ಪತ್ನಿಗೆ ವರದಕ್ಷಿಣೆ ಕಿರುಕುಳ,ಕೊಲೆ: ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Update: 2023-03-19 15:10 GMT

ಬೆಂಗಳೂರು, ಮಾ. 19: ಮದುವೆಯಾದ ಮೂರು ವರ್ಷದಲ್ಲೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ವ್ಯಕ್ತಿಗೆ ಬೆಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 85 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 

ನಗರದ 71ನೆ ಅಧಿಕ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ. ಬೆಂಗಳೂರಿನ ರಘು ಶಿಕ್ಷೆಗೆ ಗುರಿಯಾದ ಅಪರಾಧಿ. ಈತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಮದುವೆ ವೇಳೆ ವರದಕ್ಷಿಣೆ ಪಡೆದುಕೊಂಡಿದ್ದಕ್ಕೆ ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3ರ ಅಡಿ 50 ಸಾವಿರ ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ, ಮದುವೆ ನಂತರ ವರದಕ್ಷಿಣೆ ತರುವಂತೆ ಪೀಡಿಸಿದಕ್ಕೆ ಕಲಂ 4 ಅಡಿ 6 ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ.ದಂಡ ವಿಧಿಸಲಾಗಿದೆ.

ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಕ್ಕೆ ಐಪಿಸಿ ಸೆಕ್ಷನ್ 498(ಎ) 1 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ದಂಡ, ಹತ್ಯೆ ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 302ರ ಅಡಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ ನ್ಯಾಯಾಲಯ ಅದೇಶಿಸಿದೆ.

ಮೃತಳ ತಾಯಿಗೆ ಆರ್ಥಿಕ ನೆರವು: ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ 85 ಸಾವಿರ ರೂ. ದಂಡ ವಿಧಿಸಲಾಗಿದ್ದು, ಇದರಲ್ಲಿ 80 ಸಾವಿರ ರೂ.ಗಳನ್ನು ಮೃತಳ ತಾಯಿಗೆ ನೀಡಬೇಕು. ಅಪರಾಧಿ ದಂಡದ ಮೊತ್ತಗಳನ್ನು ಪಾವತಿಸದಿದ್ದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಇದೇ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೃತಳ ತಾಯಿಗೆ 2 ಲಕ್ಷ ರೂ. ಪರಿಹಾರದ ರೂಪದಲ್ಲಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣವೇನು?: 2009ರ ಆ.9ರಂದು ರಘು ಹಾಗೂ ಅಂಬಿಕಾ ವಿವಾಹ ನೆರವೇರಿತ್ತು. ಮದುವೆ ಸಮಯದಲ್ಲಿ ನಗದು ಹಾಗೂ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಹಾಗಿದ್ದೂ, ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಪತಿ ಪೀಡಿಸುತ್ತಿದ್ದ ಹಾಗೂ ಇದೇ ಕಾರಣಕ್ಕೆ 2012ರ ಡಿ.8ರಂದು ಮಗುವಿನೊಂದಿಗೆ ಮಲಗಿದ್ದ ಅಂಬಿಕಾ ಮೇಲೆ ಕುಡುಗೋಲಿನಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾನೆ ಎಂದು ಪೋಷಕರು ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಅಂಬಿಕಾರ ಮೃತ ದೇಹದ ಮೇಲೆ 35 ಬಾರಿ ಕುಡುಗೋಲಿನಿಂದ ಹಲ್ಲೆ ಮಾಡಿದ್ದು ಕಂಡು ಬಂದಿತ್ತು. ಘಟನೆ ಸಂಬಂಧ ತನಿಖಾಧಿಕಾರಿ ಬಾಳೇಗೌಡ ತನಿಖೆ ನಡೆಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.

Similar News