​ವಾಮಂಜೂರು: ಅಣಬೆ ಉತ್ಪಾದನಾ ಘಟಕದ ಮುಂದೆ ಪ್ರತಿಭಟನೆ; ಘಟಕದ ಗೇಟಿಗೆ ಬೀಗ ಜಡಿದ ಅಧಿಕಾರಿಗಳು

Update: 2023-03-21 18:10 GMT

ಮಂಗಳೂರು: ನಗರ ಹೊರವಲಯದ ವಾಮಂಜೂರಿನಲ್ಲಿರುವ ಅಣಬೆ ಉತ್ಪಾದನಾ ಘಟಕದಿಂದ ದುರ್ವಾಸನೆ ಬರುತ್ತಿದೆ ಮತ್ತು ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಉತ್ಪಾದನಾ ಘಟಕದ ಮುಂದೆ  ಮಂಗಳವಾರ ಪ್ರತಿಭಟನೆ ನಡೆಸಿದರು. ಅದಕ್ಕೂ ಮುನ್ನ ವಾಮಂಜೂರಿನಲ್ಲಿರುವ ಮಹಾನಗರ ಪಾಲಿಕೆಯ ಉಪ ಕಚೇರಿ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

ಘಟಕವು ಜನವಸತಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಚಾಕಲೇಟ್ ಫ್ಯಾಕ್ಟರಿ ಎನ್ನುತ್ತಾ ಆರಂಭಗೊಂಡ ಸಂಸ್ಥೆಯು ಅಣಬೆಯನ್ನು ಉತ್ಪಾದಿಸುತ್ತಿದೆ. ಬೈಹುಲ್ಲನ್ನು ಸಂಸ್ಕರಿಸುವುದರಿಂದ ವಾಸನೆ ಬರುತ್ತಿವೆ. ವಾಮಂಜೂರು, ಅಂಬೇಡ್ಕರ್ ನಗರ, ತೊಪಕಲ್ಲು, ಜ್ಯೋತಿನಗರ, ಪರಾರಿ, ಕೊಳಕೆಬೈಲು, ಅಮೃತನಗರ, ದೇವಿಪ್ರಸಾದ್ ಕಾಂಪೌಂಡು, ತಿರುವೈಲು,  ಕಲರೈಕೋಡಿ ಕಡೆಗಳಿಗೆ ಇದು ವ್ಯಾಪಿಸುತ್ತಿದೆ. ಈಗಾಗಲೆ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಘಟಕದ ಸುತ್ತಮುತ್ತ ಧಾರ್ಮಿಕ ಕೇಂದ್ರಗಳು, ಸರಕಾರಿ ಶಾಲೆ, ಭಜನಾ ಮಂದಿರ, ಆಶ್ರಯ ಕಾಲನಿಗಳ ಸಹಿತ ನೂರಾರು ಮನೆಗಳಿವೆ. ಇದರ ವಿರುದ್ಧ ಹಲವು ಬಾರಿ ಧ್ವನಿ ಎತ್ತಿದ್ದರೂ ಸಂಸ್ಥೆ ಕಾರ್ಯಾಚರಣೆ ಮುಂದುವರಿಸಿದೆ. ಘಟಕವನ್ನು ಮುಚ್ಚಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಸ್ಥಳಕ್ಕೆ ಆಗಮಿಸಿದ ನಗರ ಪಾಲಿಕೆಯ ಆರೋಗ್ಯ ಇನ್‌ಸ್ಪೆಕ್ಟರ್ ಅರುಣ್ ಮತ್ತು ಪರಿಸರ ಇಂಜಿನಿಯರ್ ಸುಶಾಂತ್ ಸಾರ್ವಜನಿಕರ ಅಹವಾಲು ಆಲಿಸಿ ಘಟಕದ ಗೇಟಿಗೆ ಬೀಗ ಜಡಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಡಾ. ರವಿ ಕೂಡ ಸ್ಥಳಕ್ಕೆ ಭೇಟಿ ನೀಡಿದರಲ್ಲದೆ ಘಟಕದ ಒಳಗೆ ತೆರಳಿ ಪರಿಶೀಲಿಸಿದರು. ಮೂರು ತಿಂಗಳೊಳಗೆ ದುರ್ವಾಸನೆ ತಡೆಯಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಪ್ರತಿಭಟನೆ ನೇತೃತ್ವವನ್ನು ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್, ಸ್ಥಳೀಯ ಪ್ರಮುಖರಾದ ಜಗದೀಶ್ ಶೇಣವ, ರಘು ಸಾಲ್ಯಾನ್, ಲಕ್ಷ್ಮಣ ಶೆಟ್ಟಿಗಾರ್, ಶ್ರೀನಿವಾಸ ಮಲ್ಲೂರು, ಜಯಪ್ರಭ, ಕಿರಣ್ ಆಶ್ರಯನಗರ, ಹರಿಪ್ರಸಾದ್, ರಿಯಾಝ್, ರವಿ, ಜಯಂತಿ ವಾಮಂಜೂರು ವಹಿಸಿದ್ದರು.

Similar News