ಪೌರ ಕಾರ್ಮಿಕರ ಸಮಸ್ಯೆ ಪರಿಹರಿಸುವಲ್ಲಿ ಸರಕಾರ ವಿಫಲ: ಯು.ಟಿ.ಖಾದರ್

Update: 2023-03-20 10:44 GMT

ಮಂಗಳೂರು, ಮಾ.20: ಪೌರ ಕಾರ್ಮಿಕರ ಸಮಸ್ಯೆ ಪರಿಹರಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದ ಹಲವು ದಿನಗಳಿಂದ ನಡೆಯುತ್ತಿರುವ ಮುಷ್ಕರ ರಾಜ್ಯಾದ್ಯಂತ ಮುಂದುವರಿದಿದೆ. ಇದು ನಾಗರಿಕರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರ ಸಂಪೂರ್ಣ ಸ್ತಬ್ಧಗೊಂಡಿದೆ. ಐಸಿಯು ನಲ್ಲಿರುವಂತಿದೆ. ಸ್ವಚ್ಛತೆಯ ಸಮಸ್ಯೆಯ ಜೊತೆ ಭ್ರಷ್ಟಾಚಾರದಿಂದ ಇಡೀ ಆಡಳಿತ ವ್ಯವಸ್ಥೆ ಗಬ್ಬು ನಾರುತ್ತಿದೆ ಎಂದು ಖಾದರ್ ನುಡಿದರು.

ಈ ಹಿಂದೆ ಕಾಂಗ್ರೆಸ್ ನೇತೃತ್ವದ ಸರಕಾರ ಪೌರ ಕಾರ್ಮಿಕರ ನೇರ ನೇಮಕಾತಿ ಮೂಲಕ ಒಂದು ಹಂತದಲ್ಲಿ ಸಮಸ್ಯೆ ಬಗೆಹರಿಸಿತ್ತು. ಹಾಲಿ ಪೌರ ಕಾರ್ಮಿಕರನ್ನು ಜ್ಯೇಷ್ಠತೆಯ ಆಧಾರದಲ್ಲಿ ನೇಮಕಾತಿ ಮಾಡುವ ಮೂಲಕ ಸರಕಾರ ಸಮಸ್ಯೆ ಬಗೆ ಹರಿಸಬಹುದು ಆದರೆ ಸರಕಾರ ಈ ಬಗ್ಗೆ ಗಮನಹರಿಸಿಲ್ಲ. ರಾಜ್ಯದ ಜನ ಸಾಮಾನ್ಯರ ಹಿತದೃಷ್ಟಿಯಿಂದ ಸರಕಾರ ತುರ್ತು ಕೆಲಸಗಳ ಬಗ್ಗೆ ಗಮನಹರಿಸಬೇಕಾಗಿದೆ. ಕುಡಿಯುವ ನೀರು ಪೂರೈಕೆ, ಕಸ ವಿಲೇವಾರಿ ಸಮಸ್ಯೆ ಪರಿಹರಿಸಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.

ಅಂಗವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಸಲು ಪ್ರತಿ ಸಲ ಬೀದಿಗೆ ಬಂದು ಪ್ರತಿಭಟನೆ ಮಾಡಬೇಕಾದ ಸ್ಥಿತಿ ಇದೆ. ಸರ್ಕ್ಯೂಟ್ ಹೌಸ್ ನ ಕಾರ್ಮಿಕರರಿಗೂ ವೇತನ ಪಾವತಿಯಾಗದೆ 6 ತಿಂಗಳಾಗಿವೆ. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದವರು ನುಡಿದರು.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ಮಾಡದೆ ವಿದ್ಯಾರ್ಥಿಗಳಿಗೆ ಸಮಸ್ಯೆ.

ಸರಕಾರ ಇದಕ್ಕೆ ಹೊಣೆ ಹೊರಬೇಕಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.

*ಈಶ್ವರಪ್ಪ ಮಾತಿನ ಬಗ್ಗೆ ಗಮನಹರಿಸಬೇಕಾಗಿಲ್ಲ:

ಚುನಾವಣಾ ಸಂದರ್ಭದಲ್ಲಿ ಜನರನ್ನು ಪ್ರಚೋದಿಸಲು ಕೆ.ಎಸ್.ಈಶ್ವರಪ್ಪ ಮಾತನಾಡುತ್ತಾರೆ. ಅವರು ಈಗ ಸಚಿವರಾಗಿಲ್ಲ. ಅವರ ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಹೇಳಿರುವಂತೆ 'ಈಶ್ವರಪ್ಪರ ನಾಲಿಗೆ ಮತ್ತು ಮೆದುಳಿಗೆ ಸಂಪರ್ಕ ಇಲ್ಲ' ಎನ್ನುವುದು ಸೂಕ್ತ ಹೇಳಿಕೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಖಾದರ್ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಸಂತೋಷ್ ಕುಮಾರ್  ಶೆಟ್ಟಿ, ಕಲಾವತಿ, ಸರೋಜಿನಿ, ನಾಸಿರ್  ಮೊದಲಾದ ವರು ಉಪಸ್ಥಿತರಿದ್ದರು.

Similar News