್ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿದೆ ಎಂದು ಉಬೇದುಲ್ಲಾ ಶರೀಫ್ ಹೇಳಿದರು.

ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಮಾತನಾಡಿ, ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಇದ್ದರೂ ಈ ಜಮೀನು ನೋಂದಣಿಯಾದದ್ದು ಹೇಗೆ? ವಕ್ಫ್ ಬೋರ್ಡ್ ಈ ವಿಚಾರದಲ್ಲಿ ಮೌನ ವಹಿಸಿರುವುದು ಏಕೆ? ಇದೇ ರೀತಿ ವಕ್ಫ್ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.

ವಕ್ಫ್ ಬೋರ್ಡ್ ವಕ್ಫ್ ಕಾಯ್ದೆ, ನಿಯಮಗಳ ಅಡಿಯಲ್ಲಿ ತೀರ್ಮಾನಗಳನ್ನು ಮಾಡುತ್ತಿಲ್ಲ. ಮನಸೋಇಚ್ಛೆಯಾಗಿ ನಡೆದುಕೊಳ್ಳುತ್ತಿದೆ. ವಕ್ಫ್ ಬೋರ್ಡ್ ಸಿಇಒ ಜಿಲ್ಲಾಧಿಕಾರಿಗೆ ಪತ್ರ ಬರೆದು, ಜಿಲ್ಲಾ ನೋಂದಣಾಧಿಕಾರಿ ಮೂಲಕ ಆ ಜಮೀನಿನ ನೋಂದಣಿಯನ್ನು ಅಮಾನತ್ತಿನಲ್ಲಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೈಯದ್ ಅಶ್ರಫ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉರ್ದು ಅಕಾಡಮಿಯ ಮಾಜಿ ಅಧ್ಯಕ್ಷ ಮುಬೀನ್ ಮುನವ್ವರ್ ಉಪಸ್ಥಿತರಿದ್ದರು.


ವಕ್ಫ್ ಬೋರ್ಡ್ ವಿರುದ್ಧದ ಆರೋಪ ನಿರಾಧಾರ: ಶಾಫಿ ಸಅದಿ ಸ್ಪಷ್ಟನೆ

'ವರ್ತೂರಿನಲ್ಲಿ ಸರ್ವೆ ನಂ.209ರಲ್ಲಿ 10 ಎಕರೆ ಹಾಗೂ ಸರ್ವೆ ನಂ.126/3ರಲ್ಲಿ 10 ವಕ್ಫ್ ಬೋರ್ಡ್‍ಗೆ ಸೇರಿದ ಜಮೀನು ಇದೆ. ಈ ಪೈಕಿ ಸರ್ವೆ ನಂ.209ರಲ್ಲಿರುವ 10 ಎಕರೆ ಭೂ ಸುಧರಣಾ ಕಾಯ್ದೆಯಡಿ ಬೆಂಗಳೂರು ಉತ್ತರ ತಾಲೂಕು ಭೂ ನ್ಯಾಯ ಮಂಡಳಿಯು 2021ರ ಜು.23ರಂದು ಅಮೀರ್ ಪಾಷ ಅವರಿಗೆ ಮಂಜೂರು ಮಾಡಿತು' ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಭೂ ನ್ಯಾಯ ಮಂಡಳಿಯ ಆದೇಶವನ್ನು ನಾವು ಹೈಕೋರ್ಟ್‍ನಲ್ಲಿ ಪ್ರಶ್ನಿಸಿ 2021ರ ಸೆ.25ರಂದು ತಡೆಯಾಜ್ಞೆ ತಂದಿದ್ದೇವೆ. ಆದರೂ, 2022ರ ಫೆ.24ರಂದು ಅಮೀರ್ ಪಾಷ ಸೇರಿದಂತೆ ಅವರ ಕುಟುಂಬದ 28 ಮಂದಿ ಸದಸ್ಯರು ಪಾಲಮ್ ಅಶೋಕ್ ರೆಡ್ಡಿ ಮಾಲಕತ್ವದ ಗ್ರ್ಯಾಂಡ್ ಸ್ಕೈ ಇನ್ಫ್ರಾ ಪ್ರಾಜೆಕ್ಟ್‍ನವರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.

- ಶಾಫಿ ಸಅದಿ 

ಅಡ್ವೋಕೇಟ್ ಹನೀಫ್ ವಕ್ಫ್ ಸಂಬಂಧಿತ ಪ್ರಕರಣಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಅವರನ್ನು ಬದಲಾಯಿಸಿ ಹಿರಿಯ ವಕೀಲರಿಗೆ ನೇಮಿಸುವಂತೆ ಕೋರಿ 2022ರ ಜು.9ರಂದು ವರ್ತೂರಿನ ಜಮಾತ್ ಹಾಗೂ 2023ರ ಜ.3ರಂದು ವರ್ತೂರು ಜಾಮಿಯಾ ಮಸೀದಿಯವರು ನಮಗೆ ಪತ್ರ ಬರೆದಿದ್ದಾರೆ. ಇದನ್ನು ಪರಿಶೀಲಿಸಿ ವಕ್ಫ್ ಬೋರ್ಡ್ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ ಹನೀಫ್ ಅವರಿಂದ ಎಲ್ಲ ಪ್ರಕರಣಗಳನ್ನು ಹಿಂಪಡೆದಿದ್ದೇವೆ ಎಂದು ಶಾಫಿ ಸಅದಿ ತಿಳಿಸಿದರು.

ಈ ಹಿನ್ನೆಲೆಯಲ್ಲಿ ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ವಕ್ಫ್ ಬೋರ್ಡ್‍ನ ಸಿಇಒಗೆ ಹನೀಫ್ ಪತ್ರ ಬರೆದಿದ್ದಾರೆ. ಆ ಪತ್ರದ ಆಧಾರದ ಮೇಲೆ ಮುಹಮ್ಮದ್ ಉಬೇದುಲ್ಲಾ ಶರೀಫ್, ಸೈಯದ್ ಅಶ್ರಫ್, ಮುಬೀನ್ ಮುನವ್ವರ್ ನಮ್ಮ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ವರ್ತೂರಿನಲ್ಲಿ ಜಮೀನು ಖರೀದಿಸಿರುವ ಅಶೋಕ್ ರೆಡ್ಡಿಗೂ ನನ್ನ ಸ್ನೇಹಿತ ನೌಫಲ್‍ಗೂ ಯಾವುದೆ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಾನನಷ್ಟ ಮೊಕದ್ದಮೆ: ನಾನು ವಕ್ಫ್ ಬೋರ್ಡ್ ಅಧ್ಯಕ್ಷನಾದ ನಂತರ ಒಂದೇ ಒಂದು ಇಂಚು ಭೂಮಿಯನ್ನು ಭೋಗ್ಯಕ್ಕೆ ನೀಡಿಲ್ಲ. ಅನಗತ್ಯವಾಗಿ ನೌಫಲ್ ಹೆಸರನ್ನು ಈ ಪ್ರಕರಣದಲ್ಲಿ ತರಲಾಗಿದೆ. ಈ ಹಿನ್ನೆಲೆಯಲ್ಲಿ ನೌಫಲ್ ಸಂಬಂಧಪಟ್ಟವರ ಮೇಲೆ ನಾಳೆ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.

ಅಮೀರ್ ಪಾಷ ಅವರು ಮಾರಾಟ ಮಾಡಿರುವ ಜಮೀನಿನ ಪಹಣಿಯಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇರುವ ಅಂಶವನ್ನು ನಾವು ಸೇರಿಸಿದ್ದೇವೆ. ವರ್ತೂರಿನ ಜಮೀನಿನ ಪ್ರಕರಣವನ್ನು ಕಾನೂನು ಹೋರಾಟದಲ್ಲಿ ಗೆಲ್ಲುತ್ತೇವೆ. ಅದಕ್ಕಾಗಿ, ನಮ್ಮ ಕಾನೂನು ತಂಡವನ್ನು ಸಶಕ್ತಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

Similar News