ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟ ಅನುಭವಿಸಿದ ಕೇಂದ್ರ ಸಾರ್ವಜನಿಕ ಕ್ಷೇತ್ರದ ಉದ್ಯಮಗಳು

Update: 2023-03-23 11:40 GMT

ಹೊಸದಿಲ್ಲಿ: ವಿತ್ತ ಸಚಿವಾಲಯವು ಒದಗಿಸಿರುವ ಮಾಹಿತಿಯಂತೆ ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸಾರ್ವಜನಿಕ ಕ್ಷೇತ್ರದ ಉದ್ಯಮ (ಸಿಪಿಎಸ್ಇ)ಗಳು 1.5 ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟವನ್ನು ಅನುಭವಿಸಿವೆ.

ಸಹಾಯಕ ವಿತ್ತಸಚಿವ ಭಾಗವತ ಕರಾಡ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ, 2021-22ರ ಅಂತ್ಯದಲ್ಲಿ 248 ಸಿಪಿಎಸ್ಇಗಳು ಕಾರ್ಯ ನಿರ್ವಹಿಸುತ್ತಿದ್ದವು ಮತ್ತು 2017-18ರಲ್ಲಿ 72 ಸಿಪಿಎಸ್ಇಗಳು ನಷ್ಟದಲ್ಲಿದ್ದವು. ಇಂತಹ ಸಿಪಿಎಸ್ಇಗಳ ಸಂಖ್ಯೆ 2018-19ರಲ್ಲಿ 69ಕ್ಕೆ ತಗ್ಗಿತ್ತಾದರೂ,2019-20ರಲ್ಲಿ ಮತ್ತೆ 84ಕ್ಕೆ ಏರಿಕೆಯಾಗಿತ್ತು ಎಂದು ತಿಳಿಸಿದರು.

ಆಗಿನಿಂದ ನಷ್ಟದಲ್ಲಿರುವ ಸಿಪಿಎಸ್ಇಗಳ ಸಂಖ್ಯೆ ತಗ್ಗಿದೆ. 2020-21ರಲ್ಲಿ 76ಕ್ಕೆ ಮತ್ತು 2021-22ರಲ್ಲಿ 59ಕ್ಕೆ ಇಳಿಕೆಯಾಗಿದೆ. ಈ ಕಂಪನಿಗಳು 2019-20ರಲ್ಲಿ 44,239 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದ್ದವಾದರೂ ಕಳೆದ ವರ್ಷ ಅದು 15,586 ಕೋ.ರೂ.ಗಳಿಗೆ ತಗ್ಗಿದೆ.

2017-18ರಿಂದ 2021-22ರವರೆಗಿನ ಐದು ವರ್ಷಗಳಲ್ಲಿ ಸಿಪಿಎಸ್ಇಗಳು ಒಟ್ಟು 1.54 ಲಕ್ಷ ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿವೆ ಎನ್ನುವುದನ್ನು ಸಚಿವರು ಒದಗಿಸಿರುವ ಮಾಹಿತಿಯು ತೋರಿಸಿದೆ.

ಸಿಪಿಎಸ್ಇಗಳ ಚೇತರಿಕೆಗಾಗಿ ಆಯಾ ಆಡಳಿತ ಮಂಡಳಿಗಳು ಮತ್ತು ಆಡಳಿತಾತ್ಮಕ ಸಚಿವಾಲಯಗಳು/ಇಲಾಖೆಗಳು ಉದ್ಯಮ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿವೆ. ಉದ್ಯಮ ಪುನರ್ರಚನೆ,ಜಂಟಿ ಉದ್ಯಮಗಳ ಸ್ಥಾಪನೆ,ಆಧುನೀಕರಣ ಮತ್ತು ಸುಧಾರಿತ ಮಾರಾಟ ಕಾರ್ಯತಂತ್ರ ಇತ್ಯಾದಿಗಳು ಈ ಕ್ರಮಗಳಲ್ಲಿ ಸೇರಿವೆ. ಸರಕಾರವು ಫೆಬ್ರವರಿ 2021ರಲ್ಲಿ ನೂತನ ಸಾರ್ವಜನಿಕ ಕ್ಷೇತ್ರ ಉದ್ಯಮ (ಪಿಎಸ್ಇ) ನೀತಿಯನ್ನೂ ಅಧಿಸೂಚಿಸಿದ್ದು,ಅದರ ಪ್ರಕಾರ ಕೆಲವು ಮಾನದಂಡಗಳನ್ನು ಆಧರಿಸಿ ಸಿಪಿಎಸ್ಇಗಳನ್ನು ವ್ಯೂಹಾತ್ಮಕ ಮತ್ತು ವ್ಯೂಹಾತ್ಮಕವಲ್ಲದ ಉದ್ಯಮಗಳು ಎಂದು ವರ್ಗೀಕರಿಸಲಾಗಿದೆ. ಹೀಗಾಗಿ ಸಿಪಿಎಸ್ಇಗಳನ್ನು ನೂತನ ಪಿಎಸ್ಇ ನೀತಿಯ ನಿಬಂಧನೆಗಳ ಪ್ರಕಾರ ಮಾತ್ರ ನಿರ್ವಹಿಸಬೇಕಿದೆ ಎಂದು ಕರಾಡ್ ತಿಳಿಸಿದರು.

ನೂತನ ಪಿಎಸ್ಇ ನೀತಿಯಂತೆ ಸಿಪಿಎಸ್ಇಗಳು ಅಣುಶಕ್ತಿ, ಬಾಹ್ಯಾಕಾಶ ಮತ್ತು ರಕ್ಷಣೆ; ಸಾರಿಗೆ ಮತ್ತು ದೂರಸಂಪರ್ಕ; ವಿದ್ಯುತ್,  ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳು; ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವೆಗಳು ಈ ನಾಲ್ಕು ವ್ಯೆಹಾತ್ಮಕ ಕ್ಷೇತ್ರಗಳಲ್ಲಿ ಕನಿಷ್ಠ ಉಪಸ್ಥಿತಿಯನ್ನು ಹೊಂದಿರಲಿವೆ. ಇತರ ಕ್ಷೇತ್ರಗಳಲ್ಲಿಯ ಸಿಪಿಎಸ್ಇಗಳನ್ನು ಖಾಸಗೀಕರಣ, ವಿಲೀನಗೊಳಿಸಲಾಗುತ್ತದೆ ಅಥವಾ ಅವುಗಳನ್ನು ಮುಚ್ಚುವುದನ್ನು ಪರಿಗಣಿಸಲಾಗುತ್ತದೆ.

Similar News