ಅಮೃತಪಾಲ್, ಸಹಚರರ ವಿರುದ್ಧ ಎನ್ಎಸ್ಎ ಹೇರಿಕೆ

ಏನಿದು ರಾಷ್ಟ್ರೀಯ ಭದ್ರತಾ ಕಾಯ್ದೆ? ಈ ಕಾಯ್ದೆಯಡಿ ಬಂಧನ ಹೇಗೆ?: ಇಲ್ಲಿದೆ ಮಾಹಿತಿ

Update: 2023-03-21 17:23 GMT

ಚಂಡಿಗಡ: ತಲೆಮರೆಸಿಕೊಂಡಿರುವ ಸ್ವಘೋಷಿತ ಸಿಖ್ ಬೋಧಕ, 'ವಾರಿಸ್ ಪಂಜಾಬ್ ದೆ' ಮುಖ್ಯಸ್ಥ ಅಮೃತಪಾಲ್ ಸಿಂಗ್ ಪ್ರಕರಣದಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಯನ್ನು ಹೇರಲಾಗಿದೆ ಎಂದು ಪಂಜಾಬಿನ ಅಡ್ವೊಕೇಟ್ ಜನರಲ್ ವಿನೋದ ಘಾಯ್ ಅವರು ಮಂಗಳವಾರ ತಿಳಿಸಿದರು.

ಅಮೃತಪಾಲ್ ನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಪೊಲೀಸರಿಗೆ ನಿರ್ದೇಶನ ಕೋರಿ ವಾರಿಸ್ ಪಂಜಾಬ ದೆ ಸಂಘಟನೆಯ ಕಾನೂನು ಸಲಹೆಗಾರರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಘಾಯ್ ಈ ಮಾಹಿತಿಯನ್ನು ನೀಡಿದರು.

ಭದ್ರತೆಯ ಕಾರಣದಿಂದ ಅಸ್ಸಾಮಿನ ದಿಬ್ರುಗಡದ ಜೈಲಿಗೆ ಸ್ಥಳಾಂತರಿಸಲ್ಪಟ್ಟಿರುವ ಅಮೃತಪಾಲ್ನ ನಾಲ್ವರು ಸಹಚರರ ವಿರುದ್ಧವೂ ಎನ್ಎಸ್ಎ ಹೇರಲಾಗಿದೆ.

ಏನಿದು ರಾಷ್ಟ್ರೀಯ ಭದ್ರತಾ ಕಾಯ್ದೆ,1980?

ಎನ್ಎಸ್ಎ ಅನ್ನು ಸಂಸತ್ತು 1980ರಲ್ಲಿ ಅಂಗೀಕರಿಸಿದ್ದು,ನಂತರ ಹಲವಾರು ಸಲ ಅದಕ್ಕೆ ತಿದ್ದುಪಡಿಗಳನ್ನು ತರಲಾಗಿದೆ. ಯಾವುದೇ ವ್ಯಕ್ತಿಯನ್ನು ವಿಧ್ಯುಕ್ತ ಆರೋಪ ಮತ್ತು ವಿಚಾರಣೆಯಿಲ್ಲದೆ ಬಂಧನದಲ್ಲಿರಿಸಲು ಎನ್ಎಸ್ಎ ಸರಕಾರಕ್ಕೆ ಅಧಿಕಾರವನ್ನು ನೀಡುತ್ತದೆ.

ಕಾಯ್ದೆಯಡಿ ಓರ್ವ ವ್ಯಕ್ತಿಯು ಸರಕಾರದ ಭದ್ರತೆಗೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವ ಕೃತ್ಯವನ್ನು ಎಸಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಬಂಧಿಸಬಹುದು. ಅದು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ದಂಡಾಧಿಕಾರಿಗಳು ಹೊರಡಿಸುವ ಆಡಳಿತಾತ್ಮಕ ಆದೇಶವಾಗಿದೆ.

ಓರ್ವ ವ್ಯಕ್ತಿಯು ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ಜಿಲ್ಲಾಧಿಕಾರಿಗಳು ಆತನ ವಿರುದ್ಧ ಎನ್ಎಸ್ಎ ಹೇರಬಹುದು ಅಥವಾ ಓರ್ವ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದರೂ ಎನ್ಎಸ್ಎ ಅಡಿ ಆತನನ್ನು ತಕ್ಷಣ ಬಂಧಿಸಬಹುದು. ವ್ಯಕ್ತಿಯು ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರೂ ಆತನನ್ನು ಎನ್ಎಸ್ಎ ಅಡಿ ಬಂಧಿಸಬಹುದಾಗಿದೆ. ಕಾನೂನಿನಂತೆ ಪೊಲೀಸರು ತಮ್ಮ ಕಸ್ಟಡಿಯಲ್ಲಿರುವ ಬಂಧಿತ ಆರೋಪಿಯನ್ನು 24 ಗಂಟೆಗಳಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕು,ಆದರೆ ಎನ್ಎಸ್ಎ ವ್ಯಕ್ತಿಯ ಈ ಸಂವಿಧಾನಾತ್ಮಕ ಹಕ್ಕನ್ನು ಕಿತ್ತುಕೊಳ್ಳುತ್ತದೆ. ಎನ್ಎಸ್ಎ ಅಡಿ ಬಂಧಿತ ವ್ಯಕ್ತಿಗೆ ಕ್ರಿಮಿನಲ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸುವ ಹಕ್ಕೂ ಇಲ್ಲ.

ಎನ್ಎಸ್ಎ ಅಡಿ ಯಾವಾಗ ಬಂಧಿಸಲಾಗುತ್ತದೆ? 

ಯಾವುದೇ ವ್ಯಕ್ತಿಯು ಭಾರತದ ರಕ್ಷಣೆ,ವಿದೇಶಗಳೊಂದಿಗೆ ಭಾರತದ ಸಂಬಂಧಗಳು ಅಥವಾ ಭಾರತದ ಭದ್ರತೆಗೆ ಧಕ್ಕೆಯನ್ನುಂಟು ಮಾಡುವ ಕೃತ್ಯದಲ್ಲಿ ತೊಡಗುವುದನ್ನು ತಡೆಯಲು ಆತನ ವಿರುದ್ಧ ಎನ್ಎಸ್ಎ ಹೇರಬಹುದಾಗಿದೆ. ಸಾರ್ವಜನಿಕ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವುದನ್ನು ಹಾಗು ಸಮಾಜಕ್ಕೆ ಅಗತ್ಯವಾದ ಪೂರೈಕೆಗಳು ಮತ್ತು ಸೇವೆಗಳಿಗೆ ಅಡ್ಡಿಯನ್ನುಂಟು ಮಾಡುವುದನ್ನು ತಡೆಯಲೂ ವ್ಯಕ್ತಿಯ ವಿರುದ್ಧ ಎನ್ಎಸ್ಎ ಅನ್ವಯಿಸಬಹುದಾಗಿದೆ.
ಕಾಯ್ದೆಯಡಿ ಯಾವುದೇ ವ್ಯಕ್ತಿಯನ್ನು ಆತನ ವಿರುದ್ಧ ಆರೋಪವಿಲ್ಲದೆ ಗರಿಷ್ಠ 12 ತಿಂಗಳುಗಳ ಕಾಲ ಬಂಧನದಲ್ಲಿರಿಸಬಹುದು. ವಿಶೇಷ ಸಂದರ್ಭಗಳಲ್ಲಿ ವ್ಯಕ್ತಿಗೆ ಆತನ ವಿರುದ್ಧದ ಆರೋಪಗಳನ್ನು ತಿಳಿಸದೆ 10-12 ದಿನಗಳ ಕಾಲ ವಶದಲ್ಲಿಟ್ಟುಕೊಳ್ಳಬಹುದು.

ಕಾಯ್ದೆಯಡಿ ಸಿಗುವ ರಕ್ಷಣೆಯೇನು?

ಸಂವಿಧಾನದ ವಿಧಿ 22 ಮುನ್ನೆಚ್ಚರಿಕೆ ಅಥವಾ ತಡೆಗಟ್ಟುವ ಬಂಧನ ಮತ್ತು ಕೆಲವು ಪ್ರಕರಣಗಳಲ್ಲಿ ಬಂಧನದ ವಿರುದ್ಧ ರಕ್ಷಣೆ ಹಕ್ಕು ಎರಡನ್ನೂ ಅವಕಾಶವನ್ನು ಕಲ್ಪಿಸಿದೆ. ಆದರೆ ಬಂಧಿತ ವ್ಯಕ್ತಿಗೆ ಲಭ್ಯ ಹಕ್ಕುಗಳು ಮುನ್ನೆಚ್ಚರಿಕೆ ಬಂಧನದ ಪ್ರಕರಣಗಳಲ್ಲಿ ಅನ್ವಯಿಸುವುದಿಲ್ಲ ಎಂದು ವಿಧಿ 22(3) ಹೇಳುತ್ತದೆ.
ಎನ್ಎಸ್ಎ ಅಡಿ ಒಂದು ಪ್ರಮುಖ ಪ್ರಕ್ರಿಯಾತ್ಮಕ ಸುರಕ್ಷತೆಯನ್ನು ವಿಧಿ 22(5) ಒದಗಿಸಿದೆ. ಎಲ್ಲ ಬಂಧಿತ ವ್ಯಕ್ತಿಗಳು ಸ್ವತಂತ್ರ ಸಲಹಾ ಮಂಡಳಿಯ ಮುಂದೆ ಅಹವಾಲು ಸಲ್ಲಿಸಲು ಹಕ್ಕು ಹೊಂದಿರುತ್ತಾರೆ. ಮಂಡಳಿಯು ಮೂವರು ಸದಸ್ಯರನ್ನು ಹೊಂದಿದ್ದು,ಉಚ್ಚ ನ್ಯಾಯಾಲಯದ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಕಳೆದ ಮೂರು ವರ್ಷಗಳಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಂದಿದ್ದ ಎಲ್ಲ 120 ಪ್ರಕರಣಗಳಲ್ಲಿ ಸಲಹಾ ಮಂಡಳಿಯು ಬಂಧನವನ್ನು ಎತ್ತಿ ಹಿಡಿದಿತ್ತು ಎನ್ನುವುದನ್ನು ಇಲ್ಲಿ ಗಮನಿಸಬಹುದು.

ಬಂಧನದ ಆದೇಶವನ್ನು ಹೊರಡಿಸುವ ಜಿಲ್ಲಾ ದಂಡಾಧಿಕಾರಿಗಳು ಎನ್ಎಸ್ಎ ಅಡಿ ರಕ್ಷಣೆಯನ್ನು ಹೊಂದಿರುತ್ತಾರೆ. ಅವರ ವಿರುದ್ಧ ಯಾವುದೇ ಕಾನೂನು ಕ್ರಮವನ್ನು ಜರುಗಿಸುವುದು ಸಾಧ್ಯವಿಲ್ಲ. ಹೀಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯು ಏಕೈಕ ಲಭ್ಯ ಪರಿಹಾರವಾಗಿದೆ.

ಎನ್ಎಸ್ಎ ವಿರುದ್ಧ ಟೀಕೆ ಏಕೆ?

ಎನ್ಎಸ್ಎ ಅದರ ದುರ್ಬಳಕೆಗಾಗಿ ಮಾನವ ಹಕ್ಕು ಗುಂಪುಗಳಿಂದ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ. ಅದು ಸಂವಿಧಾನದ ವಿಧಿ 22 ಮತ್ತು ಬಂಧಿತ ವ್ಯಕ್ತಿಯ ಹಿತಾಸಕ್ತಿಗಳನ್ನು ರಕ್ಷಿಸುವ ಸಿಆರ್ಪಿಸಿ ನಿಬಂಧನೆಗಳನ್ನು ಉಲ್ಲಂಘಿಸಿದೆ,ರಾಜಕೀಯ ವಿರೋಧಿಗಳು ಅಥವಾ ಸರಕಾರದ ಟೀಕಾಕಾರರ ಧ್ವನಿಯಡಗಿಸಲು ಆಗಾಗ್ಗೆ ಅಧಿಕಾರಿಗಳು ಈ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವು ಪ್ರತಿಪಾದಿಸಿವೆ. 

ಕಾಯ್ದೆಯನ್ನು ರದ್ದುಗೊಳಿಸಬೇಕು ಅಥವಾ ಅದರ ದುರ್ಬಳಕೆಯನ್ನು ತಡೆಯಲು ತಿದ್ದುಪಡಿಗಳನ್ನು ತರಬೇಕು ಎಂದೂ ಅವು ಆಗ್ರಹಿಸಿವೆ.

Similar News