ಮೇಯರ್‌ನಿಂದ ಮನವೊಲಿಕೆಗೆ ಯತ್ನ: ಪ್ರತಿಭಟನೆ ಕೈಬಿಡಲು ಕಾರ್ಮಿಕರ ನಿರಾಕರಣೆ

ಮುಂದುವರಿದ ಪ್ರತಿಭಟನೆ: ವಿಲೇವಾರಿಯಾಗದ ತ್ಯಾಜ್ಯ

Update: 2023-03-20 15:58 GMT

ಮಂಗಳೂರು: ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುತ್ತಿಗೆ ಆಧಾರಿತ ಪೌರಕಾರ್ಮಿಕರ ನಡೆಸುತ್ತಿರುವ ಪ್ರತಿಭಟನೆ ಸೋಮವಾರವೂ ಮುಂದುವರಿದಿದೆ. ಕಸಕಡ್ಡಿ ಸಹಿತ ತ್ಯಾಜ್ಯಗಳು ವಿಲೇವಾರಿಯಾಗದ ಕಾರಣ ಮಂಗಳೂರು ತ್ಯಾಜ್ಯಮಯವಾಗಿದೆ. ಮಂಗಳೂರು ಮೇಯರ್ ಮನವೊಲಿಕೆಗೆ ಪ್ರಯತ್ನಿಸಿದರೂ ಕಾರ್ಮಿಕರು ಪ್ರತಿಭಟನೆ ಕೈಬಿಡಲು ನಿರಾಕರಿಸಿದ್ದಾರೆ.

ನಗರದಲ್ಲಿ ಬೆರಳೆಣಿಕೆಯ ವಾಹನ ಮತ್ತು ಟಿಪ್ಪರ್‌ಗಳಲ್ಲಿ ಶೇ.25ರಷ್ಟು ತ್ಯಾಜ್ಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಹಾಗಾಗಿ ಬಹುತೇಕ ರಸ್ತೆ ಬದಿಗಳು, ಮನೆಗಳ ಮುಂಭಾಗದಲ್ಲಿ ತ್ಯಾಜ್ಯಗಳ ರಾಶಿಯನ್ನು ಕಾಣ ಬಹುದಾಗಿದೆ. ಇದರಿಂದ ನಗರವು ದುರ್ವಾಸನೆಯಿಂದ ಕೂಡಿದ್ದು, ರೋಗಗಳಿಗೆ ಆಹ್ವಾನ ನೀಡುವಂತಹ ವಾತಾವರಣ ಸೃಷ್ಟಿಯಾಗಿದೆ.

ಎಳನೀರು ಚಿಪ್ಪು, ಕಬ್ಬಿನ ಸಿಪ್ಪೆಗಳನ್ನು ಅಂಗಡಿಮುಂಗಟ್ಟುಗಳ ಮುಂದೆ ರಾಶಿ ಹಾಕಲಾಗಿವೆ. ಸಾರ್ವಜನಿಕರೂ ಕೂಡ ಮನೆಯ ಕಸವನ್ನು ಬೀದಿಬದಿ ಇಡುತ್ತಿದ್ದು, ನಾಯಿ-ಬೆಕ್ಕು ಎಳೆದಾಡಿ ಚೆಲ್ಲಾಪಿಲ್ಲಿ ಮಾಡುತ್ತಿವೆ. ನಗರದ ಮಾರುಕಟ್ಟೆಗಳು, ಅಪಾರ್ಟ್‌ಮೆಂಟ್‌ಗಳು, ಅಂಗಡಿಗಳಿಗೆ ಸಂಬಂಧಿಸಿದ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾ ಗುತ್ತಿದ್ದರೂ ಸಮರ್ಪಕವಾಗಿಲ್ಲ.

ಎಸ್‌ಟಿಪಿ ಆಪರೇಟರ್‌ಗಳ ಮುಷ್ಕರದಿಂದಾಗಿ ನಗರದ ವಿವಿಧೆಡೆ ಮ್ಯಾನ್‌ಹೋಲ್‌ಗಳಿಂದ ಒಳಚರಂಡಿ ನೀರು ಸೋರಿಕೆಯಾಗಿ, ಮುಖ್ಯರಸ್ತೆ, ಒಳ ರಸ್ತೆಗಳಲ್ಲಿ ಹರಿದು ಹೋಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನಗರದ ಕಂಕನಾಡಿ, ಪಂಪ್‌ವೆಲ್. ಫಳ್ನೀರ್ ಮತ್ತಿತರ ಕಡೆಗಳಲ್ಲಿ ಒಳಚರಂಡಿಯ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ರಸ್ತೆ ಬದಿಯಲ್ಲೇ ಈ ನೀರು ಸಂಗ್ರಹಗೊಂಡ ಕಾರಣ ಪಾದಚಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.

ಗುತ್ತಿಗೆ ಆಧಾರಿತ ಒಳಚರಂಡಿ ಕಾರ್ಮಿಕರು ಮತ್ತು ಎಸ್‌ಟಿಪಿ ಆಪರೇಟರ್‌ಗಳು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ೯ನೇ ದಿನ ಪೂರೈಸಿದೆ. ನಗರದ ಅಳಕೆಯ ಎಸ್‌ಟಿಪಿ ಆವರಣದಲ್ಲಿ 125ಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇಯರ್ ಜಯಾನಂದ ಅಂಚನ್ ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದರು. ರಾಜ್ಯಮಟ್ಟದಲ್ಲಿ ನಿರ್ಧಾರವಾಗದ ಹೊರತು ತಾವು ಕೆಲಸ ಕಾರ್ಯ ಪ್ರಾರಂಭಿಸುವುದಿಲ್ಲ ಎಂದು ಕಾರ್ಮಿಕರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮೇಯರ್ ಜಯಾನಂದ ಅಂಚನ್‌ರ ಅಧ್ಯಕ್ಷತೆಯಲ್ಲಿ ಸೋಮವಾರ ಪಾಲಿಕೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಪಾಲಿಕೆಯ ಆಯುಕ್ತ ಚನ್ನಬಸಪ್ಪ ಕೆ. ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Similar News