ಸಂಘಪರಿವಾರದ ವಿರುದ್ಧ ಪೋಸ್ಟ್ ಆರೋಪ: ನಟ ಚೇತನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

Update: 2023-03-21 12:25 GMT

ಬೆಂಗಳೂರು, ಮಾ.21: ಸಾಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾರದ ವಿರುದ್ಧ ಪೋಸ್ಟ್ ಹಾಕಿದ್ದರೆಂಬ ಆರೋಪದ ಮೇಲೆ ಬಂಧನಕ್ಕೊಳಗಾದ ಕನ್ನಡದ ನಟ ಚೇತನ್ ಅಹಿಂಸಾ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರು 32ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. 

ಸಂಘಪರಿವಾರದ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಶಿವಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಸೋಮವಾರ ರಾತ್ರಿ ಶೇಷಾದ್ರಿಪುರಂ ಪೊಲೀಸರು ಚೇತನ್ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ಇಂದು ಬೆಳಗ್ಗೆ  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. 

|| ಬಂಧನಕ್ಕೆ ಕಾರಣವಾದ ಚೇತನ್ ಅವರ ಫೇಸ್ ಬುಕ್ ಪೋಸ್ಟ್ ನಲ್ಲೇನಿದೆ? 

''ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ''

''ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ "ರಾಷ್ಟ್ರ" ಪ್ರಾರಂಭವಾಯಿತು ಎಂದಿರುವ ಸಾವರ್ಕರ್ ಹೇಳಿಕೆ ಸುಳ್ಳು. 1992 ರಲ್ಲಿ ಬಾಬರಿ ಮಸೀದಿ 'ರಾಮನ ಜನ್ಮಭೂಮಿ’ ಎನ್ನುವುದು ಸಹ ಒಂದುಸುಳ್ಳು.ಈಗ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ‘ಕೊಂದರು’ ಎನ್ನುವುದು ಸುಳ್ಳಲಾಗಿದ್ದು, ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ'' ಎಂದು ಚೇತನ್ ತಮ್ಮ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಗಳನ್ನು ಈ ಬರಹ ಪ್ರಕಟಿಸಿದ್ದರು.

ಇದನ್ನೂ ಓದಿ: ನಟ ಚೇತನ್ ಅಹಿಂಸಾ ಬಂಧನ

Similar News