ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬ್ರಿಟಿಷರ ಕಾಲದ ಕಾಯ್ದೆ ಜಾರಿ: ಸಿಐಟಿಯು ನಾಯಕ ಸುರೇಶ್ ಕಲ್ಲಾಗರ

ಕುಂದಾಪುರದಲ್ಲಿ ಕೈಗಾರಿಕಾ ಮುಷ್ಕರ

Update: 2023-03-23 13:44 GMT

ಕುಂದಾಪುರ, ಮಾ.23: ಸ್ವಾತಂತ್ರ್ಯಕ್ಕೂ ಮುನ್ನ ಬ್ರಿಟಿಷರು ಭಾರತದಲ್ಲಿ ಜಾರಿ ಮಾಡಿದ್ದ ಕಾರ್ಮಿಕ ಹಕ್ಕುಗಳ ಧಮನದ ಲೇಬರ್ ಡಿಸ್ಪ್ಯುಟ್ ಕಾಯ್ದೆಯನ್ನು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರಕಾರಗಳು ಜಾರಿಗೊಳಿಸುತ್ತಿವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆರೋಪಿಸಿದ್ದಾರೆ.

‘ಕೈಗಾರಿಕಾ ಕಾಯ್ದೆ-2023’ರ ವಿಧೇಯಕ ಹಾಗೂ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸುವ ಕಾಯ್ದೆ ವಿರುದ್ಧ ರಾಜ್ಯವ್ಯಾಪಿ ನಡೆದಿರುವ ಮುಷ್ಕರದ ಅಂಗವಾಗಿ ಕುಂದಾಪುರದ ನಗರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಹೇಳಿದರು.

ಬಿಜೆಪಿ ಆಡಳಿತದ ರಾಜ್ಯ ಸರಕಾರವು 1948 ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ಮಾಡಿ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಳ ಮಾಡಿ ಜಾರಿ ಮಾಡಿರುವುದು, ಬಿಜೆಪಿ ಸರಕಾರ ಕಾರ್ಮಿಕ ವಿರೋಧಿ ಎಂಬುದನ್ನು ಸಾಬೀತು ಪಡೆಸಿದೆ ಎಂದು ಸುರೇಶ್ ಕಲ್ಲಾಗರ ಟೀಕಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರು 1929ರಲ್ಲಿ ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಕಾರ್ಮಿಕ ವಿರೋಧಿ ಕಾಯ್ದೆ ಅಂಗೀಕರಿಸಲು ಮುಂದಾದಾಗ ಭಗತ್ ಹಾಗೂ ಬಟುಕೇಶ್ವರ ದತ್ತಾ ಅವರು ಕಾಯ್ದೆ ಜಾರಿಗೊಳ್ಳದಂತೆ ಮಾಡಲು ಹುಸಿ ಬಾಂಬ್ ಸ್ಫೋಟಿಸಿ ವಿರೋಧಿಸಿದರು. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಅಧಿಕಾರ ಮಾಡುತ್ತಿರುವ ಬಿಜೆಪಿ ಪಕ್ಷವು ಬ್ರಿಟಿಷರ ಕಾಯ್ದೆಯನ್ನು ಕಾರ್ಮಿಕರ ಮೇಲೆ ಜಾರಿ ಮಾಡಿ ಶೋಷಣೆಗೆ ಅವಕಾಶ ನೀಡಿದೆ ಎಂದು ಕಲ್ಲಾಗರ ಆಪಾದಿಸಿದರು.

ಸಿಐಟಿಯು ಮುಖಂಡ ಎಚ್. ನರಸಿಂಹ ಮಾತನಾಡಿ, ಕಾರ್ಖಾನೆ ಕಾಯ್ದೆ ತಿದ್ದುಪಡಿಯು ಕಾರ್ಮಿಕರನ್ನು ವಿಶ್ರಾಂತಿ ಇಲ್ಲದೇ ಗುಲಾಮರಂತೆ, ಯಂತ್ರದಂತೆ ದುಡಿಸಿಕೊಳ್ಳಲು ಮಾಲಕರಿಗೆ ಅವಕಾಶ ನೀಡಿದೆ. ಇದು ಸಾಮಾಜಿಕ ಮತ್ತು ಆರ್ಥಿಕವಾಗಿ ಸಮಾಜದ ಮೇಲೆ ದುಷ್ಪರಿಣಾಮ ಬೀರಲಿದ್ದು, ನಿರುದ್ಯೋಗ ಉಲ್ಬಣಗೊಳ್ಳಲಿದೆ ಎಂದು ಎಚ್ಚರಿಸಿದರು.

ಸಿಐಟಿಯು ಸಂಚಾಲಕ ಚಂದ್ರಶೇಖರ ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳುವ ಕಾಯ್ದೆ ಜಾರಿಯಿಂದ ಅವರನ್ನು ಉದ್ಯೋಗದಿಂದ ಹೊರದೂಡಿ ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಲೆ ಏರಿಕೆಯನ್ನು ತಡೆಯಲಾಗದ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೇರಲು ಬಂಡವಾಳ ಶಾಹಿಗಳನ್ನು ಸಂತುಷ್ಟಗೊಳಿಸಿ ಆ ಮೂಲಕ ಲಾಭ ಪಡೆಯುವ ಚುನಾವಣಾ ಗಿಮಿಕ್ ಎಂದು ಹೇಳಿದರು.

ಪ್ರತಿಭಟನೆಗೂ ಮುನ್ನ ನೂರಾರು ಕಾರ್ಮಿಕರು ನಗರದ ಬೀದಿಗಳಲ್ಲಿ  ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಮಹಾಬಲ ವಡೇರ ಹೋಬಳಿ, ಬಲ್ಕೀಸ್, ಪಂಜು ಪೂಜಾರಿ, ಸುರೇಂದ್ರ, ಲಕ್ಷ್ಮಣ, ಗಣಪ, ಚಂದ್ರ ಮೊದಲಾದವರಿದ್ದರು. ಪ್ರಕಾಶ್ ಕೋಣಿ ವಂದಿಸಿದರು.

"ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ, ಎಂಟು ಗಂಟೆ ನಿದ್ದೆ ಎಂಬ ವೈಜ್ಞಾನಿಕ ಕಾಯ್ದೆಗೆ, ಬಿಜೆಪಿ ಸರಕಾರ ತಂದ ಕಾರ್ಮಿಕ ವಿರೋಧಿ ಕಾಯ್ದೆ ತಿಲಾಂಜಲಿ ನೀಡಿದೆ".
-ಎಚ್.ನರಸಿಂಹ, ಸಿಐಟಿಯು ಮುಖಂಡ.

Similar News