ಬೆಂಗಳೂರು | ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ: ಪಿಎಸ್ಸೈ ಸೇರಿ ನಾಲ್ವರು ಅಮಾನತು

Update: 2023-03-24 11:24 GMT

ಬೆಂಗಳೂರು, ಮಾ.24: ಹಣಕ್ಕಾಗಿ ಅಪಹರಿಸಿ 45 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಪ್ರಕರಣ ಸಂಬಂಧ ಪೊಲೀಸ್ ಇನ್ಸ್ ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿಯನ್ನು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ಮಾರತ್ತಹಳ್ಳಿ ಠಾಣೆಯ ಪಿಎಸ್ಸೈ ರಂಗೇಶ್, ಹೆಡ್ ಕಾನ್‍ಸ್ಟೇಬಲ್‍ಗಳಾದ ಹರೀಶ್, ಮಹದೇವ್ ಹಾಗೂ ಮಹೇಶ್ ಎಂಬುವವರನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರ ಸೂಚನೆ ಮೇರೆಗೆ ಅಮಾನತು ಮಾಡಲಾಗಿದೆ. 

ಆರೋಪಿ ರಾಮಾಂಜನೇಯ ಹುಲಿ ಚರ್ಮ ಹಾಗೂ ಉಗುರು ಮಾರಾಟಕ್ಕೆ ಯತ್ನಿಸಿದ್ದಾನೆ. ಈತನ ಸಹಚರ ಸಿದ್ದಮಲ್ಲಪ್ಪ ಎಂಬಾತ ಪೊಲೀಸ್ ಬಾತ್ಮೀದಾರರಾಗಿದ್ದ ಶಬ್ಬೀರ್ ಹಾಗೂ ಝಾಕೀರ್ ಗೆ  ಹುಲಿ ಚರ್ಮ, ಉಗುರು ಮಾರಾಟದ ಬಗ್ಗೆ ಮಾಹಿತಿ ನೀಡಿದ್ದನು. ಈ ಮಾಹಿತಿಯನ್ನು ಶಬ್ಬೀರ್ ಪಿಎಸ್ಸೈ ರಂಗೇಶ್ ತಂಡಕ್ಕೆ ನೀಡಿದ್ದಾನೆ. ಅದರಂತೆ ಕಾರ್ಯಾಚರಣೆ ನಡೆಸಿ ರಾಮಾಂಜನೇಯನ ಬಳಿಯಿದ್ದ ಬ್ಯಾಗ್ ಸಮೇತ ಪೊಲೀಸರು ಮಾಲು ಜಪ್ತಿ ಮಾಡಿದ್ದರು.

ತದನಂತರ, ಪರಿಶೀಲನೆ ನಡೆಸಿದಾಗ ಅದು ನಕಲಿ ಹುಲಿ ಚರ್ಮ ಹಾಗೂ ಉಗುರು ಎಂದು ಕಂಡುಬಂದಿತ್ತು.ನಕಲಿ ಚರ್ಮ, ಉಗುರು ಎಂದು ತಿಳಿಯುತ್ತಿದ್ದಂತೆ ಕೋಪಗೊಂಡ ಪಿಎಸ್ಸೈ ರಂಗೇಶ್ ಆರೋಪಿಗಳನ್ನು ಠಾಣೆಗೆ ಕರೆದೊಯ್ಯದೇ ಕಾರಿನಲ್ಲಿಯೇ ಸುತ್ತಾಡಿಸಿದ್ದಾರೆ. ಎರಡು ದಿನಗಳ ಬಳಿಕ ಮಾರತ್‍ಹಳ್ಳಿ ಠಾಣೆ ಪಕ್ಕದ ಮನೆಯೊಂದರಲ್ಲಿ ಕೂಡಿಹಾಕಿ ರಾಮಾಂಜನೇಯ ತಂದೆಗೆ ರಂಗೇಶ್ ಕರೆ ಮಾಡಿ ನಿಮ್ಮ ಮಗನ ವಿರುದ್ಧ ಪ್ರಕರಣ ದಾಖಲಿಸದೇ ಇರಲು 45 ಲಕ್ಷ ರೂ ನೀಡಬೇಕೆಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಮಗನನ್ನು ಅಪಹರಿಸಿದ್ದಾರೆ ಎಂದು ಎಂ.ಶಿವರಾಮಯ್ಯ ಬಾಗಲೂರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ್ವಯ ಕಾರ್ಯಾಚರಣೆ ನಡೆಸಿದಾಗ ಪೊಲೀಸರು ಸಿಕ್ಕಿಬಿದ್ದಿದ್ದಾರೆ.

Similar News