ಕ್ರಿಕೆಟ್ ಪಂದ್ಯಾಟ: ಪುತ್ತೂರು ತಂಡಕ್ಕೆ ಜೈ ಭೀಮ್ ಟ್ರೋಫಿ

Update: 2023-03-20 17:24 GMT

ಪಡುಬಿದ್ರಿ: ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಪಡುಬಿದ್ರಿ ಗ್ರಾಮ ಶಾಖೆಯ ದಶಮನೋತ್ಸವದ ಅಂಗವಾಗಿ ಹೆಜಮಾಡಿ ಬಸ್ತಿಪಡ್ಪು ಮೈದಾನದಲ್ಲಿ ಕಳೆದ 2 ದಿನಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ನಡೆದ ರಾಜ್ಯ ಮಟ್ಟದ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ-ಪುತ್ತೂರಿನ ಓಂಕಾರೇಶ್ವರೀ ತಂಡವು ಜೈ ಭೀಮ್ ಟ್ರೋಫಿ-2023 ಪಡೆಯಿತು.

ಫೈನಲ್ ಪಂದ್ಯದಲ್ಲಿ ಓಂಕಾರೇಶ್ವರಿ ತಂಡವು ಪಲಿಮಾರಿನ ಮಹದೇಶ್ವರ ತಂಡವನ್ನು ಸೋಲಿಸಿ ಜೈ ಭೀಮ್ ಟ್ರೋಫಿ ಸಹಿತ ನಗದು ರೂ. 40 ಸಾವಿರ ಪಡೆಯಿತು. ಫೈನಲ್‍ನಲ್ಲಿ ಸೋತ ಮಹದೇಶ್ವರ ತಂಡವು ದ್ವಿತೀಯ ಟ್ರೋಫಿ ಸಹಿತ ನಗದು ರೂ. 30 ಸಾವಿರ ಪಡೆಯಿತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಠರಾಗಿ ಓಂಕಾರೇಶ್ವರೀ ತಂಡದ ನಿತಿನ್, ಅತ್ಯುತ್ತಮ ಬ್ಯಾಟ್ಸ್‍ಮೆನ್ ಅಗಿ ಓಂಕಾರೇಶ್ವರೀ ತಂಡದ ಸಂದೇಶ್, ಅತ್ಯುತ್ತಮ ಬೌಲರ್ ಆಗಿ ಮಹದೇಶ್ವರ ತಂಡದ ಪ್ರೀತಮ್ ಹಾಗೂ ಪಂದ್ಯಾವಳಿಯ ಸವ್ಯಸಾಚಿ ಅಟಗಾರರಾಗಿ ಮಹದೇಶ್ವರ ತಂಡದ ವಿಘ್ನೇಶ್ ವೈಯಕ್ತಿಕ ಪ್ರಶಸ್ತಿ ಪಡೆದರು.

ಕಾಪು ಶಾಸಕ ಲಾಲಾಜಿ ಅರ್.ಮೆಂಡನ್, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷೆ ಯಶೊದಾ, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕೆಪಿಸಿಸಿ ಕೋರ್ಡಿನೇಟರ್ ನವೀನ್‍ ಚಂದ್ರ ಜೆ.ಶೆಟ್ಟಿ, ಉಡುಪಿ ಜಿಲ್ಲಾ ಟೆನ್ನಿಸ್‍ಬಾಲ್ ಕ್ರಿಕೆಟ್ ಅಸೀಸಿಯೇಶನ್ ಅಧ್ಯಕ್ಷ ಶರತ್ ಶೆಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್, ಪಡುಬಿದ್ರಿ ಹೋಟೆಲ್ ಪಲ್ಲವಿಯ ಸಂತೋಷ್ ಕುಮಾರ್ ಶೆಟ್ಟಿ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್‍ರಾಜ್ ಬಿರ್ತಿ ಮತ್ತು ಪರಮೇಶ್ವರ ಉಪ್ಪೂರು, ಭಾಸ್ಕರ್ ಮಾಸ್ಟರ್ ನಿಟ್ಟೂರು, ಪಡುಬಿದ್ರಿ ಶಾಖೆಯ ಪ್ರಧಾನ ಸಂಚಾಲಕ ಸುರೇಶ್ ಪಾದೆಬೆಟ್ಟು, ಮಹಿಳಾ ಸಂಚಾಲಕಿ ವಸಂತಿ ಶಿವಾನಂದ, ಗೌರವ ಸಲಹೆಗಾರ ಸುಖೇಶ್ ಪಡುಬಿದ್ರಿ, ಮೋಹನ್ ಹೆಜಮಾಡಿ ಮುಖ್ಯ ಅತಿಥಿಗಳಾಗಿದ್ದು, ವಿಜೇತರಿಗೆ ಪ್ರಶಸ್ತಿ ವಿತರಿಸಿದರು.

ಇದೇ ಸಂದರ್ಭ ಬಿಹಾರದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಶಾಟ್‍ಪುಟ್‍ನಲ್ಲಿ ಚಿನ್ನದ ಪದಕ ಗಳಿಸಿದ ಅನುರಾಗ್ ಸಹಿತ ಸಾಧಕರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಕೀರ್ತಿಕುಮಾರ್ ಸ್ವಾಗತಿಸಿದರು. ವಸಂತಿ ಶಿವಾನಂದ ವರದಿ ವಾಚಿಸಿದರು. ಶಿವಾನಂದ ಕಾರ್ಯಕ್ರಮ ನಿರ್ವಹಿಸಿದರು.

Similar News