ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಕಾನೂನುಬಾಹಿರ ನಿರ್ಣಯ ಪ್ರಕರಣ: ಸಿಬಿಐಗೆ ತನಿಖೆಗೆ ವಹಿಸಲು ಪಿ.ಆರ್.ರಮೇಶ್ ಆಗ್ರಹ

Update: 2023-03-21 13:04 GMT

ಬೆಂಗಳೂರು, ಮಾ.21: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊರಡಿದ್ದ ನಿರ್ಣಯಗಳನ್ನು ಹೈಕೋರ್ಟ್ ಆದೇಶದ ಅನ್ವಯ ಹಿಂತೆದುಕೊಂಡಿದ್ದರೂ, ಈ ನಿರ್ಣಯ ಅಡಿ ಅಕ್ರಮವೆಸಗಿದವರ ಮೇಲೆ ಯಾವುದೇ ಕಾನೂನು ಕ್ರಮ ಆಗಿಲ್ಲ. ಹಾಗಾಗಿ ಅಕ್ರಮವೆಸಗಿದೆ 1,316 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಆಗ್ರಹಿಸಿದ್ದಾರೆ.

ಮಂಗಳವಾರ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ(2007) ಮಾಲಿನ್ಯ ಮಂಡಳಿಯು ಸಂಸ್ಥೆಗಳು ಅಕ್ರಮ ಎಸಗಿದ್ದರೂ, ಆಡಳಿತ ಶುಲ್ಕ ವಿಧಿಸುವ ಮೂಲಕ ಸಂಸ್ಥೆಗಳಿಗೆ ನಿರ್ಮಾಣ ಮತ್ತು ಕಾರ್ಯಾಚರಣೆಗೆ ಅನುಮತಿ ನೀಡಲು ಅವಕಾಶ ಕಲ್ಪಿಸುವ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಈ ಅಕ್ರಮವನ್ನು ಸಕ್ರಮಗೊಳಿಸುವ ನಿರ್ಣಯಗಳನ್ನು 2015ರಲ್ಲಿ ಹೈಕೋರ್ಟ್‍ನಲ್ಲಿ ಪ್ರಶ್ನಿಸಿದಾಗ ಮಂಡಳಿಯು ಈ ನಿರ್ಣಯಗಳನ್ನು ಹಿಂಪಡೆಯಿತು. ಆದರೆ 2007ರಿಂದ 2015ರ ವರೆಗೆ ಕನೂನುಬಾಹಿರವಾಗಿ ಅನುಮತಿಯನ್ನು ಪಡೆದ ಸಂಸ್ಥೆಗಳ ಮೇಲೆ ಕ್ರಮ ಜರಗಿಸಿಲ್ಲ ಎಂದರು. 

ಮಂಡಳಿಯು ತೆಗೆದುಕೊಂಡಿದ್ದ 2027ರ ನಿರ್ಣಯಗಳಂತೆ ಅನುಮತಿ ಪಡೆದಿರುವ ಅನಧಿಕೃತ ನಿರ್ಮಾಣಗಳ ಮೇಲೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೆ ಸರಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾನೂನಿನ ಪ್ರಕಾರ ಅಕ್ರಮವೆಸಗಿದರಿಗೆ ಜೈಲು ಶಿಕ್ಷೆಯಾಗಬೇಕು ಎಂದು ಅವರು ತಿಳಿಸಿದರು.

2007 ರಿಂದ 2015ರ ಮಧ್ಯೆ 1,316 ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ ಅನುಮತಿಯನ್ನು ನೀಡಲಾಗಿದೆ. ಮಂಡಳಿಯು 2007ರಲ್ಲಿ ಸಮ್ಮತಿ ಪತ್ರ ನೀಡುವ ತೀರ್ಮಾನ ಕೈಗೊಂಡಿರುವುದೇ ತಪ್ಪಾಗಿದ್ದು, ಈ ನಿರ್ಣಯದ ಹಿಂದೆ ಅಂದಿನ ಸರಕಾರ ಅಕ್ರಮವೆಸಗಿದೆ ಎಂದು ಅವರು ಆರೋಪಿಸಿದರು.

ಹೈಕೋರ್ಟ್ ಈ ಅವಧಿಯಲ್ಲಿ ಮಂಡಳಿಯಿಂದ ಅನುಮತಿ ಪಡೆದ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳುವಂತೆ 2022ರ ಜುಲೈಯಲ್ಲಿ ಆದೇಶ ನೀಡಿದೆ. ಆದರೆ ಈ ಆದೇಶ ನೀಡಿದ ಬರೋಬ್ಬರಿ ಎಂಟು ತಿಂಗಳ ಬಳಿಕ ಮಂಡಳಿಯು ಈ ಆದೇಶದ ಪುನರ್ ಪರಿಶೀಲನೆ ನಡೆಸುವಂತೆ ಅರ್ಜಿ ಹಾಕಿರುವುದು ಮಂಡಳಿಯ ನಿರ್ಲಕ್ಷತನ ಮತ್ತು ಕಾಲಹರಣದ ಉದ್ದೇಶವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

Similar News