ಯಾವುದೇ ಕಾರಣಕ್ಕೂ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಾರದು ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ: ಬಿ.ವೈ.ವಿಜಯೇಂದ್ರ

Update: 2023-03-24 11:55 GMT

ಬೆಂಗಳೂರು, ಮಾ.24: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೆ ಕಾರಣಕ್ಕೂ ಅತಂತ್ರ ವಿಧಾನಸಭೆ ಸೃಷ್ಟಿಯಾಗಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. 

ಶುಕ್ರವಾರ ಮಾಜಿ ಸಿಎಂ ಯಡಿಯೂರಪ್ಪನವರ ಸರಕಾರಿ ನಿವಾಸ ‘ಕಾವೇರಿ’ಯಲ್ಲಿ ಅಮಿತ್ ಶಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಮತ್ತು ಅಮಿತ್ ಶಾ ನಡುವೆ ರಾಜಕಾರಣದ ಹೊರತು ಬೇರೆ ಯಾವ ವಿಷಯವು ಚರ್ಚೆಯಾಗುವುದಿಲ್ಲ. ಇವತ್ತು ಸಹ ರಾಜಕಾರಣದ ವಿಚಾರವೆ ಚರ್ಚೆಯಾಗಿದೆ ಎಂದರು.

ಅಮಿತ್ ಶಾ ತಮ್ಮ ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಯಡಿಯೂರಪ್ಪನವರ ಆಹ್ವಾನದ ಮೇರೆಗೆ ಉಪಹಾರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಕುರಿತು ನಾಯಕರೊಂದಿಗೆ ಚರ್ಚೆ ನಡೆಸಿದರು ಎಂದು ವಿಜಯೇಂದ್ರ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಯಡಿಯೂರಪ್ಪ ಸೇರಿದಂತೆ ನಾಯಕರೂ ಈ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರು ಎಂದು ಅವರು ತಿಳಿಸಿದರು.

ಯಡಿಯೂರಪ್ಪನವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂಬುದೆಲ್ಲ ತಪ್ಪು ಕಲ್ಪನೆ, ಯಾರು ಅವರನ್ನು ಕಡೆಗಣಿಸಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಹೇಗಿದ್ದರೋ, ಇವತ್ತಿಗೂ ಅದೇ ರೀತಿ ಇದ್ದಾರೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಅಮಿತ್ ಶಾ ನನ್ನ ಬೆನ್ನುತಟ್ಟಿ ಪ್ರೀತಿಯಿಂದ ಮಾತನಾಡಿಸಿದ್ದು ನನಗೆ ಆನೆ ಬಲ ಬಂದಂತೆ ಆಗಿದೆ. ಬೆನ್ನುತಟ್ಟಿದ ಸದ್ದು ಯಾರ ಕಿವಿಗೆ ಹೇಗೆ ತಲುಪಬೇಕೋ ಹಾಗೆ ತಲುಪಿದೆ. ಮುಂದಿನ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಚಿಂತನೆ ಇಲ್ಲ. ಶಿಕಾರಿಪುರ ಕ್ಷೇತ್ರದ ಜನತೆ, ಮತದಾರರ ಅಭಿಪ್ರಾಯದಂತೆ ನಾನು ಅಲ್ಲಿ ಸ್ಪರ್ಧೆ ಮಾಡಲು ಬಯಸಿದ್ದು, ಕೇಂದ್ರ ನಾಯಕರು ಎಲ್ಲಿ ಸೂಚನೆ ಕೊಡುತ್ತಾರೋ ಅಲ್ಲಿ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿಯನ್ನು ಸಚಿವ ವಿ.ಸೋಮಣ್ಣ ಅವರಿಗೆ ಹೈಕಮಾಂಡ್ ನೀಡಿದೆ. ಸೋಮಣ್ಣ ಹಿರಿಯ ನಾಯಕರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿಯೂ ಆಗಿದ್ದಾರೆ. ಅಮಿತ್ ಶಾ ಅವರು ಆ ಜಿಲ್ಲೆಯಲ್ಲಿ ಸೋಮಣ್ಣಗೆ ಕೆಲಸ ಮಾಡಲು ಹೇಳಿದ್ದರೆ ಅದಕ್ಕೆ ಏನಾದರೂ ಕಾರಣ ಇರುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

Similar News