ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಶೇ.98ರಷ್ಟ ಪೂರೈಸಿದೆ: ರಮಾನಾಥ ರೈ

Update: 2023-03-19 12:00 GMT

ವಿಟ್ಲ : ಕಾಂಗ್ರೆಸ್ ಪಕ್ಷ ನೀಡಿದ ಭರವಸೆ ಶೇ.98ರಷ್ಟನ್ನು ಪೂರೈಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಿನ ಹಣವನ್ನು ಪ್ರತಿಯೊಬ್ಬನ ಖಾತೆಗೆ ಜಮಾಯಿಸುತ್ತೇವೆ ಅಂದರು. ಬರಲಿಲ್ಲ. ಗ್ಯಾಸ್, ಪೆಟ್ರೋಲ್ ದರ ಇಳಿಸುತ್ತೇವೆ ಎಂದು ಭರವಸೆ ನೀಡಿ ದರ ಏರಿಸಿದರು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ತಿಳಿಸಿದರು.

ಅವರು ಕನ್ಯಾನದ ಪೇಟೆಯಲ್ಲಿ ಸಾಲೆತ್ತೂರು, ಕರೋಪಾಡಿ, ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಲಿರುವ ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ 9ನೇ ದಿನದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದರೂ ಅಪಪ್ರಚಾರ ಮಾಡಿ ಹಿಂದಿನ ಚುನಾವಣೆಯಲ್ಲಿ ತನ್ನನ್ನು ಸೋಲಿಸಲಾಯಿತು. ವಿರೋಧ ಪಕ್ಷದವರು ಸೋಲಿಸಲು ಪಣತೊಟ್ಟು ಇಲ್ಲಸಲ್ಲದ ಆರೋಪ ಮಾಡಿ, ಮತದಾರರ ದಿಕ್ಕು ತಪ್ಪಿಸಿದರು. ಪ್ರಾಮಾಣಿಕವಾಗಿ ಸುದೀರ್ಘ ರಾಜಕೀಯ ಮಾಡಿದ್ದು, ತಾನು ಪಕ್ಷಕ್ಕೂ ಯಾವುದೇ ಕಳಂಕ ತಂದಿಲ್ಲ. ನಾಗರಿಕರಿಗೆ ಅವಮಾನವಾಗುವ ಯಾವುದೇ ರೀತಿಯ ಕೆಲಸವನ್ನು ತಾನು ಮಾಡಿಲ್ಲ. 2017ರಲ್ಲಿ ತಾನು ಬಂಟ್ವಾಳ ಒಳಚರಂಡಿ ಯೋಜನೆಗೆ 56 ಕೋಟಿ ರೂ. ಅನುದಾನ ತಂದಿದ್ದೇನೆ. ಆ ಕಾಮಗಾರಿಯನ್ನು ಬಿಜೆಪಿ ಸರಕಾರ ಮುಂದುವರಿಸಿಲ್ಲ. ಆರಂಭಿಸಲಾದ ಬೆಂಜನಪದವು ಕ್ರೀಡಾಂಗಣ, ಪಂಜೆ ಮಂಗೇಶರಾಯ ಭವನ, ಪಡೀಲು ಜಿಲ್ಲಾಧಿಕಾರಿ ಕಚೇರಿ ಕಾಮಗಾರಿಗಳನ್ನು ಬಿಜೆಪಿ ಸರಕಾರ ಪೂರ್ತಿ ಮಾಡಿಲ್ಲ. ಈಗ ಪಡಿತರ ಚೀಟಿ ಸಿಗುವುದಿಲ್ಲ. ಬಡವರಿಗೆ ಮನೆಗಳು ಬರುವುದಿಲ್ಲ. ಶವ ಸಂಸ್ಕಾರಕ್ಕೂ ಹಣ ಬರುವುದಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ, ರಮಾನಾಥ ರೈ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಸುಳ್ಯ, ಕಡಬ ಮತ್ತಿತರ ಪ್ರದೇಶಗಳಿಗೆ ಕೋಟಿಗಟ್ಟಲೆ ಅನುದಾನ ಒದಗಿಸಿದ್ದರು. ಅವರ ಸಾಧನೆಯ ಮುಂದೆ ಬಿಜೆಪಿಯವರ ಸಾಧನೆ ಶೂನ್ಯ ಎಂದರು.

ಯಾತ್ರೆಯ ಸಂಚಾಲಕ ಪಿಯೂಸ್ ಎಲ್.ರಾಡ್ರಿಗಸ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಂಚಾಯತ್‌ ರಾಜ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ತಾ.ಪಂ.ಮಾಜಿ ಉಪಾಧ್ಯಕ್ಷ ಹಾಜಿ ಎ.ಉಸ್ಮಾನ್ ಕರೋಪಾಡಿ, ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಕನ್ಯಾನ ಗ್ರಾ.ಪಂ.ಅಧ್ಯಕ್ಷ ಕೆ.ಪಿ.ಅಬ್ದುಲ್‌ರಹಿಮಾನ್, ಕರೋಪಾಡಿ ಗ್ರಾ.ಪಂ.ಅಧ್ಯಕ್ಷ ಅನ್ವರ್ ಕರೋಪಾಡಿ, ಸಾಲೆತ್ತೂರು ಗ್ರಾ.ಪಂ.ಅಧ್ಯಕ್ಷ ಹಸೈನಾರ್, ಪೆರುವಾಯಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ವಿಟ್ಠಲ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‌ ಮಜೀದ್, ಯೂತ್ ಅಧ್ಯಕ್ಷ ಇಬ್ರಾಹಿಂ ನವಾಝ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಮಲ್ಲಿಕಾ ಪಕ್ಕಳ, ಕೊಳ್ನಾಡು ವಲಯಾಧ್ಯಕ್ಷ ಪವಿತ್ರ ಪೂಂಜ, ವಿಟ್ಲಪಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಪ್ರಮುಖರಾದ ಐಡಾ ಸುರೇಶ್, ಲೋಲಾಕ್ಷಿ ಶೆಟ್ಟಿ, ಪದ್ಮನಾಭ ರೈ, ಹರ್ಷದ್ ಸರವು, ಚಿತ್ತರಂಜನ್ ಶೆಟ್ಟಿ, ಮೋಹನದಾಸ್, ಬ್ಲಾಕ್ ಕಾರ್ಯದರ್ಶಿ ಪ್ರಶಾಂತ್ ಪಕ್ಕಳ, ಸಿದ್ಧಿಕ್ ಸರವು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾ.ಪಂ.ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಮಾಣಿ ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ರಮಾನಾಥ ರೈ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ 5000 ಕೋಟಿ ರೂ.ಗಳ ಅನುದಾನಗಳ ವಿವರ ನೀಡಿದರು. ಬೆಳಗ್ಗೆ ಸಾಲೆತ್ತೂರು ಶಾಲೆಯ ಬಳಿ ಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ತಲೆಕ್ಕಿ, ಬೊಳ್ಮಾರು, ಆನೆಕಲ್ಲು, ಮಿತ್ತನಡ್ಕ ಮತ್ತು ಕನ್ಯಾನದಲ್ಲಿ ಪಾದಯಾತ್ರೆ ಸಾಗಿತು.

Similar News