ಕಾಡಿನ ಬೆಂಕಿಗೆ ಯಾರು ಹೊಣೆ..?

Update: 2023-03-17 18:33 GMT

ಈ ಬೇಸಿಗೆ ಸಮಯ ಬಂತೆಂದರೆ, ಅರಣ್ಯ ಇಲಾಖೆ ಸಿಬ್ಬಂದಿಗೆ ಆತಂಕ ಆರಂಭವಾಗುತ್ತದೆ. ಬೇಸಿಗೆ ಝಳಕ್ಕೆ ಕಾಡೆಲ್ಲ ಒಣಗಿರುತ್ತದೆ. ಕಾಡಿನಲ್ಲಿರುವ ಬಹುತೇಕ ನೀರಿನ ಕೊಳಗಳು ಬತ್ತಿ ಹೋಗಿರುತ್ತವೆ. ಇಂಥ ಸಮಯದಲ್ಲಿ ಕಾಡಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸಲು ಹರಸಾಹಸಪಡಬೇಕಾಗುತ್ತದೆ. ಬೆಂಕಿ ನಂದಿಸಲು ಅತ್ಯಾಧುನಿಕ ಸಾಮಗ್ರಿಗಳ ಜೊತೆಗೆ, ಇಲಾಖೆ ಸಿಬ್ಬಂದಿ ಜೀವ ಕಳೆದುಕೊಳ್ಳುವಂತಾಗಿದೆ. ರಾಜ್ಯವು ಪ್ರಸಕ್ತ 30 ಲಕ್ಷಕ್ಕೂ ಅಧಿಕ ಹೆಕ್ಟೇರ್ ಅರಣ್ಯ ಹೊಂದಿದೆ. ಪ್ರತಿವರ್ಷವೂ ನಾನಾ ಕಾರಣಗಳಿಂದ ಅರಣ್ಯ ಪ್ರದೇಶದ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಅಕ್ರಮವಾಗಿ ಮರಗಳ ಕಡಿತ ಒಂದೆಡೆಯಾದರೆ, ಬೆಂಕಿ ಬಿದ್ದು ನೂರಾರು ಹೆಕ್ಟೇರ್ ಅರಣ್ಯದಲ್ಲಿನ ಗಿಡಮರಗಳು ಸುಟ್ಟು ಕರಕಲಾಗುತ್ತಿರುವುದು ಮತ್ತೊಂದೆಡೆ. ಪದೇ ಪದೇ ಹರಡುವ ಕಾಡ್ಗಿಚ್ಚಿನಿಂದ ಪರಿಸರದಲ್ಲಿನ ಅಪಾರ ಸಸ್ಯ, ಜೀವಸಂಕುಲ ನಾಶವಾಗುತ್ತಿದೆ. ಶಿವಮೊಗ್ಗ ನಗರ ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಕಳೆದ ಕೆಲವು ದಿನಗಳಲ್ಲಿ ಹಲವಾರು ಕಡೆ ಕಾಡ್ಗಿಚ್ಚು ಸಂಭವಿಸಿದೆ. ಬೆಂಗಳೂರು ಕೋರಮಂಗಲದ, ನೀಲಗಿರಿ ತೋಪಿಗೆ ಬೆಂಕಿ ಬಿದ್ದು ಅಂದಾಜು 30 ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಅರ್.ಅರ್. ನಗರಕ್ಕೆ ಹೊಂದಿಕೊಂಡಿರುವ ತುರಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿಗೆ 20 ಎಕರೆ ಪ್ರದೇಶದಲ್ಲಿನ ಸಸ್ಯರಾಶಿ ಸುಟ್ಟು ಹೋಗಿವೆ. ಕಾಡನ್ನೇ ನಂಬಿಕೊಂಡಿರುವ ಪ್ರಾಣಿ, ಪಕ್ಷಿ ಮುಂತಾದ ಸೂಕ್ಷ್ಮಜೀವಿಗಳು ಆವಾಸ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿವೆ.

ಕಾಡಿಗೆ ಬೆಂಕಿ ಬೀಳುವುದಾದರೂ ಹೇಗೆ?

ಮೋಜು, ಮಸ್ತಿ ಮಾಡುವವರು ಕಾಡಿನೊಳಗೆ ಹೋಗಿ ಅರ್ಧಂಬರ್ಧ ಸೇದಿದ ಸಿಗರೇಟ್‌ಗಳಿಂದ, ಕ್ಯಾಂಪ್‌ಫೈರ್ ಹಾಕುವುದರಿಂದ, ಸೌದೆಗಳಿಂದ ಅಡುಗೆ ಮಾಡಿ ನಂದಿಸದೆ ಬರುವುದರಿಂದ ಮಾತ್ರವಲ್ಲದೆ ಬೆಂಕಿ ಪೊಟ್ಟಣಗಳನ್ನು ಒಣಗಿದ ಮರ, ಪೊದೆ, ಬಳ್ಳಿ, ಗಿಡಗಳ ಮೇಲೆ ಎಸೆಯುವುದರಿಂದ ಕಾಡ್ಗಿಚ್ಚು ಆಗುವ ಸಾಧ್ಯತೆ ಇದೆ. ಅಲ್ಲದೆ ಅರಣ್ಯದಂಚಿನಲ್ಲಿ ವಾಸಿಸುವವರು ತಮ್ಮ ಜಾನುವಾರುಗಳಿಗೆ ಎಳೆಯ ಹುಲ್ಲು ಬೆಳೆಯಲಿ ಎಂದು ಬೆಂಕಿ ಹಚ್ಚುತ್ತಾರೆ. ಈ ಕಾರಣಗಳಲ್ಲದೆ ಅರಣ್ಯದಲ್ಲಿನ ಬಿದಿರು, ಮರಗಳನ್ನು ಮತ್ತು ಅರಣೈ ಉತ್ಪನ್ನಗಳನ್ನು ಕಳ್ಳ ಸಾಗಣೆ ಮಾಡುವವರೂ ಬೆಂಕಿ ಹಚ್ಚುತ್ತಾರೆಂಬ ಆರೋಪವಿದೆ.

ಕಾಡ್ಗಿಚ್ಚಿನಿಂದ ನಷ್ಟ ಯಾರಿಗೆ?

ಕಾಡಿಗೆ ಬೆಂಕಿ ಯಾವ ಕಾರಣಕ್ಕಾದರೂ ಬೀಳಲಿ, ಅದರಿಂದ ಅಪಾರ ಪ್ರಮಾಣದ ನಷ್ಟವಾಗುತ್ತದೆ. ಅರಣ್ಯದಲ್ಲಿ ವಾಸಿಸುವ ಪ್ರಾಣಿ, ಪಕ್ಷಿಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ. ಮರದಲ್ಲಿ ಗೂಡು ಕಟ್ಟಿ ವಾಸಿಸುವ ಪಕ್ಷಿಗಳು, ನೆಲದಲ್ಲಿ ವಾಸಿಸುವ ಮೊಲ, ಮುಂಗುಸಿ, ಹಾವು, ಉಡ ಇತರ ಜೀವಿಗಳು ಕಾಡ್ಗಿಚ್ಚಿಗೆ ಸಿಕ್ಕಿ ಸಾಯಬಹುದು. ಮರದಿಂದ ಉದುರಿದ ಎಲೆ ಗೊಬ್ಬರ ವಾಗದೆ ಸುಟ್ಟು ವ್ಯರ್ಥವಾಗಬಹುದು. ಅಲ್ಲಿನ ಮಣ್ಣು ಫಲವತ್ತತೆ ಕಳೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಪರಾಗ ಸ್ಪರ್ಷಕ್ಕೆ ಕಾರಣವಾಗುವ ಕೀಟಗಳು ಸತ್ತು, ಈ ಸಂತತಿ ಕಾಲ ಕ್ರಮೇಣ ನಶಿಸಿಹೋಗಬಹುದು.

ಕಾಡಿಗೆ ಬೀಳುವ ಬೆಂಕಿ ಕೇವಲ ವನ್ಯಜೀವಿಗಳಿಗಷ್ಟೆ, ನಷ್ಟ ಅಲ್ಲ. ನಾಡಿನ ಮನುಷ್ಯ ಜೀವಿಯ ಮೇಲೂ ಪ್ರಭಾವ ಬೀರುತ್ತದೆ. 'ಕಾಡಿನಿಂದಲೇ ನಾಡು' ಎಂಬಂತೆ ನಮ್ಮಲ್ಲಿರುವ ಬಹುತೇಕ ನದಿಗಳು ಕಾಡಿನಲ್ಲಿ ಹುಟ್ಟುತ್ತವೆ. ನಮಗಾಗಿ ಹರಿಯುವ ಈ ನದಿಗಳನ್ನು ಅದೆಷ್ಟೋ, ಕಾಡುಗಳು ಕಾಪಾಡುತ್ತಿವೆ. 'ರೋಗವಿಲ್ಲದ ಮನುಷ್ಯನಿಲ್ಲ ಔಷಧ ಗುಣವಿಲ್ಲದ ಸಸ್ಯವಿಲ್ಲ' ಎಂಬ ಗಾದೆಯಂತೆ ಅನೇಕ ಅರಣ್ಯ ಸಸ್ಯಗಳು ಔಷಧಿಗಳಿಗೆ ಬಳಕೆಯಾಗುತ್ತಿವೆ. ಕಾಗದ, ಗಂಧದ ಎಣ್ಣೆ, ಕರ್ಪೂರದಂತಹ ದ್ರವ್ಯಗಳಿಗೆ ಅರಣ್ಯವೇ ಮೂಲವಾಗಿದೆ. ಅರಣ್ಯಗಳು ಮಳೆ ಬೀಳಲು ಸಹಾಯಕವಾಗಿವೆ, ಗಾಳಿಯ ಹೊಡೆತ, ನೀರಿನ ಕೊರತೆಗಳಿಂದ ನಮ್ಮನ್ನು ರಕ್ಷಿಸುತ್ತವೆ. ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಂಡು ನೆಲದಲ್ಲಿ ನೀರಿನ ತೇವಾಂಶ ನೆಲೆಸುವಂತೆ ಮಾಡುತ್ತವೆ. ನಮ್ಮ ಸುತ್ತಲಿನ ಪ್ರದೇಶದ ಅವಗುಣದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ. ಹೀಗಾಗಿ ಅರಣ್ಯವನ್ನು ರಕ್ಷಿಸಿದರೆ ಅರಣ್ಯವು ನಮ್ಮನ್ನು ರಕ್ಷಿಸುತ್ತದೆ.

ಮುಂಜಾಗ್ರತಾ ಕ್ರಮಗಳೇನು?

ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ, ದಿನೇದಿನೇ ತಾಪಮಾನದಲ್ಲಿ ಏರಿಕೆ ಕಂಡು ಬರುತ್ತಿದ್ದು ಮಾರ್ಚ್ ಮೊದಲ ವಾರದಲ್ಲೇ ಉಷ್ಣಾಂಶವು ಗರಿಷ್ಠ 36-38 ಡಿಗ್ರಿವರೆಗೆ ತಲುಪಿದೆ. ಬಿಸಿಗಾಳಿ, ಬಿಸಿಲಿನ ಹೊಡೆತಕ್ಕೆ ಹಚ್ಚ ಹಸಿರಿನ ಕಾಡುಗಳಲ್ಲಿಯೂ ಎಲೆಗಳು ಉದುರುತ್ತಿವೆ. ಆಕಸ್ಮಿಕ ಅಥವಾ ಕಿಡಿಗೇಡಿಗಳ ಕೃತ್ಯದಿಂದಲೋ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಉಪಗ್ರಹಗಳ ಮೂಲಕ ಕಾಡ್ಗಿಚ್ಚಿನ ಪ್ರಮಾಣ, ವಿಸ್ತೀರ್ಣ ಕ್ಷಣದಲ್ಲೇ ತಿಳಿಯಲಾಗುತ್ತಿದೆ. ಹೀಗಿದ್ದರೂ ಕಾಡ್ಗಿಚ್ಚನ್ನು ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ಈಗಲೂ ಮರಗಿಡಗಳ ಸೊಪ್ಪೇ ಪ್ರಮುಖ ಅಸ್ತ್ರವಾಗಿದೆ. ಕೆಲವೊಂದು ಕಡೆ ಅಗ್ನಿ ಶಾಮಕದಳದವರ ನೆರವು ಪಡೆದರೂ, ದಟ್ಟಾರಣ್ಯ, ಇಳಿಜಾರು, ಗುಡ್ಡ ಪ್ರದೇಶಗಳಲ್ಲಿ ಇಂದಿಗೂ ಬೆಂಕಿ ನಂದಿಸಲು ಸೊಪ್ಪನ್ನೇ ಬಳಸುತ್ತಿದ್ದಾರೆ. ಹೀಗಾಗಿ ಜೀವದ ಹಂಗು ತೊರೆದು ಬೆಂಕಿ ನಂದಿಸಬೇಕಿದೆ. ಕಳೆದ ಫೆಬ್ರವರಿಯಲ್ಲಿ ಸಕಲೇಶಪುರದಲ್ಲಿ ಬೆಂಕಿ ನಂದಿಸುವಾಗ ಅರಣ್ಯ ವೀಕ್ಷಕ ತೀರ್ಥಹಳ್ಳಿಯ ಸುಂದರೇಶ್ ಬಲಿಯಾಗಿದ್ದು, ತುಂಬಾ ನೋವಿನ ಸಂಗತಿಯಾಗಿದೆ.

ಕಾಡ್ಗಿಚ್ಚು ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ಸರಕಾರ, ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ನೀಗಿಸಲು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅರಣ್ಯ ಸಿಬ್ಬಂದಿಗೆ ಹಾಗೂ ಕಾಡಂಚಿನಲ್ಲಿರುವ ಗ್ರಾಮಗಳ ಜನರಿಗೆ, ಬೆಂಕಿಯನ್ನು ನಂದಿಸುವ ಕುರಿತು ಅಗ್ನಿಶಾಮಕ ಅಧಿಕಾರಿಗಳಿಂದ ತರಬೇತಿ ನೀಡಬೇಕು. ಅರಣ್ಯ ಸಿಬ್ಬಂದಿ ಜೀವ ರಕ್ಷಣೆಗೆ ಮುಂಜಾಗ್ರತಾ ಕ್ರಮವಹಿಸಬೇಕು. ವಲಯ ಮಟ್ಟದಲ್ಲಿ ಬೆಂಕಿ ನಿರೋಧಕ ಸಾಮಗ್ರಿ ಕಿಟ್ ವಿತರಣೆ. ಸ್ವೇಯರ್, ಬ್ಲೋಯರ್ಸ್, ಪೈರ್ ಬಿಟರ್ಸ್, ಹೆಲ್ಮೆಟ್ಸ್, ಕನ್ನಡಕ, ಐ ವಾಷರ್, ಮಾಸ್ಕ್, ಗ್ಲೌಸ್, ನೀರಿನ ಕ್ಯಾನ್ ಪೂರೈಕೆಯಲ್ಲದೆ ಸಿಬ್ಬಂದಿಗಿರುವ ವಾಹನಗಳ ಕೊರತೆಯನ್ನು ನೀಗಿಸಬೇಕು. ಕಣ್ಗಾವಲಿಗೆ ವಾಚ್ ಟವರ್ ಹಾಗೂ ಟ್ರೋನ್ ಕ್ಯಾಮರಾ ಬಳಕೆ ಅತಿ ಹೆಚ್ಚು ಅಳವಡಿಸಬೇಕು. ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ನೀರಿನ ಟ್ಯಾಂಕರ್‌ಗಳನ್ನು ಇರಿಸಬೇಕು. ಅರಣ್ಯ ಹಾಗೂ ವನ್ಯಜೀವಿಗಳನ್ನು ರಕ್ಷಿಸುವುದು ಕೇವಲ ಸರಕಾರ ಮತ್ತು ಅರಣ್ಯ ಇಲಾಖೆಯ ಕರ್ತವ್ಯ ಅಲ್ಲ. ಅದು ನಮ್ಮೆಲ್ಲರ ಹೊಣೆ, ನಮ್ಮ ಜವಾಬ್ದಾರಿಯು ಕೂಡ. ಕಾಡನ್ನು ಬೆಂಕಿಯಿಂದ ರಕ್ಷಿಸುವುದರಿಂದ ವನ್ಯ ಸಂಪತ್ತು ಮಾತ್ರ ರಕ್ಷಿಸಿದಂತಲ್ಲ, ನಮ್ಮನ್ನು ನಾವು ರಕ್ಷಿಸಿಕೊಂಡಂತೆ.

Similar News