ಸುರತ್ಕಲ್‌: ಅಕ್ರಮ ದಾಸ್ತಾನು ಆರೋಪ; ಮರಳು ವಶಕ್ಕೆ

Update: 2023-03-19 16:31 GMT

ಸುರತ್ಕಲ್‌, ಮಾ. 19: ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಚೇಳಾಯರು ಮತ್ತು ಮುಂಚೂರಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 250-300 ಲೋಡ್‌ ಮರಳನ್ನು ಸುರತ್ಕಲ್‌ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚೇಳಾಯರು ಗ್ರಾಮ ಪಂಚಾಯತ್ ಬಳಿ ರಸ್ತೆ ಬದಿಯ ಕಾಂಪೌಂಡ್‌ ಒಳಭಾಗದಲ್ಲಿ ಸಿಸಿ ಕ್ಯಾಮಾರ ಕಣ್ಗಾವಲಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 150-200 ಲೋಡ್‌ ಮರಳು ಹಾಗೂ ಮುಂಚೂರು ರಸ್ತೆಯ ಬದಿಯ ಕಾಂಪೌಂಡ್‌ನ ಒಳಭಾಗದಲ್ಲಿ ರಸ್ತೆಯಲ್ಲಿ ಸಂಚರಿಸುವವರಿಗೆ ಕಾಣದಿರಲು ಮರ ಕೊಂಬೆಗಳನ್ನು ಕಡಿದು ಮರಳಿನ ಮೇಲೆ ಹಾಕಿ ಮುಚ್ಚಿಡಲಾಗಿದ್ದ ಸುಮಾರು 100 ಲೋಡ್‌ ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್‌ ಪೊಲೀಸ್‌ ಠಾಣೆಯ ನಿರೀಕ್ಷಕ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಮಲ್ಲಿಕಾರ್ಜುನ ಅರುಣ್‌ ಕುಮಾರ್‌ ಡಿ. ಹಾಗೂ ಸಿಬ್ಬಂದಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಬಳಿಕ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಅಧಿಕಾರಿಗಳಾದ ಕೋದಂಡರಾಮ ಮತ್ತು ಲಾಯ್‌ ಅವರಿಗೆ ಹಸ್ತಾಂತರಿಸಿದ್ದು, ವಶಕ್ಕೆ ಪಡೆದ ಮರಳಿನ ಒಟ್ಟು ಮೌಲ್ಯ 35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Similar News