ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಆರೋಪ: ಪ್ರಶಾಂತ್ ಸಂಬರಗಿ ವಿರುದ್ಧ ದೂರು

Update: 2023-03-25 14:33 GMT

ಬೆಂಗಳೂರು:  ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಹಾಗೂ  ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಎಂಬಾತನ ವಿರುದ್ಧ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರಿಗೆ ದೂರು ಸಲ್ಲಿಕೆಯಾಗಿದೆ. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವ ವಿಚಾರವನ್ನು ಇಟ್ಟುಕೊಂಡು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಬಗ್ಗೆ ಪ್ರಶಾಂತ್ ಸಂಬರಗಿ ಮಾನಹಾನಿಕರ ಪೋಸ್ಟ್ ಹಾಕಿ ತೇಜೋವಧೆ ಮಾಡಲಾಗಿದೆ. ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಜೆಡಿಎಸ್ ನಾಯಕರ ಬಗ್ಗೆ ಅವಹೇಳನಕರ ಪೋಸ್ಟ್ ಪ್ರಕಟಿಸುತ್ತಿದ್ದಾರೆ. ಮಾತ್ರವಲ್ಲದೆ ಧರ್ಮಗಳ ನಡುವೆ, ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದುದರಿಂದ ಪ್ರಶಾಂತ್ ಸಂಬರಗಿಯನ್ನು ಗಡಿಪಾರು ಮಾಡಬೇಕು. ಜತೆಗೆ, ಸಾಮಾಜಿಕ ಜಾಲತಾಣದ ಖಾತೆಗಳನ್ನ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ನೇತೃತ್ವದ ನಿಯೋಗದ ದೂರು ಸಲ್ಲಿಸಿತು. ಈ ಸಂದರ್ಭದಲ್ಲಿ ವಕ್ತಾರ ಗಂಗಾಧರ್ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

ಸಂಬರಗಿ ಫೇಸ್ ಪೋಸ್ಟ್ ನಲ್ಲೇನಿದೆ?:  ʻʻದೇವೇ ಗೌಡ ಕಳ್ಳ ಅನ್ನೋದಕ್ಕೂ, ಗೌಡರು ಅನ್ನೋರೆಲ್ಲ ಕಳ್ಳರೆ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದಕ್ಕೆ ದೇವೇ ಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೇ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿʼʼ ಎಂದು ಸಂಬರಗಿ ಫೇಸ್’ಬುಕ್’ನಲ್ಲಿ ಪ್ರಕಟಿಸಿದ್ದರು. 

Similar News