ಪರಿಸರ ಸಂರಕ್ಷಣೆಗೆ ಮತ್ತಷ್ಟು ಕಠಿಣ ರೀತಿಯ ಕಾನೂನು ಅಗತ್ಯ: ಸಚಿವ ಆನಂದ್ ಸಿಂಗ್
ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ 10 ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ
ಬೆಂಗಳೂರು, ಮಾ.24: ಪರಿಸರ ಸಂರಕ್ಷಣೆಗೆ ಮತ್ತಷ್ಟು ಕಠಿಣ ರೀತಿಯ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಬಳಿಕ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಯಲ್ಲಿ ಅತ್ಯಂತ ಕಠಿಣ ಕಾನೂನುಗಳಿದ್ದು, ಯಾರಾದರೂ ಅರಣ್ಯ ಭೂಮಿ ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ರಾಸಾಯನಿಕಗಳನ್ನು ಹೊರ ಹಾಕುವ ಕಾರ್ಖಾನೆಗಳಿಗೆ ಒಮ್ಮೆ ಮಂಡಳಿ ನೋಟಿಸ್ ನೀಡಿ, ನಂತರ ಕ್ರಮಕೈಗೊಳ್ಳುವ ಕೆಲಸವಾಗುತ್ತಿದೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ಕೆಲಸವಾಗಬೇಕು. ಹೀಗಾಗಿ ಪರಿಸರ ಮಾಲಿನ್ಯ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇದರಿಂದ ಪರಿಸರ ಮಲಿನ ಮಾಡುವ ಕಾರ್ಖಾನೆಗಳಿಗೆ ಕಾನೂನಿನ ಭಯ ಬರುತ್ತದೆ. ಈ ಮೂಲಕ ಪರಿಸರಕ್ಕೆ ಧಕ್ಕೆಯಾಗುವುದನ್ನು ತಡೆಯಬಹುದು ಎಂದು ಅವರು ತಿಳಿಸಿದರು.
ಇದೇ ವೇಳೆ ಕಠಿಣ ಕಾನೂನು ಜಾರಿಗೆ ತರುವ ಸಂಬಂಧ ಕೇಂದ್ರ ಪರಿಸರ ಇಲಾಖೆಗೆ ವಿಸ್ತೃತವಾದ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ಆನಂದ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.
ಇತ್ತೀಚಿನ ಎರಡು ವರ್ಷದಲ್ಲಿ ಮಂಡಳಿ ವತಿಯಿಂದ ಪರಿಸರ ಮಾಲಿನ್ಯ ತಡೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ವಿದ್ಯುತ್ ಚಾಲಿತ ವಾಹನಗಳ ನೀತಿ ರೂಪಿಸಿವೆ. ಹೀಗಾಗಿ ಮಂಡಳಿಯ ಕಚೇರಿ ಉಪಯೋಗಕ್ಕಾಗಿ ಹಾಲಿ ಬಳಕೆಯಲ್ಲಿರುವ ಡಿಸೇಲ್ ಅಥವಾ ಪೆಟ್ರೋಲ್ ವಾಹನಗಳಿಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಉಪಯೋಗಿಸಲು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 10 ವಿದ್ಯುತ್ ಚಾಲಿತ ವಾಹನಗಳಿಗೆ ಚಾಲನೆ ನೀಡಲಾಗಿದೆ. ಬೇರೆ-ಬೇರೆ ಇಲಾಖೆ ಹಾಗೂ ಸರಕಾರದ ಪ್ರತಿಯೊಂದು ಕಚೇರಿಯಲ್ಲಿ ಇಂತಹ ವಿದ್ಯುತ್ ಚಾಲಿತ ವಾಹನಗಳ ಬಳಕೆಯಿಂದ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಆನಂದ್‍ಸಿಂಗ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್, ಮಂಡಳಿ ಅಧ್ಯಕ್ಷ ಡಾ.ಶಾಂತ್ ಎ.ತಿಮ್ಮಯ್ಯ, ಸದಸ್ಯ ಕಾರ್ಯದರ್ಶಿ ಎಚ್.ಸಿ.ಗಿರೀಶ್, ಸಿಐಐ ಅಧಿಕಾರಿಗಳಾದ ವಿಜಯ್ ಕೃಷ್ಣನ್ ವೆಂಕಟೇಶ್, ವೆಂಕಟಗಿರಿ ಉಪಸ್ಥಿತರಿದ್ದರು.
'ಸಿಐಐ ಸಂಸ್ಥೆ ಜೊತೆ ಒಡಂಬಡಿಕೆ'
ಕೈಗಾರಿಕೆಗಳಿಗೆ ಅತ್ಯುತ್ತಮ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಕೈಗಾರಿಕೆಗಳಿಗೆ ಗ್ರೀನ್ ರೇಟಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ವಿನೂತನ ಕಾರ್ಯಕ್ರಮಕ್ಕೆ ಮಂಡಳಿಯು ಕಾನ್‍ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತದೆ. ಈ ರೀತಿಯ ಪರಿಸರ ಪೂರಕ ವ್ಯವಸ್ಥೆ ಅನುಷ್ಠಾನಗೊಳಿಸಲು ಕೈಗಾರಿಕೆಗಳನ್ನು ಸ್ವಯಂ ಪ್ರೇರಿತವಾಗಿ ಪ್ರೇರೆಪಿಸುತ್ತಿರುವುದು ರಾಷ್ಟ್ರದಲ್ಲಿಯೇ ಕರ್ನಾಟಕ ಎರಡನೇ ರಾಜ್ಯವಾಗಿದೆ.
-ಆನಂದ್ ಸಿಂಗ್, ಸಚಿವ
ಸಿದ್ದರಾಮಯ್ಯ ನನ್ನ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸ್ವಾಗತ
ಸಿದ್ದರಾಮಯ್ಯ ಅವರನ್ನು ವಿಜಯನಗರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಅಲ್ಲಿನ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಆನಂದ್‍ಸಿಂಗ್, 224 ಕ್ಷೇತ್ರದಲ್ಲಿ ಯಾರು, ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅದಕ್ಕೆ ವಿರೋಧವಿಲ್ಲ. ಸೋಲು-ಗೆಲುವನ್ನು ಜನತೆ ತೀರ್ಮಾನಿಸುತ್ತಾರೆ ಎಂದರು.