ಸಿದ್ದರಾಮಯ್ಯ ಆಡಳಿತದಲ್ಲಿ 2,500 ಕೋಟಿ ರೂ.ಟಿಡಿಆರ್ ಹಗರಣ: ಎನ್.ಆರ್.ರಮೇಶ್ ಆರೋಪ

Update: 2023-03-20 13:57 GMT

ಬೆಂಗಳೂರು, ಮಾ.20: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 2,500ಕೋಟಿ ರೂ.ಗಳ ಟಿಡಿಆರ್ (ಅಭಿವೃದ್ಧಿ ಹಕ್ಕು ಹಸ್ತಾಂತರ) ಹಗರಣವಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ. 

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿಡಿಆರ್ ಮಾಫಿಯಾದ ದೊರೆ ಎಂದೇ ಕುಖ್ಯಾತಿ ಪಡೆದಿರುವ ಪ್ರವೀಣ್ ಪಿ.ಷಾ ಪಾಲುದಾರನಾಗಿರುವ ವೆಂಕಟೇಶ್ವರ ಡೆವಲಪರ್ಸ್ ಎಂಬ ಸಂಸ್ಥೆ, ವಿಕ್ರಮ್ ಓಸ್ವಾಲ್ ಎಂಬ ವ್ಯಕ್ತಿಯ ಬಾಲಾಜಿ ಇನ್ ಫ್ರಾಸ್ಟ್ರಕ್ಚರ್ಸ್ ಮತ್ತು ಡೆವಲಪರ್ಸ್ ಎಂಬ ಸಂಸ್ಥೆ, ಸಿ.ಟಿ. ತಿಮ್ಮಯ್ಯ ಮತ್ತು ಸಿ.ಟಿ. ಮರಿರಾಜು ಎಂಬ ಅಧಿಕಾರಿಗಳ ಜೊತೆ ಸೇರಿ ಭ್ರಷ್ಟಾಚಾರವನ್ನು ನಡೆಸಿದ್ದಾರೆ ಎಂದು ದೂರಿದರು.

ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದ ವ್ಯಾಪ್ತಿಯ ಕೊಡಿಯಾಲ ಕರೇನಹಳ್ಳಿ ಎಂಬ ಗ್ರಾಮದ ಒಟ್ಟು 40.09 ಎಕರೆಗಳಷ್ಟು ವಿಸ್ತೀರ್ಣದ ಸ್ವತ್ತನ್ನು ಅಲ್ಲಿನ ರೈತರಿಂದ 2011-12ರಲ್ಲಿ ಕೆಲವೇ ಲಕ್ಷ ರೂ.ಗಳಿಗೆ ಕ್ರಯಕ್ಕೆ ಪಡೆದು ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು  ಪ್ರಾರಂಭಿಸಲು ಉದ್ದೇಶ ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು. 

ಕೊಡಿಯಾಲ ಕರೇನಹಳ್ಳಿಯಿಂದ ಪಾಲಿಕೆ ಮೈಸೂರು ರಸ್ತೆಯ ಗಡಿ ಪ್ರದೇಶವು 41.06 ಕಿ.ಮೀ. ದೂರದಲ್ಲಿರುವುದರಿಂದ ಟಿಡಿಆರ್ ಮಾಫಿಯಾ ತಂಡ ಮತ್ತು ಭ್ರಷ್ಟ ಅಧಿಕಾರಿಗಳು ರಸ್ತೆ ಮಾರ್ಗದ ಬದಲು ವಾಯು ಮಾರ್ಗವನ್ನು ಬಳಸಿದರೆ ಕೊಡಿಯಾಲ ಕರೇನಹಳ್ಳಿಯಿಂದ ಮೈಸೂರು ರಸ್ತೆಯ ಬಿಬಿಎಂಪಿ ಗಡಿ ಪ್ರದೇಶವು ಕೇವಲ 24 ಕಿ.ಮೀ. ಇರುತ್ತದೆ ಎಂಬ ವಾದವನ್ನು ಮುಂದಿಟ್ಟಿತ್ತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಿಗೆ ಹಗರಣದ ಕುರಿತ ಮಾಹಿತಿಗಳು, ದಾಖಲೆಗಳು ನಗರಾಭಿವೃದ್ಧಿ ಇಲಾಖೆಯ ಮೂಲಕ ತಲುಪಿದ್ದರೂ, ಅದನ್ನು ತಡೆಯುವ ಪ್ರಯತ್ನವನ್ನೇ ಮಾಡದೇ ಜಾಣ ಮೌನ ವಹಿಸಿದ್ದರು. ಹಾಗಾಗಿ ಈ ಬೃಹತ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

Similar News