ಕೆ.ಆರ್.ಪುರಂ- ವೈಟ್‍ಫೀಲ್ಡ್ ಮೆಟ್ರೋ ಕಾಮಗಾರಿ ಅಪೂರ್ಣ; ಉದ್ಘಾಟನೆ ಅಗತ್ಯವೇ?: ಮೋದಿಗೆ ಸುರ್ಜೇವಾಲಾ ಪ್ರಶ್ನೆ

Update: 2023-03-21 12:48 GMT

ಬೆಂಗಳೂರು, ಮಾ. 21: ‘ಪ್ರಧಾನಿ ಮೋದಿ ನಕಲಿ ವೈದ್ಯರಂತಾಗಿದ್ದು, ಅಪೂರ್ಣ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಆರಂಭ ಹಾಗೂ ಅಂತಿಮ ಸ್ಥಳ ನಿಗದಿಯಾಗದಿರುವ ಮೆಟ್ರೋ ಮಾರ್ಗ ಉದ್ಘಾಟನೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರದ ಹುಚ್ಚಿಗೆ ಜನರ ಸುರಕ್ಷತೆ-ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ದೂರಿದ್ದಾರೆ.

ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಲಿದೆ ಎಂಬುದು ಬೊಮ್ಮಾಯಿ ಹಾಗೂ ಮೋದಿ ಸರಕಾರಕ್ಕೆ ಮನವರಿಕೆಯಾಗಿದ್ದು, ಅವರು ಉದ್ದೇಶಪೂರ್ವಕವಾಗಿ ಪ್ರಚಾರ ಪಡೆಯುವ ಗೀಳು ಹತ್ತಿಸಿಕೊಂಡಿದ್ದಾರೆ. ಆದರೆ, ಅವರು ಪ್ರತಿ ಪ್ರಯತ್ನದಲ್ಲೂ ಮುಖಭಂಗ ಅನುಭವಿಸುತ್ತಿದ್ದಾರೆ’ ಎಂದು ಟೀಕಿಸಿದರು.

2022ರ ನವೆಂಬರ್ 22ಕ್ಕೆ ಪ್ರಧಾನಿ ಮೋದಿ ಅಪೂರ್ಣಗೊಂಡಿರುವ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ 2ನೆ ಟರ್ಮಿನಲ್ ಉದ್ಘಾಟಿಸಿದರು. ಆದರೆ, ಈ ದಿನದವರೆಗೂ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭವಾಗಿಲ್ಲ. ಫೆಬ್ರವರಿ 27ಕ್ಕೆ 500 ಕೋಟಿ ರೂ.ವೆಚ್ಚದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದರು. ಇದುವರೆಗೂ ಅಲ್ಲಿ ಒಂದೇ ಒಂದು ವಿಮಾನ ಕಾರ್ಯಾಚರಣೆ ಆರಂಭ ಮಾಡಿಲ್ಲ. 

ಮಾ.12ಕ್ಕೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ಮಾಡಿದ್ದು, ಇದುವರೆಗೂ ಈ ರಸ್ತೆ ಪೂರ್ಣ ಕಾಮಗಾರಿಯಾಗಿಲ್ಲ. ಸರ್ವೀಸ್ ರಸ್ತೆಗಳು, ಅಂಡರ್ ಪಾಸ್, ಓವರ್ ಪಾಸ್, ಪಾದಚಾರಿ ಅಂಡರ್ ಪಾಸ್ ಪೂರ್ಣಗೊಂಡಿಲ್ಲ. ಮಾ.25ಕ್ಕೆ ಮೋದಿ ಆರಂಭದಿಂದ ಅಂತಿಮ ಸ್ಥಳ ನಿಗದಿಯಾಗದ ಮೆಟ್ರೋ ಮಾರ್ಗ ಉದ್ಘಾಟಿಸುತ್ತಿದ್ದಾರೆ. ಇದು ಬೆಂಗಳೂರಿಗರ ಸಮಸ್ಯೆಗೆ ಪರಿಹಾರ ನೀಡುವ ಬದಲು ಹೆಚ್ಚು ಅಡಚಣೆ ಸೃಷ್ಟಿಸಲಿದೆ ಎಂದು ಅವರು ಟೀಕಿಸಿದರು.

''ಬೆಂಗಳೂರಿನ ಮೆಟ್ರೋದ ನೇರಳೆ ಬಣ್ಣದ ಮಾರ್ಗ ಬೈಯಪ್ಪನಹಳ್ಳಿಗೆ ಅಂತ್ಯವಾಗಲಿದ್ದು, ಈ ಮಾರ್ಗವನ್ನು ಬೈಯ್ಯಪ್ಪನಹಳ್ಳಿಯಿಂದ ವೈಟ್‍ಫೀಲ್ಡ್ ಐಟಿ ಕಾರಿಡಾರ್ ಗೆ ಸಂಪರ್ಕಿಸಲಾಗುವುದು. ಈ ಮಾರ್ಗ ವಿಸ್ತರಣೆಯು 3 ವರ್ಷಗಳ ವಿಳಂಬವಾಗಲಿದೆ. ಇನ್ನೂ 6 ತಿಂಗಳ ವರೆಗೆ ಈ ಮಾರ್ಗ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಈ ಎರಡೂ ಮೆಟ್ರೋ ನಿಲ್ದಾಣಗಳ ನಡುವೆ ಸಂಪರ್ಕ ಪೂರ್ಣಗೊಂಡಿಲ್ಲ'' ಎಂದು ಆರೋಪಿಸಿದರು.

''ಮೋದಿ, ಕೆ.ಆರ್.ಪುರಂ ಹಾಗೂ ವೈಟ್‍ಫೀಲ್ಡ್ ನಡುವಣ ಮೆಟ್ರೋ ಮಾರ್ಗ ಉದ್ಘಾಟಿಸುತ್ತಿದ್ದು, ಈ ಮೆಟ್ರೋ ಮಾರ್ಗ ಎರಡೂ ಕಡೆಯಿಂದಲೂ ಹಾಲಿ ಮೆಟ್ರೋ ಮಾರ್ಗಕ್ಕೆ ಸಂಪರ್ಕ ಸಾಧಿಸಿಲ್ಲ. ಬೈಯಪ್ಪನಹಳ್ಳಿ ಹಾಗೂ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದ ಮಧ್ಯೆ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸುವುದಾಗಿ ಸಮರ್ಥನೆ ನೀಡುತ್ತಿದ್ದು, ಈಗಾಗಲೇ ಬಿಎಂಟಿಸಿಯಲ್ಲಿ 8 ಸಾವಿರ ಬಸ್‍ಗಳ ಕೊರತೆ ಎದುರಾಗಿದೆ.'' ಎಂದು ಗಮನ ಸೆಳೆದರು. 

''ಹೀಗಾಗಿ, ಅಪೂರ್ಣಗೊಂಡಿರುವ ಕೆ.ಆರ್.ಪುರಂ ಹಾಗೂ ವೈಟ್‍ಫೀಲ್ಡ್ ನಡುವಣ ಮೆಟ್ರೋ ಮಾರ್ಗ ಸಾರ್ವಜನಿಕರ ಸುರಕ್ಷತೆಗೆ ಅಪಾಯಕಾರಿಯಾಗಿದ್ದು ಪ್ರಯಾಣಿಕರ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಕೆ.ಆರ್.ಪುರಂ ನಿಲ್ದಾಣ ಹಾಗೂ ವೈಟ್‍ಫೀಲ್ಡ್ ನಿಲ್ದಾಣಗಳಿಂದ ಬೈಯಪ್ಪನಹಳ್ಳಿ ಮೆಟ್ರೋಗೆ ಸಂಪರ್ಕವಿಲ್ಲದ ಅಪೂರ್ಣಗೊಂಡಿರುವ ಮೆಟ್ರೋ ಮಾರ್ಗವನ್ನು ಮೋದಿ ಉದ್ಘಾಟಿಸುತ್ತಿರುವುದೇಕೆ?'' ಎಂದು ಅವರು ಪ್ರಶ್ನಿಸಿದ್ದಾರೆ.

‘ಮೆಟ್ರೋ ರೈಲ್ವೆ ಸುರಕ್ಷತೆಯ ಆಯುಕ್ತರು 58 ದೊಡ್ಡ ಹಾಗೂ ಸಣ್ಣ ದೋಷಗಳನ್ನು ಗುರುತಿಸಿದ್ದು, ಮೋಟ್ರೋ ಮಗಾರಿ ಅಪೂರ್ಣಗೊಂಡಿರುವುದು ಸತ್ಯವಲ್ಲವೇ? ಗರುಡಾಚಾರ್ಯಪಾಳ್ಯ ಹಾಗೂ ಕೆ.ಆರ್ ಪುರಂ ಮೆಟ್ರೋ ನಿಲ್ದಾಣ ನಡೆವ ಒಂದು ಭಾಗದ ಮೆಟ್ರೋ ಲೈನ್ ಇಲ್ಲದಿರುವುದು ಸಾರ್ವಜನಿಕರ ಸುರಕ್ಷತೆಗೆ ಅಪಾಯವಲ್ಲವೇ? ಉದ್ಘಾಟನೆಯಾಗುವ ಮುನ್ನ ಈ ಮಾರ್ಗದಲ್ಲಿ ಆಯುಕ್ತರು ಹೊಸತಾಗಿ ಸುರಕ್ಷತಾ ಪರಿಶೀಲನೆ ನಡೆಸಬೇಕಲ್ಲವೇ? ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗೆ ಇದುವರೆಗೂ 38 ಮಂದಿ ಬಲಿಯಾಗಿದ್ದರೂ ಮೋದಿ ಹಾಗೂ ಬೊಮ್ಮಾಯಿಗೆ ಬೆಂಗಳೂರು ಜನರ ಸುರಕ್ಷತೆಗಿಂತ ತಮ್ಮ ಚುನಾವಣೆ ಪ್ರಚಾರವೇ ಹೆಚ್ಚಾಯಿತೇ?’

-ರಣದೀಪ್ ಸಿಂಗ್ ಸುರ್ಜೇವಾಲಾ ಕಾಂಗ್ರೆಸ್ ಉಸ್ತುವಾರಿ

Similar News