ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆ ಲೋಕಾರ್ಪಣೆ

Update: 2023-03-20 17:17 GMT

ಸುರತ್ಕಲ್‌, ಮಾ.20: ಹಲವು ವರ್ಷಗಳಿಂದ ಸ್ವಂತ ಸೂರಿಲ್ಲದೆ, ಎಪಿಎಂಸಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸ್‌ ಠಾಣೆಯ ನೂತನ ಕಚೇರಿ ಸೋಮವಾರ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.

ನೂತನ ಪೊಲೀಸ್‌ ಠಾಣೆಯನ್ನು ಮಂಗಳೂರು ನಗರ ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಲವು ಸಮಯದ ಬೇಡಿಕೆಯಾಗಿದ್ದ ಸುಸಜ್ಜಿತ ಸಂಚಾರ ಪೊಲೀಸ್‌ ಠಾಣೆ ಕಟ್ಟಡ ನಿರ್ಮಿಸಿ ಉದ್ಘಾಟಿಸಲಾಗಿದೆ. ಇದಕ್ಕಾಗಿ ಶ್ರಮವಹಿಸಿದ ಅಧಿಕಾರಿಗಳು, ಶಾಸಕರು ಸೇರಿದಂತೆ ಸರಕಾರಕ್ಕೆ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಉತ್ತರ ವಲಯ ಶಾಸಕ ಭರತ್‌ ಶೆಟ್ಟಿ ವೈ., ಸಾರ್ವಜನಿಕರ ಹಲವು ಸಮಯದ ಬೇಡಿಕೆಯಂತೆ 2 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಚಾರ ಪೊಲೀಸ್‌ ಠಾಣೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಆಮೂಲಕ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಉಳಿದ ಪೊಲೀಸರಿಗೆ ಮಾದರಿಯಾಗಬೇಕೆಂದರು.

ಇದೇ ಸಂದರ್ಭ ಸಮಾರಂಭ ಕಟ್ಟಡದ ಗುತ್ತಿಗೆದಾರ ಜನಾರ್ಧನ ಬಾಬು, ಇಂಜಿನಿಯರ್‌ ಸನ್ನೇಗೌಡ, ಪೊಲೀಸ್‌ ಹೌಸಿಂಗ್‌ ಕಾರ್ಪೊರೇಷನ್‌ ಅಧಿಕಾರಿ ಪ್ರಜ್ಞಾ ಆನಂದ್‌, ಎಡಬ್ಲ್ಯೂಡಿ ಇಂಜಿನಿಯರ್‌ ಸಂಜಯ್‌ ಅವರನ್ನು ಸನ್ಮಾನಿಸಿ ಗೌರವಿಸಿದರು.

ಸಮಾರಂಭದಲ್ಲಿ ಕಾನೂನು ಸುವ್ಯವಸ್ಥೆಯ ಡಿಸಿಪಿ ಅಂಶುಕುಮಾರ್‌, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್‌, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.

ಉತ್ತರ ಸಂಚಾರ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಸುರೇಶ್‌ ಸ್ವಾಗತಿಸಿದರು. ಎಸಿಪಿ ಗೀತಾ ಕುಲಕರ್ಣಿ ಧನ್ಯವಾದ ಸಮರ್ಪಿಸಿದರು.

Similar News