ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನ ಖರೀದಿಸಲು ತೆರಳುತ್ತಿದ್ದ ವ್ಯಕ್ತಿಯ ಕೈಯಿಂದ 10 ಲಕ್ಷ ರೂ. ಎಗರಿಸಿದ ಚೋರ
ಉಪ್ಪಿನಂಗಡಿ, ಮಾ.21: ವ್ಯಕ್ತಿಯೋರ್ವರ ಕೈಯಿಂದ 10 ಲಕ್ಷ ರೂ.ಗಳಿದ್ದ ಚೀಲವನ್ನು ಅಪರಿಚಿತ ವ್ಯಕ್ತಿಯೋರ್ವ ಎಗರಿಸಿ ಪರಾರಿಯಾದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪೆದಮಲೆ- ಸರಳೀಕಟ್ಟೆ ರಸ್ತೆಯ ರಿಫಾಯಿ ನಗರ ಎಂಬಲ್ಲಿ ಸೋಮವಾರ ನಡೆದಿರುವುದು ವರದಿಯಾಗಿದೆ.
ಇಳಂತಿಲ ಗ್ರಾಮದ ಕಾಯರ್ಪಾಡಿ ನಿವಾಸಿ ಮುಹಮ್ಮದ್ ಕೆ. ಎಂಬವರು ಹಣ ಕಳೆದುಕೊಂಡವರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಘಟನೆ ವಿವರ: ಮುಹಮ್ಮದ್ ತನ್ನ ಮಗಳ ಮದುವೆಗೆ ಚಿನಾಭರಣ ಖರೀದಿಸಲೆಂದು ಸೋಮವಾರ 10 ಲಕ್ಷ ರೂ.ವನ್ನು ಬಟ್ಟೆಯ ಚೀಲವೊಂದರಲ್ಲಿ ತುಂಬಿಸಿ ಪತ್ನಿ ಮೈಮೂನಾ ಜೊತೆ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿಗೆ ಹೊರಟಿದ್ದರು. ಅರ್ಧ ದಾರಿ ತಲುಪಿದಾಗ ಸರಳಿಕಟ್ಟೆಯ ಕಂಪ್ಲೋಡಿ ಎಂಬಲ್ಲಿ ಸಂಬಂಧಿಕರೊಬ್ಬರು ಮೃತಪಟ್ಟ ಮಾಹಿತಿ ತಿಳಿದು ಅಲ್ಲಿಗೆ ತೆರಳುತ್ತಿದ್ದಾಗ ಮಧ್ಯಾಹ್ನ ರಿಫಾಯಿ ನಗರ ಎಂಬಲ್ಲಿಗೆ ತಲುಪಿದಾಗ ಪತ್ನಿ ಮೈಮೂನಾ ಆಯತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಅವರನ್ನು ಮನೆಗೆ ಬಿಟ್ಟು, ಬಳಿಕ ಅದೇ ರಿಕ್ಷಾದಲ್ಲಿ ಮುಹಮ್ಮದ್ ಹಣದ ಜೊತೆ ತನ್ನ ದ್ವಿಚಕ್ರ ವಾಹನವಿದ್ದ ರಿಫಾಯಿ ನಗರಕ್ಕೆ ಅಪರಾಹ್ನ 3 ಗಂಟೆಯ ಸುಮಾರಿಗೆ ತಲುಪಿದ್ದಾರೆ. ಅಲ್ಲಿದ್ದ ತನ್ನ ದ್ವಿಚಕ್ರ ವಾಹನದ ಸೀಟಿನ್ನೆತ್ತಿ ಹಣದ ಕಟ್ಟನ್ನು ಅದರಲ್ಲಿ ಇಡುತ್ತಿದ್ದಂತೆಯೇ ಮುಹಮ್ಮದ್ ಅವರ ಹಿಂದಿನಿಂದ ಬಂದ ಅಪರಿಚಿತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಎಗರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.