ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರಶೀದಾ ಬಾನು ಪೆರಿಮಾರ್, ಉಪಾಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಸುಜೀರ್ ಆಯ್ಕೆ

Update: 2023-03-21 14:30 GMT

ಫರಂಗಿಪೇಟೆ. ಮಾ.21: ಪುದು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ರಶೀದಾ ಬಾನು, ಉಪಾಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಸುಜೀರ್ ಆಯ್ಕೆಯಾಗಿದ್ದಾರೆ.

ಮಂಗಳವಾರ ಪುದು ಪಂಚಾಯತ್ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತರಿಂದ ಅಧ್ಯಕ್ಷ  ಸ್ಥಾನಕ್ಕೆ ರಶೀದಾ ಬಾನು, ಉಪಾಧ್ಯಕ್ಷ ಸ್ಥಾನಕ್ಕೆ ಮುಹಮ್ಮದ್ ಇಕ್ಬಾಲ್ ಸುಜೀರ್ ಮತ್ತು ಎಸ್ ಡಿಪಿಐ ಯಿಂದ ಅಧ್ಯಕ್ಷ ಸ್ಥಾನಕ್ಕೆ ರುಕ್ಸಾನ ಸಲಾಂ, ಉಪಾಧ್ಯಕ್ಷ ಸ್ಥಾನಕ್ಕೆ ನಝೀರ್ ಕುಂಜತ್ಕಳ, ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮನಾಭ ಶೆಟ್ಟಿ ನೆತ್ರೆಕೆರೆ ಉಮೇದುವಾರಿಕೆ ಸಲ್ಲಿಸಲಾಗಿತ್ತು. 

ಚುನಾವಣೆಯಲ್ಲಿ ಒಟ್ಟು 34 ಸದಸ್ಯ ಸ್ಥಾನದಲ್ಲಿ 33 ಸದಸ್ಯರು ಮತ ಚಲಾವಣೆ ಮಾಡಿದ್ದು, ಒಟ್ಟು ಚಲಾವಣೆಯಾದ ಮತಗಳಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ರಶೀದಾ ಬಾನು ಹಾಗೂ  ಉಪಾಧ್ಯಕ್ಷರಾಗಿ ಆಯ್ಕೆಯಾದ ಮುಹಮ್ಮದ್ ಇಕ್ಬಾಲ್ ಸುಜೀರ್ ಅವರಿಗೆ ತಲಾ 20,  ಎಸ್.ಡಿಪಿಐ ಬೆಂಬಲಿತರಾದ ರುಕ್ಸಾನ ಸಲಾಮ್ ರವರಿಗೆ  7, ನಝೀರ್ ಕುಂಜತ್ಕಳ್ ಗೆ 7 ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದ ಬಿಜೆಪಿ ಬೆಂಬಲಿತರಾದ ಪದ್ಮನಾಭ ಶೆಟ್ಟಿ 6 ಮತಗಳನ್ನು ಪಡೆದುಕೊಂಡರು. 

ಫೆಬ್ರವರಿ 25 ರಂದು ಚುನಾವಣೆ ನಡೆದಿದ್ದು ಒಟ್ಟು 34 ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್  ಬೆಂಬಲಿತರು 21, ಎಸ್ ಡಿಪಿಐ ಬೆಂಬಲಿತರು 7, ಬಿಜೆಪಿ ಬೆಂಬಲಿತರು 6 ಸ್ಥಾನ ಪಡೆದಿದ್ದಾರೆ. 

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ 'ಎ' ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಪಡಿಸಲಾಗಿತ್ತು.

Similar News